ಸವಿಯಿರಿ ಸಿವಿಯೆಟ್ ಕಾಫಿ

 ಸವಿಯಿರಿ ಸಿವಿಯೆಟ್ ಕಾಫಿ

Rajesh Naik   ¦    Jan 21, 2021 04:03:21 PM (IST)
 ಸವಿಯಿರಿ ಸಿವಿಯೆಟ್ ಕಾಫಿ
ಆಹಾ ಎಂಥ ಚಳಿ..! ಎಂದು ಹೇಳಿ ಹೋಟೆಲಿಗೆ ಅಥವಾ ಚಿಕ್ಕ ಗೂಡಂಗಡಿಗೆ ಹೋಗಿ ಕಾಫಿ ಕುಡಿಯುವುದು ಸಾಮಾನ್ಯ! ನಗರಗಳಲ್ಲಿ ಚಹಾ ಕುಡಿಯುವವರ ಸಂಖ್ಯೆ ಅಧಿಕವಾಗಿದ್ದರೂ ಕೂಡ ಕಾಫಿ ಪ್ರೇಮಿಗಳು ಇದ್ದಾರೆ. ಸಂಜೆಯಾಗುತ್ತಿದ್ದಂತೆ ಕೆಲವರಿಗೆ ಚಹಾ ಅಥವಾ ಕಾಫಿ ಇಲ್ಲದೇ ಹೋದರೇ ತಮ್ಮ ಮನಸ್ಸಿಗೆ ಏನೋ ಅಸಮಧಾನ. ಅಂತಹ ಹವ್ಯಾಸವುಳ್ಳ ಜನರು ಈ ಒಂದು ವಿಶೇಷ 'ಸಿವಿಯೆಟ್ ಕಾಫಿ' ಯ ಸಂಗತಿ ಕೇಳಲೇಬೇಕು. 'ಸಿವಿಯೆಟ್ ಕಾಫಿ' ಎಂದು ಕರೆಯಲ್ಪಡುವ ಈ ಕಾಫಿಯನ್ನು ಒಂದು ಬೆಕ್ಕಿನ ಮೂಲಕ ಕಾಫಿ ಪುಡಿಯನ್ನು ತಯಾರಿಸುತ್ತಾರೆ. ಇದಕ್ಕೆ 'cat poop coffee' ಮತ್ತು 'coorg luwak coffee' ಎಂದು ಕೂಡಾ ಕರೆಯುತ್ತಾರೆ. ಅಂದ ಹಾಗೆ ಈ ಸಿವಿಯೆಟ್ ಕಾಫಿಯನ್ನು ಪರಿಚಯ ಮಾಡಿಕೊಟ್ಟಿದ್ದು ಬೇರೆ ಯಾವುದೋ ದೇಶ ಅಲ್ಲ. ನಮ್ಮದೇ ಕರ್ನಾಟಕದ ಕೊಡಗನಲ್ಲಿ ಎಂದರೆ ನೀವೆಲ್ಲ ನಂಬಲೇಬೇಕು. 
 
ವಿಶೇಷತೆ:
 
ಬೆಕ್ಕಿನಿಂದ ಕಾಫಿನಾ ಎಂದು ಆಶ್ಚರ್ಯ ಪಡುವವರು ಒಮ್ಮೆ ಈ ವಿಷಯವನ್ನು ನೋಡಿ. ವಿಶ್ವದಲ್ಲಿಯೇ ಅತ್ಯಂತ ದುಬಾರಿಯಾದ ಸಿವಿಯೆಟ್ ಕಾಫಿ ಒಂದು ಬೆಕ್ಕಿನಿಂದ ತಯಾರಾಗುತ್ತದೆ. ಇದು ಸತ್ಯದ ಸಂಗತಿ ಕೂಡ. ಇದರ ಬೆಲೆ 100ಗ್ರಾಮ್ ಗೆ 12,000 ರೂ. ವಿದೇಶಗಳಲ್ಲಿ ಒಂದು ಕೆಜಿಗೆ ಸುಮಾರು 40,000 ದಿಂದ 50,000ರೂ ವರೆಗೆ ಬೆಲೆಯಿದೆ. ನಮ್ಮ ದೇಶದಲ್ಲಿ ಒಂದು ಕೆಜಿ ಕಾಫಿಯ ಬೆಲೆ 20 ರಿಂದ 25 ಸಾವಿರದವರೆಗೆ ಬೆಲೆ ಬಾಳುತ್ತದೆ. 
 
ಬೆಕ್ಕಿನಿಂದ ಕಾಫಿ !??
 
ಈ ಕಾಫಿಗೂ ಬೆಕ್ಕಿಗೂ ಏನು ಸಂಬಂಧ? ಅಂದ ಹಾಗೆ ಇದು ನಮ್ಮ ಮನೆಯಲ್ಲಿ ಸಾಕುವ ಬೆಕ್ಕಿನಿಂದ ತಯಾರು ಆಗುವುದಿಲ್ಲ. ಬದಲಾಗಿ 'ಕಾಡು ಬೆಕ್ಕು' ಅಥವಾ 'ಪುನಗು ಬೆಕ್ಕು' ಎಂದು ಕರೆಯಲ್ಪಡುವ ವಿಶೇಷವಾದ ಬೆಕ್ಕಿನಿಂದ ತಯಾರಿಸಲಾಗುತ್ತದೆ. ಹೇಗಪ್ಪಾ ಎಂದರೆ, ಈ ಪುನಗು ಬೆಕ್ಕುಗಳು ಕಾಫಿ ತೋಟಗಳಿಗೆ ಹೋಗಿ ಅಲ್ಲಿ ಅತ್ಯುತ್ತಮವಾದ ಕಾಫಿ ಹಣ್ಣುಗಳನ್ನು ತಿನ್ನುತ್ತವೆ. ಆದರೆ ಅದರ ಹೊಟ್ಟೆಯಲ್ಲಿ ಆ ಕಾಫಿ ಹಣ್ಣುಗಳು ಜೀರ್ಣವಾಗುವುದಿಲ್ಲ. ಹಾಗೆಯೇ ಕಾಫಿ ಬೀಜಗಳನ್ನು ತಿಂದ ನಂತರ ಜೀರ್ಣಕ್ರಿಯೆಯಲ್ಲಿ ಅದರಲ್ಲಿರುವ ಆಮ್ಲದ ಅಂಶವನ್ನು ಹೊಟ್ಟೆಯಲ್ಲಿಯೇ ಬೇರ್ಪಡಿಸುತ್ತದೆ. ಇದರಲ್ಲಿ ಉತ್ತಮವಾದ ಪ್ರೋಟೀನ್ ಇರುತ್ತದೆ. ಒಂದು ಮುಖ್ಯವಾದ ಅಂಶವೇನೆಂದರೆ, ಈ ಬೆಕ್ಕುಗಳನ್ನು ಕಾಫಿ ಬೀಜಗಳಿಗೋಸ್ಕರ ಕೊಲ್ಲಲಾಗುವುದಿಲ್ಲ. ಬದಲಾಗಿ, ಅವು ತಿಂದ ನಂತರ ವಿಸರ್ಜಿಸುವ ಹಿಕ್ಕೆಗಳ ಮೂಲಕ ಸಂಗ್ರಹಿಸಲಾಗುತ್ತದೆ. ಅದನ್ನು ಚೆನ್ನಾಗಿ ತೊಳೆದು, ಸಂಸ್ಕರಿಸಿ, ಬಿಸಿಲಿನಲ್ಲಿ ಒಣಗಿಸಿದ ನಂತರ ಹುರಿದು ಪುಡಿ ಮಾಡಲಾಗುತ್ತದೆ. ಆದ್ದರಿಂದಲೇ ಈ ಕಾಫಿಗೆ ಅತ್ಯಂತ ಬೇಡಿಕೆ ಇದೆ. ಹೀಗಾಗಿ ಒಂದು ಕಾಲದಲ್ಲಿ ಕಾಡುಬೆಕ್ಕುಗಳನ್ನು ಬೇಟೆ ಆಡುತ್ತಿದ್ದವರು ಸಹ ಈಗ ನಿಲ್ಲಿಸಿದ್ದಾರೆ. ಈಗ ಕಾಡು ಬೆಕ್ಕುಗಳನ್ನು ಸಾಕುವ ಮೂಲಕ ಈ ಕಾಫಿಯನ್ನು ಉತ್ಪಾದಿಸಲಾಗುತ್ತದೆ. 
 
ಈ ಕಾಫಿ ಬೀಜಗಳನ್ನು 'Coorg consolidated commodities' ಮೊದಲ ಬಾರಿಗೆ ತಯಾರು ಮಾಡಿತ್ತು. ಇದು ಈಗ 'Ainmane' ಎಂಬ ಬ್ರಾಂಡ್ ಹೆಸರಿನಿಂದ ಕರೆಯಲ್ಪಡುತ್ತಿದೆ. ಮಡಿಕೇರಿಯ ಕ್ಲಬ್ ಮಹೇಂದ್ರದಲ್ಲಿ ಈ ಕಾಫಿ ಉತ್ಪನ್ನಗಳು ದೊರೆಯುತ್ತವೆ. ಈ ಕಾಫಿಗೆ I.F.D approval ಕೂಡ ದೊರೆತಿದೆ. ಈಗ ಈ ಸಿವಿಯೆಟ್ ಕಾಫಿ, ಕಾಫಿ ಪ್ರಿಯರನ್ನು ನಿಬ್ಬೆರಗು ಮಾಡಿದೆ. 
 
ಆರೋಗ್ಯ:
 
ಇನ್ನು ಆರೋಗ್ಯ ದೃಷ್ಟಿಯಲ್ಲಿ ನೋಡುವುದಾದರೆ ತುಂಬಾ ಪ್ರಯೋಜನ ಈ ಕಾಫಿಯಲ್ಲಿದೆ ಎಂದು ವಿಜ್ಞಾನಿಗಳ ಅಭಿಪ್ರಾಯ. ಈ ಕಾಫಿಯನ್ನು ಕುಡಿಯುವುದರಿಂದ ಹಲ್ಲುಗಳು ಆರೋಗ್ಯವಾಗಿರುತ್ತವೆ. ಚರ್ಮದ ಕ್ಯಾನ್ಸರ್ ಅನ್ನು ಶೇ. 17% ರಷ್ಟು ಇದರಿಂದ ತಡೆಗಟ್ಟಬಹುದು. ಸಕ್ಕರೆ ಕಾಯಿಲೆಯನ್ನು ಕೂಡ ಕಡಿಮೆ ಮಾಡುತ್ತದೆ. ವ್ಯಾಯಾಮ ಮಾಡಿದ ನಂತರ ಈ ಕಾಫಿಯನ್ನು ಕುಡಿದ ನಂತರ ಶೇ.50 ರಷ್ಟು ದೇಹದ ಮಾಂಸಖಂಡಗಳು ಗಟ್ಟಿಮುಟ್ಟಾಗಿರುತ್ತವೆ. 
 
   ಹೀಗೇ ಈ ಅಪರೂಪದ ಕಾಫಿಯು ಕಾಫಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ನೀವೂ ಕಾಫಿ ಪ್ರಿಯರಾಗಿದ್ದಲ್ಲಿ ಒಂದು ಬಾರಿ ಸವಿದು ನೋಡಿ.