ಲಾಕ್ ಡೌನ್ ಸಮಯದಲ್ಲಿ ವಿದ್ಯಾರ್ಥಿನಿ ಕೈಯ್ಯಲ್ಲರಳಿದ ಕಲಾಕೃತಿ

ಲಾಕ್ ಡೌನ್ ಸಮಯದಲ್ಲಿ ವಿದ್ಯಾರ್ಥಿನಿ ಕೈಯ್ಯಲ್ಲರಳಿದ ಕಲಾಕೃತಿ

LK   ¦    May 16, 2020 02:33:26 PM (IST)
ಲಾಕ್ ಡೌನ್ ಸಮಯದಲ್ಲಿ ವಿದ್ಯಾರ್ಥಿನಿ ಕೈಯ್ಯಲ್ಲರಳಿದ ಕಲಾಕೃತಿ

ಏನಾದರೊಂದು ಮಾಡಬೇಕೆಂಬ ಇಚ್ಛಾಶಕ್ತಿಯಿದ್ದರೆ ಮನೆಯಲ್ಲಿ ಮತ್ತು ಹಿತ್ತಲಲ್ಲಿ ಸಿಗುವ ವಸ್ತುಗಳಿಂದಲೂ ಸುಂದರ ಕಲಾಕೃತಿಯನ್ನು ತಯಾರಿಸಬಹುದು ಎಂಬುದನ್ನು ಕಾಲೇಜು ವಿದ್ಯಾರ್ಥಿನಿ ಗೀತಾಂಜಲಿ ತೋರಿಸಿಕೊಟ್ಟಿದ್ದಾಳೆ.

ಕೊರೊನಾ ಸೋಂಕು ತಡೆಯುವ ಸಲುವಾಗಿ ಲಾಕ್ ಡೌನ್ ಮಾಡಲಾಗಿದ್ದು, ಬಹಳಷ್ಟು ಮಂದಿ ಮನೆಯಲ್ಲಿರೋಕೆ ಬೋರಾಗುತ್ತಿದೆ ಎಂದು ಹೇಳಿಕೊಳ್ಳುವವರೇ ಜಾಸ್ತಿ. ಹೆಚ್ಚಿನವರು ಮೊಬೈಲ್ ನೋಡುವುದರಲ್ಲಿಯೇ ತಮ್ಮ ಸಮಯವನ್ನು ಕಳೆದು ಬಿಟ್ಟಿದ್ದಾರೆ. ಆದರೆ ಇವರೆಲ್ಲರ ನಡುವೆ ಗೀತಾಂಜಲಿ ಮಾತ್ರ ವಿಭಿನ್ನವಾಗಿ ಕಾಣುತ್ತಿದ್ದಾರೆ.

ಏಕೆಂದರೆ ಮನೆಯಲ್ಲಿ ಕುಳಿತು ಕಾಲ ಹರಣ ಮಾಡುವುದಕ್ಕಿಂತ ಸಮಯವನ್ನು ಸದುಪಯೋಗಿಸಿಕೊಳ್ಳುವ ಹಾಗೂ ತನ್ನಲ್ಲಿರುವ ಪ್ರತಿಭೆಯನ್ನು ಓರೆಗೆ ಹಚ್ಚುವ ಕಾರ್ಯಕ್ಕೆ ಮುಂದಾಗಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಇದರಿಂದ ಏನೂ ಲಾಭವಾಗದಿದ್ದರೂ ಮನಸಂತೋಷ ದೊರೆತಿದೆ ಜತೆಗೆ ಪ್ರತಿಭೆಯೂ ಅನಾವರಣಗೊಂಡಿದೆ ಎಂಬುದಂತು ಸತ್ಯ.

ಪ್ರತಿಯೊಬ್ಬರಲ್ಲೂ ತನ್ನದೇ ಆದ ಪ್ರತಿಭೆಯಿರುತ್ತದೆ. ಅದು ಬೆಳಕಿಗೆ ಬರಲು  ಸಮಯ ಒದಗಿ ಬರಬೇಕು ಎಂಬುದಕ್ಕೆ ಗೀತಾಂಜಲಿ ನಿದರ್ಶನರಾಗುತ್ತಾರೆ. ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತು ಸಮಯವನ್ನು ವ್ಯರ್ಥ ಮಾಡದೆ ಮನೆಯಲ್ಲಿ ಸಿಕ್ಕ ಪೇಪರ್ ಮತ್ತು ತೆಂಗು, ಮರವನ್ನು ಬಳಸಿ ಕಲಾಕೃತಿಗಳನ್ನು ನಿರ್ಮಾಣ ಮಾಡಿದ್ದು, ಈ ಸುಂದರ ಕಲಾಕೃತಿ ನೋಡುಗರ ಮನಸ್ಸೆಳೆಯುತ್ತಿದೆ.

ವಿದ್ಯಾರ್ಥಿನಿ ಗೀತಾಂಜಲಿ ತಿರುಚನಗೂಡು ವಿವೇಕಾನಂದ ಮಹಿಳಾ ಕಲಾ ಮತ್ತು ವಿಜ್ಞಾನ  ಕಾಲೇಜಿನಲ್ಲಿ ಬಿ.ಎಸ್.ಸಿ ವ್ಯಾಸಂಗ ಮಾಡುತ್ತಿದ್ದು, ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರಬೆಟ್ಟದ ದೇವಸ್ಥಾನದಲ್ಲಿ ಅರ್ಚಕರಾಗಿರುವ ಡಿ.ಪರಮೇಶ್  ಅವರ ಪುತ್ರಿಯಾಗಿದ್ದಾರೆ.

ಮೊದಲಿನಿಂದಲೂ ಗೀತಾಂಜಲಿಗೆ ಏನಾದರೊಂದು ಕಲಾಕೃತಿಗಳನ್ನು ಮಾಡಬೇಕೆಂಬ ತುಡಿತವಿತ್ತು. ಅದು ಇದೀಗ ಲಾಕ್ ಡೌನ್ ಆದ ವೇಳೆಯಲ್ಲಿ ಸಕಾರಗೊಂಡಿದೆ. ಎಷ್ಟು ದಿನಾಂತ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದು? ಏನಾದರೊಂದು ಮಾಡಬೇಕೆಂದು ಯೋಚಿಸುವಾಗಲೇ ಅವರಿಗೆ ಕಂಡಿದ್ದು ಮನೆಯಲ್ಲಿ ರಾಶಿಬಿದ್ದ ದಿನಪತ್ರಿಕೆಗಳು. ಅದನ್ನೇ ಬಳಸಿಕೊಂಡು ಯಾವುದಾದರು ಕಲಾಕೃತಿ ಮಾಡೋಣವೆಂದು ಆಲೋಚಿಸಿದ ಅವರು ಪತ್ರಿಕೆಯಿಂದಲೇ ಬೈಕ್ ತಯಾರಿಸುವ ಕೆಲಸವನ್ನು ಆರಂಭಿಸಿಯೇ ಬಿಟ್ಟರು.

ತಮ್ಮದೇ ಕಲ್ಪನೆಯಲ್ಲಿ ಬೈಕ್ ತಯಾರಿಕೆಗೆ ಇಳಿದ ಅವರು ಒಂದಷ್ಟು ದಿನಗಳನ್ನು ಅದಕ್ಕಾಗಿ ವ್ಯಯಿಸಿದರು. ಆದರೆ ಅವರ ಶ್ರಮ ವ್ಯರ್ಥವಾಗಲಿಲ್ಲ. ಕೊನೆಗೂ ಪೇಪರ್ ಬೈಕ್ ಸಿದ್ಧಗೊಂಡಿತು. ನೋಡಲು ಸುಂದರವಾಗಿದ್ದ ಬೈಕ್ ಸುತ್ತಮುತ್ತಲ ಜನರ ಗಮನಸೆಳೆಯಿತು. ಎಲ್ಲರೂ ಕುತೂಹಲದಿಂದ ಅದನ್ನು ನೋಡಲು ಬರತೊಡಗಿದರು.

ಪೇಪರ್‍ ನಲ್ಲಿ ಬೈಕ್ ತಯಾರಿಸಿದ ಬಳಿಕ ಅವರ ತಲೆಯಲ್ಲಿ ಮೂಡಿದ ಚಿತ್ರವೆಂದರೆ ಹಡಗು, ದೋಣಿ ಮತ್ತು ಸುಂದರ ಹಾಯಿದೋಣಿ. ಹಾಗೆನೋಡಿದರೆ ಹಾಯಿದೋಣಿಗಳ ಚೆಲುವು ವರ್ಣಿಸಲಸಾಧ್ಯ. ಇಂತಹ ಹಾಯಿದೋಣಿಯನ್ನು ಸುಂದರವಾಗಿ ತಯಾರಿಸುವ ಹಠಕ್ಕೆ ಬಿದ್ದ ಅವರು ಅದಕ್ಕೆ ಬೇಕಾದ ಪರಿಕರಗಳನ್ನು ತಮ್ಮ ಮನೆಯ ಬಳಿಯಲ್ಲಿದ್ದ ತೆಂಗಿನ ಮರದಿಂದಲೇ ಬಳಸಿಕೊಂಡರು.

ತೆಂಗಿನ ಮರದ ಹಾಳೆ, ರೆಂಬೆ ಮತ್ತು ಮರವನ್ನು ಬಳಸಿ ಪುಟ್ಟ ಹಡಗು, ದೋಣಿ ಮತ್ತು ಸುಂದರ ಹಾಯಿದೋಣಿಯನ್ನು ತಯಾರಿಸಿದರು. ನೋಡಲು ಸುಂದರವಾಗಿರುವ ಈ ದೋಣಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಗೀತಾಂಜಲಿ ಹವ್ಯಾಸವಾಗಿ ಕಲಾಕೃತಿಗಳನ್ನು ಆಗಾಗ್ಗೆ ತಯಾರಿಸುತ್ತಿರುತ್ತಾರೆ. ಈಗ ಲಾಕ್ ಡೌನ್ ವೇಳೆಯಲ್ಲಿ ಸಮಯವನ್ನು ಬೇರೆ, ಬೇರೆ ಕಾರಣಗಳಿಗೆ ಸಮಯ ವ್ಯರ್ಥ ಮಾಡಿಕೊಂಡವರ ನಡುವೆ ಸಿಕ್ಕ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಪೇಪರ್ ಬೈಕ್,  ತೆಂಗಿನ ಮರದ ವಿವಿಧ ಪದಾರ್ಥಗಳನ್ನು ಬಳಸಿ  ಹಡಗು, ಹಾಯಿದೋಣಿಯನ್ನು ತಯಾರಿಸಿ ಮನೆಗೊಂದು ಶೋಭೆ ತಂದಿರುವುದಲ್ಲದೆ, ಇತರರಿಗೆ ಮಾದರಿಯಾಗಿದ್ದಾರೆ.