ಮಹಿಳೆಯರು ಧೃತಿಗೆಡದೆ ಮುನ್ನುಗ್ಗಬೇಕಿದೆ...

ಮಹಿಳೆಯರು ಧೃತಿಗೆಡದೆ ಮುನ್ನುಗ್ಗಬೇಕಿದೆ...

LK   ¦    Mar 08, 2019 09:22:32 AM (IST)
ಮಹಿಳೆಯರು ಧೃತಿಗೆಡದೆ ಮುನ್ನುಗ್ಗಬೇಕಿದೆ...

ಈಗ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಕಾರ್ಯನಿರ್ವಹಿಸುವ ಮೂಲಕ ಪುರುಷರಿಗೆ ಸರಿಸಮಾನರಾಗಿ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಮನೆಯ ಒಳಗೂ ಹೊರಗೂ ಕೆಲಸ ಮಾಡುವುದರೊಂದಿಗೆ ಸಮಾಜದಲ್ಲೊಂದು ಶಕ್ತಿಯಾಗಿ ನಿಂತಿದ್ದಾರೆ. ಹೀಗಾಗಿ ವರ್ಷ ಕಳೆದಂತೆಲ್ಲ ಮಾ.8ರ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತಿದೆ.

ಸದಾ ಒತ್ತಡ, ಜವಬ್ದಾರಿಯನ್ನೇ ಹೊತ್ತು ಬದುಕುವ ಮಹಿಳೆ ಪ್ರತಿದಿನ ಪ್ರತಿಕ್ಷಣ ತನ್ನ, ಮಕ್ಕಳು, ಗಂಡ, ಸಂಸಾರದ ಬಗ್ಗೆಯೇ ಚಿಂತಿಸುತ್ತಾ ಕಾಲ ಕಳೆಯುತ್ತಾಳೆ ಹೀಗಿರುವಾಗ ಆಕೆಗೆ ವರ್ಷ ಪೂರ್ತಿ ಮೀಸಲಿಟ್ಟರೂ ಸಾಲದಾಗಿದೆ. ಪುರುಷ ಸಮಾಜದಲ್ಲಿ ಮಹಿಳೆಗೆ ಕೇವಲ ಮನೆಗಷ್ಟೆ ಸೀಮಿತ ಎಂಬ ಕಾಲವಿತ್ತು. ಆದರೆ ಬದಲಾದ ಕಾಲದಲ್ಲಿ ಆಕೆ ಮನೆಗಷ್ಟೇ ಸೀಮಿತವಾಗದೆ ಎಲ್ಲ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿದ್ದಾಳೆ.

ಅಡುಗೆ ಮನೆಗಷ್ಟೆ ಸೀಮಿತಳಾಗಿದ್ದವಳು ಮನೆಯ ಹೊಸಿಲು ದಾಟಿ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾಳೆ. ಇದು ಪ್ರಗತಿಯ ಸಂಕೇತ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದಾಗಿದೆ. ಆದರೂ ಹೆಣ್ಣು ಮಕ್ಕಳ ಬಗೆಗಿನ ಹೆತ್ತವರ ಭಾವನೆ ಇನ್ನೂ ಬದಲಾಗಿಲ್ಲ. ಬಹಳಷ್ಟು ಜನ ಹೆಣ್ಣು ಹೆತ್ತವರು ಮಗಳಿಗೆ ವಿದ್ಯಾಭ್ಯಾಸ ಕೊಡಿಸಿ ಮದುವೆ ಮಾಡಿಬಿಟ್ಟರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಭಾವಿಸುತ್ತಾರೆ. ಆದರೆ ಬದಲಾದ ಕಾಲಘಟ್ಟದಲ್ಲಿ ಅವಳ ಬದುಕನ್ನು ಅವಳೇ ಕಟ್ಟಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕಾದ ಅಗತ್ಯತೆಯೂ ಇದೆ ಎಂಬುದನ್ನು ಕೆಲವರು ಅರಿಯದಾಗಿದ್ದಾರೆ.

ಹಿಂದಿನ ಕಾಲದ ಮಹಿಳೆ ಅನಕ್ಷರಸ್ಥೆಯಾಗಿದ್ದಳು ಜತೆಗೆ ಸಂಸಾರ ನಿರ್ವಹಣೆ, ಅಡುಗೆ, ಗಂಡ, ಮಕ್ಕಳನ್ನು ಸಾಕಿ ಸಲಹುದರಲ್ಲೇ ತನ್ನ ಜೀವಮಾನವನ್ನು ಕಳೆದು ಬಿಡುತ್ತಿದ್ದಳು. ಈಗ ಹಾಗಿಲ್ಲ. ಏನಾದರೊಂದು ಸಾಧನೆ ಮಾಡುವ ತುಡಿತದಲ್ಲಿದ್ದಾಳೆ. ಪುರುಷರಿಗಷ್ಟೇ ಸೀಮಿತವಾಗಿದ್ದ ಕ್ಷೇತ್ರಕ್ಕೂ ಲಗ್ಗೆಯಿಟ್ಟು ತಾನೇನು ಕಡಿಮೆಯಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ.

ಇದೆಲ್ಲದರ ನಡುವೆ ಎಲ್ಲ ಮಹಿಳೆಯರ ಬದುಕು ಸುಧಾರಿಸಿದೆ ಎಂದರೆ ಅದು ಮೂರ್ಖತನವಾಗಿ ಬಿಡುತ್ತದೆ. ಇನ್ನೂ ಕೂಡ ಹಲವರು ಕಷ್ಟದಲ್ಲಿದ್ದಾರೆ. ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶದ ಮಹಿಳೆಯರ ಸ್ಥಿತಿಗತಿ ಶೋಚನೀಯವಾಗಿದೆ. ಇನ್ನೂ ಕೂಡ ವರದಕ್ಷಿಣೆ ಪೆಡಂಬೂತ ಬಿಟ್ಟು ಹೋಗಿಲ್ಲ. ಲೈಂಗಿಕ ದೌರ್ಜನ್ಯ ಕಡಿಮೆಯಾಗಿಲ್ಲ.

ಸಮಾಜವನ್ನು ಎದುರಿಸುವ ಧೈರ್ಯ ಕೆಲವು ಮಹಿಳೆಯರಲ್ಲಿ ಇಲ್ಲದಾಗಿದೆ. ಹೀಗಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಹಲವು ಕಾನೂನು ತಂದಿದ್ದರೂ ಬಹಳಷ್ಟು ಸಂದರ್ಭ ಅದರ ಬಳಕೆಯಾಗದೆ ಮತ್ತು ಬಳಸಿಕೊಳ್ಳಲು ಅದರ ಅರಿವಿಲ್ಲದೆ, ತನ್ನ ಮೇಲೆ ದೌರ್ಜನ್ಯ ನಡೆದರೂ ಸಹಿಸಿಕೊಂಡು ಜೀವನ ಸಾಗಿಸುವವರು ಇದ್ದಾರೆ. ಅಂತಹವರು ಇನ್ನು ಮುಂದೆಯಾದರೂ ಏನೇ ಸಮಸ್ಯೆ ಬಂದರೂ ಧೃತಿಗೆಡದೆ ಮುನ್ನುಗ್ಗಬೇಕಿದೆ. ಆಗ ಮಾತ್ರ ಮಹಿಳೆ ದಿನಾಚರಣೆಗೆ ಅರ್ಥ ಬರುತ್ತದೆ...