ವಿಶ್ವದ ಹುಣಸೆ ಮರಗಳಲ್ಲಿಯೇ ಅತ್ಯಂತ ಬೃಹತ್ ಹುಣಸೇ ಮರ..

ವಿಶ್ವದ ಹುಣಸೆ ಮರಗಳಲ್ಲಿಯೇ ಅತ್ಯಂತ ಬೃಹತ್ ಹುಣಸೇ ಮರ..

Subhashini   ¦    Jan 24, 2021 04:22:08 PM (IST)
ವಿಶ್ವದ ಹುಣಸೆ ಮರಗಳಲ್ಲಿಯೇ ಅತ್ಯಂತ ಬೃಹತ್ ಹುಣಸೇ ಮರ..
ಮರಗಳಲ್ಲಿ ಎಷ್ಟು ಜಾತಿಗಳಿವೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆ ಮಾಡಿ ಲೆಕ್ಕ ಮುಂದಿಟ್ಟರೂ, ಸುಳಿವೇ ಸಿಗದೇ ಅಳಿವಿಗೊಳಗಾಗಿ ಕಣ್ಣಿಗೇ ಬೀಳದ ಜೀವ ವೈವಿಧ್ಯಗಳನ್ನು ಈ ಭೂಮಿ ಅದೆಷ್ಟು ಬಚ್ಚಿಟ್ಟುಕೊಂಡಿರಬಹುದೋ ಏನೋ! ಸಾಮಾನ್ಯವಾಗಿ ಕಾಡು ಅಥವಾ ದಟ್ಟ ಅರಣ್ಯಗಳಲ್ಲಿ ಬೇರೆ ಬೇರೆ ಜಾತಿಗೆ ಸೇರಿದ ದೊಡ್ಡ ದೊಡ್ಡ ಬೃಹತ್ ಮರಗಳನ್ನು ಕಾಣಬಹುದು. ಅಂತಹದೇ ಬೃಹತ್ ಗಾತ್ರದ ಮರಗಳಲ್ಲಿ ಅತ್ಯಂತ ದೊಡ್ಡ ಹುಣಸೇ ಮರವೊಂದಿದೆ. ಇದು ವಿಶ್ವದಲ್ಲಿ ಇರುವ ಹುಣಸೇ ಮರಗಳಿಗಿಂತ ಅತ್ಯಂತ ದೊಡ್ಡ ಬೃಹತ್ ಮರ. ಹುಣಸೇ ಮರನಾ!?? ಎಂದು ಮುಖ ಹುಳಿ ಹುಳಿ ಮಾಡಿಕೊಳ್ಳಬೇಡಿ. ಈ ಹುಣಸೇ ಮರದ ಗುಣಗಳೂ ಅತ್ಯಂತ ವಿಭಿನ್ನವಾಗಿವೆ. 
 
ಹಿನ್ನೆಲೆ ಮತ್ತು ಪರಿಚಯ:
 
ಈ ಹುಣಸೇ ಮರ ಇರೋದು, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಸವಣೂರಿನ  ಕಲ್ಮಠ ಎಂಬ ಭಾಗದಲ್ಲಿ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಹುಣಸೇ ಮರವೆಂದು ಹೆಸರು ಪಡೆದಿದೆ. ಈ ಮರ ಶತಮಾನಗಳಿಂದಲೂ ಭದ್ರವಾಗಿ ನೆಲೆಯೂರಿದೆ. ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಆಶ್ಚರ್ಯವನ್ನೂ ಹೆಚ್ಚಿಸಿದೆ. ಕಲ್ಮಠದಲ್ಲಿರುವ ಮೂರು ಗಜಗಾತ್ರದ ವೃಕ್ಷಗಳು ಇತಿಹಾಸದ ಕೊಂಡಿಯಾಗಿವೆ. ಇವುಗಳ ಗಾತ್ರ ಕಣ್ಣಳತೆಗೆ ನಿಲುಕದ ರೀತಿಯಲ್ಲಿದೆ.
 
ಈ ವೃಕ್ಷವನ್ನು ಹಠಯೋಗಿ ಗೋರಖನಾಥರು ದೇಶ ಸಂಚಾರದ ವೇಳೆ ಸವಣೂರಿನ ಕಲ್ಮಠಕ್ಕೆ ಬಂದು ಅನೇಕ ವರ್ಷಗಳವರೆಗೆ ಅನುಷ್ಠಾನಗೈದು ಯೋಗ ಶಕ್ತಿಯಿಂದ  ನೆಟ್ಟರೆಂದು ಸ್ಥಳೀಯರು ಹೇಳುತ್ತಾರೆ. ಈ ವೃಕ್ಷಗಳ ತಳವು ಉಬ್ಬಿದ ಬಾಟಲಿಯಂತೆ ಇದ್ದು, ಕ್ರಮೇಣ ಮೇಲೆ ಹೋದಂತೆಲ್ಲಾ ಮೊಣಚಾಗುತ್ತದೆ ಮರದ ತೊಗಟೆ ಖಡ್ಗ ಮೃಗದ ಚರ್ಮದ ಮಾಡಿಕೆಯಂತಿದೆ. ಚಳಿಗಾಲದಲ್ಲಿ ಇಡೀ ಮರದ ಎಲೆ ಉದುರಿ, ಪುನಃ ಮೇ ತಿಂಗಳಲ್ಲಿ ಎಲೆಗಳ ಪುನಾರಾಗಮವಾಗುತ್ತದೆ. ಈ ಪ್ರಭೇದದ ಮರಗಳು ದೇಶದಲ್ಲಿ ಕೆಲವೇ ಕೆಲವು ಇವೆ. ಈ ವೃಕ್ಷಗಳು ಆಯುರ್ವೇದೀಯ ಹಾಗೂ ಔಷಧೀಯ ಗುಣವನ್ನು ಹೊಂದಿದ್ದು, ಇವುಗಳು ಬುಡದಲ್ಲಿ ಯಾವುದೇ ಪದಾರ್ಥಗಳು ಅಥವಾ ಮೃತ ದೇಹವನ್ನು ಇಟ್ಟರೂ ಅವುಗಳು ಕೊಳೆಯದಿರುವಂಥಹ ವಿಶೇಷ ಶಕ್ತಿಯನ್ನು ಈ ಮರಗಳು ಹೊಂದಿರುವುದು ವಿವಿಧ ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟಿದೆ. ಈ ವೃಕ್ಷಗಳಿಗಿ ಕನಿಷ್ಟ 2000 ವರುಷಗಳ ಇತಿಹಾಸವಿದೆ. 
 
ತೆಂಗಿನಕಾಯಿ ಗಾತ್ರದ ಹಣ್ಣುಗಳು!!
 
ಈ ಮರಗಳು ತೆಂಗಿನ ಕಾಯಿ ಗಾತ್ರದ ಹಣ್ಣುಗಳನ್ನು ಬಿಡುತ್ತಿದ್ದು, ಮೇಲ್ಭಾಗದಲ್ಲಿ ಬಟ್ಟೆಯಂಥಹ ಮೆತ್ತನೆಯ ಪದರದಂತಹ ಹೊದಿಕೆಯನ್ನು ಹೊಂದಿದೆ. ಕಾಯಿಯನ್ನು ಒಡೆದರೆ ಒಳಗೆ ದಪ್ಪನೆಯ ಜೇಡರ ಬಲೆಯಂತೆ ಕಾಣಿಸುವ ಹುಣಸೇ ಹಣ್ಣುಗಳನ್ನು ಕಾಣಬಹುದು. ಇವು ಸ್ವಲ್ಪ ಹುಳಿ ಮತ್ತು ಸಿಹಿ. ಈ ಅಪರೂಪದ ವೃಕ್ಷದ ವೈಜಾನಿಕ ಹೆಸರು ಈ ಅಪರೂಪದ ವೃಕ್ಷದ ವೈಜ್ಞಾನಿಕ ಹೆಸರು ಆಡೆನ್ಸೋನಿಯಾ ಡಿಟಾಟಾ ಎಂದು. ಈ ಮರಗಳು ಬೂರುಗದ ಹತ್ತಿಯ ಕುಟುಂಬಕ್ಕೆ ಸೇರಿರುವುದರಿಂದ ಇವುಗಳನ್ನು ಆಂಗ್ಲ ಭಾಷೆಯಲ್ಲಿ ಬೊಬಾಟ್ ಟ್ರೀ, ಮಂಕಿ ಬ್ರೆಡ್‌ ಟ್ರೀ, ಆಫ್ರಿಕನ್‌ ಕಲಬಾಷ್‌ ಟ್ರೀ, ಸೋರ್‌ ಗೋಡರ ಟ್ರೀ ಎಂಬ ವಿಭಿನ್ನ ಹೆಸರುಗಳಿಂದಲೂ ಕರೆಯುತ್ತಾರೆ.
 
ಈ ಮರಗಳು ಆಫ್ರಿಕಾ ಖಂಡಕ್ಕೆ ಸೇರಿರುವುದರಿಂದ ಈ ಮರಗಳಿಗೆ ಅಡೆನ್ಸೋನಿಯಾ ಎಂದು ಹೆಸರಿಡಲಾಗಿದೆ. ಇವುಗಳು 6000 ವರ್ಷಗಳ  ಕಾಲ ಬದುಕಬಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ.