ಮಳೆಗಾಲ ಬಂತು ಬ್ರಹ್ಮಕಮಲ ಗಿಡಗಳಲ್ಲಿ ಹೂ ಅರಳಿತು!

ಮಳೆಗಾಲ ಬಂತು ಬ್ರಹ್ಮಕಮಲ ಗಿಡಗಳಲ್ಲಿ ಹೂ ಅರಳಿತು!

LK   ¦    Jun 15, 2019 04:05:58 PM (IST)
ಮಳೆಗಾಲ ಬಂತು ಬ್ರಹ್ಮಕಮಲ ಗಿಡಗಳಲ್ಲಿ ಹೂ ಅರಳಿತು!

ಈಗ ಮಳೆಗಾಲದ ಆರಂಭದ ದಿನವಾಗಿರುವುದರಿಂದ ಹುಲುಸಾಗಿ ಬೆಳೆದ ಬ್ರಹ್ಮಕಮಲ ಗಿಡಗಳಲ್ಲಿ ಮೊಗ್ಗಾಗಿ ಹೂವಾಗಿ ಅರಳುವ ಸಮಯವೂ ಹೌದು.

ಏನೇ ಹೇಳಿ ಗಿಡನೆಟ್ಟ ಪ್ರತಿ ಪುಷ್ಪಪ್ರೇಮಿಯಲ್ಲೂ ಹೂ ಅರಳುವುದನ್ನು ನೋಡುವ ತವಕ ಇದ್ದೇ ಇರುತ್ತದೆ. ಅದರಲ್ಲೂ ಬ್ರಹ್ಮಕಮಲ ಗಿಡವಂತು ವಿಶೇಷ ಏಕೆಂದರೆ ಇದು ಇತರೆ ಹೂಗಿಡಗಳಂತೆ ಆಗಾಗ್ಗೆ ಹೂ ಬಿಡುವುದಿಲ್ಲ.ವರ್ಷಕ್ಕೋ... ಎರಡು ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಅದೂ ಕೂಡ ನಡು ರಾತ್ರಿಯಲ್ಲಿ. ಆದ್ದರಿಂದ ಪ್ರತಿಯೊಬ್ಬರಿಗೂ ಅದರ ಮೇಲೊಂದು ನಿಗಾ ಇದ್ದೇ ಇರುತ್ತದೆ.

ಹಾಗೆ ನೋಡಿದರೆ ಬ್ರಹ್ಮಕಮಲ ಎನ್ನುವುದು ಪುಷ್ಪಲೋಕದ ಅಚ್ಚರಿ ಎಂದರೆ ತಪ್ಪಾಗಲಾರದು. ಕ್ಯಾಕ್ಟಸ್ ಜಾತಿಗೆ ಸೇರಿದ ಬ್ರಹ್ಮಕಮಲದ ವೈಜ್ಞಾನಿಕ ಹೆಸರು ಎಪಿಫಿಲ್ಲಂ ಅಕ್ಸಿಪೆಟಲಂ. ಹಿಂದಿಯಲ್ಲಿ ನಿಶಾಗಂಧಿ, ಅಮೇರಿಕಾದಲ್ಲಿ ಮಿಡ್‍ನೈಟ್ ಲಿಲ್ಲಿ, ಅರ್ಚಿಡ್ ಕ್ಯಾಕ್ಟಸ್, ಪೋಡ್ ಲಿಲ್ಲಿ, ಕ್ಯಾಕ್ಟಸ್ ಬೆಥ್ಲೆಹೆಮ್ ಲಿಲ್ಲಿ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ದಕ್ಷಿಣ ಅಮೇರಿಕಾ ಇದರ ತವರೆಂದು ಅಲ್ಲಿಂದ ಸ್ಪೆಲಿಷ್‍ರು ಪೋರ್ಚ್‍ಗೀಸ್ ನಾವಿಕರ ಮೂಲಕ ವಿಶ್ವದ ಇತರ ಕಡೆಗೆ ಹರಡಿತೆಂದು ಹೇಳಲಾಗಿದೆ. ಆದರೆ ಬ್ರಹ್ಮಕಮಲ ಭಾರತದತ್ತ ಹದಿನೇಳನೇ ಶತಮಾನದಲ್ಲಿ ಬಂದಿತೆಂದು ಹೇಳಲಾಗುತ್ತಿದೆ. ಹಿಮಾಚಲದ ಪ್ರದೇಶ, ಕಾಶ್ಮೀರ, ಹಿಮಾಚಲದ ಕೆಲವು ಪ್ರದೇಶಗಳಲ್ಲಿ ಭಾರತದ್ದೇ ಆದ ನೈಜ ಜಾತಿಯ ಗಿಡಗಳು ಇಂದಿಗೂ ಕಂಡುಬರುತ್ತವೆ ಎನ್ನಲಾಗಿದೆ. ಇತರೆ ಪುಷ್ಪಗಿಡಗಳಿಗೆ ವಿಭಿನ್ನವಾಗಿರುವ ಇದು ಸುಮಾರು ಹತ್ತರಿಂದ ಇಪ್ಪತ್ತು ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ. ಈ ಸಸ್ಯದಲ್ಲಿ ರೆಂಬೆ, ಕೊಂಬೆಗಳೇ ಇಡೀ ಸಸ್ಯದ ಜೀವಾಳವಾಗಿದೆ.

ಚಪ್ಪಟೆಯಾಗಿರುವ ಕಾಂಡ, ರೆಂಬೆಗಳು ಹಚ್ಚಹಸಿರಿನಿಂದ ಕೂಡಿದ್ದು, ಇವುಗಳೇ ಧ್ಯುತಿಸಂಶ್ಲೇಷಣಾ ಕ್ರಿಯೆ ನಡೆಸುತ್ತವೆ. ತುದಿಭಾಗ ನೀಳವಾಗಿ ಹಾಗೂ ಅಗಲವಾಗಿ ಹರಡಿಕೊಂಡಿರುವ ಎಲೆಯೇ ಕಾಂಡವಾಗಿದ್ದು, ಇದನ್ನು ಪರ್ಣಸ್ಥಂಭ ರಚನೆ ಎಂದು ಕರೆಯುತ್ತಾರೆ. ಇದರ ಸಸ್ಯಾಭಿವೃದ್ಧಿ ಅಷ್ಟೇನು ಕಷ್ಟವಲ್ಲ. ಬಲಿತ ಎಲೆಯನ್ನೇ ನೆಟ್ಟರೆ ಸಾಕು ಚಿಗುರು ಮೂಡಿ ಸಸ್ಯ ಬೆಳೆಯುತ್ತದೆ. ಹೆಚ್ಚಿನ ನೀರು, ಗೊಬ್ಬರವನ್ನೂ ಇದು ಅಪೇಕ್ಷಿಸುವುದಿಲ್ಲ. ಹೀಗಾಗಿ ಇದನ್ನು ಮನೆಯ ಅಂಗಳದಲ್ಲಿ ಅಥವಾ ಹೂಕುಂಡಗಳಲ್ಲಿ ಸುಲಭವಾಗಿ ಬೆಳೆಸಬಹುದಾಗಿದೆ. ಮನೆಯ ಒಳಗೆ ಕುಂಡದಲ್ಲಿ ಬೆಳೆಸುವುದರಿಂದ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಹೇಳಲಾಗುತ್ತದೆ.

ಸಾಮಾನ್ಯವಾಗಿ ಮುಂಗಾರು ಆರಂಭವಾಗುತ್ತಿದ್ದಂತೆಯೇ ಬಲಿತ ಗಿಡಗಳ ಎಲೆಗಳ ರಚನೆಯ ಅಂಚಿನಲ್ಲಿ ಪುಟ್ಟದಾಗಿ ನಸುಕೆಂಪು ಬಣ್ಣದ ಮೊಗ್ಗುಗಳು ಹೊರಬಂದು ಸುಮಾರು ಎರಡು ವಾರಗಳಲ್ಲಿ ಬೊಗಸೆಗಿಂತಲೂ ದೊಡ್ಡದಾಗಿ ಬೆಳೆದು ನೆಲದತ್ತ ಮುಖಮಾಡಿ ತೂಗಾಡುತ್ತವೆ. ಆದರೆ ಮೊಗ್ಗುಗಳು ಪಕ್ವಗೊಂಡು ಅರಳುವ ಸಮಯ ಮಾತ್ರ ರಾತ್ರಿಯೇ...

ಹೂಗಳು ರಾತ್ರಿ ಸುಮಾರು ಎಂಟು ಗಂಟೆಯಿಂದ ಅರಳಲು ಆರಂಭವಾಗಿ ಮಧ್ಯರಾತ್ರಿ ವೇಳೆಗೆಲ್ಲಾ ಪೂರ್ಣವಾಗಿ ಅರಳಿ ಸುವಾಸನೆಯನ್ನು ಬೀರಲಾರಂಭಿಸುತ್ತವೆ. ಕೆಂಪು ಪುಷ್ಪಪತ್ರೆಯಲ್ಲಿ ಅಚ್ಚ ಬಿಳಿಯ ದಳಗಳನ್ನೊಳಗೊಂಡ ಹೂಗಳು ಸುಂದರವಾಗಿಯೂ, ಮೋಹಕವಾಗಿಯೂ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ವರ್ಷದಿಂದ ಕಾದು ಕುಳಿತ ಮನೆ ಮಂದಿಗೆ ಕೊನೆಗೂ ಮಧ್ಯರಾತ್ರಿಯಲ್ಲಿ ಅರಳಿ ತನ್ನ ಚೆಲುವನ್ನು ಪ್ರದರ್ಶಿಸುವ ಮೂಲಕ ತುಂಟ ನಗು ಬೀರುವ ಬ್ರಹ್ಮಕಮಲ ತನ್ನ ಸೌಂದರ್ಯವನ್ನು ಹೆಚ್ಚು ಸಮಯಗಳ ಕಾಲ ಸವಿಯಲು ಅವಕಾಶ ನೀಡುವುದಿಲ್ಲ. ರಾತ್ರಿ ಅರಳಿದ ಹೂ ಬೆಳಿಗ್ಗೆಯಾಗುತ್ತಿದ್ದಂತೆಯೇ ಮುದುಡಿ ಮೊಗ್ಗಿನಂತಾಗಿ ಕೊನೆಗೆ ಉದುರಿ ಬಿದ್ದು ಹೋಗಿ ಬಿಡುತ್ತದೆ. ಒಂದು ಗಿಡ ಇಷ್ಟೇ ಹೂ ಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಗಿಡಗಳ ಬೆಳವಣಿಗೆ ಹಾಗೂ ಅವುಗಳ ಶಕ್ತಿಯಾನುಸಾರ ಹೂ ಬಿಡುತ್ತದೆ. ಗಿಡವೊಂದರಲ್ಲಿ ನಾಲ್ಕರಿಂದ ಪ್ರಾರಂಭವಾಗಿ ನೂರಾರು ಹೂಗಳನ್ನು ಬಿಡುತ್ತವೆ. ಗಿಡದ ತುಂಬಾ ಹೂವರಳಿದ ಸಂದರ್ಭ ಅದನ್ನು ನೋಡುವುದೇ ಮಜಾ...