ಓಣಂ ಹಬ್ಬದ ಸಂಭ್ರಮಕ್ಕೆ ಕೊರೋನಾ ಕರಿನೆರಳು

ಓಣಂ ಹಬ್ಬದ ಸಂಭ್ರಮಕ್ಕೆ ಕೊರೋನಾ ಕರಿನೆರಳು

LK   ¦    Aug 29, 2020 12:28:54 PM (IST)
ಓಣಂ ಹಬ್ಬದ ಸಂಭ್ರಮಕ್ಕೆ ಕೊರೋನಾ ಕರಿನೆರಳು

ಕೇರಳದ ನಾಡಹಬ್ಬವಾದರೂ ದೇಶದ ಎಲ್ಲೆಡೆಯೂ ಕೇರಳಿಗರು ವಾಸವಿರುವ ಕಡೆಗಳಲ್ಲಿ ಓಣಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

ಈ ಬಾರಿಯ ಕೊರೋನಾ ಸೋಂಕು ಓಣಂ ಸಂಭ್ರಮಕ್ಕೆ ತಣ್ಣೀರು ಎರಚಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಸಾಮೂಹಿಕವಾಗಿ ಹಬ್ಬವನ್ನು ಆಚರಿಸಿದೆ ತಮ್ಮದೇ ಎಚ್ಚರಿಕೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಹಬ್ಬವನ್ನು ಆಚರಿಸಲು ಮಲಯಾಳಿಗರು ಮುಂದಾಗಿರುವುದು ಕಂಡು ಬರುತ್ತದೆ.

ಹಾಗೆ ನೋಡಿದರೆ ಓಣಂ ಒಂದು ದಿನ ನಡೆಯುವ ಹಬ್ಬವಲ್ಲ. ಹತ್ತು ದಿನಗಳ ಕಾಲ ನಡೆಯುವ ಹಬ್ಬವಾಗಿದ್ದು, ಆಗಸ್ಟ್ 22ರಿಂದಲೇ ಸಂಭ್ರಮ ಆರಂಭವಾಗಿದ್ದು, ಸೆಪ್ಟಂಬರ್ 2ಕ್ಕೆ ತೆರೆಬೀಳಲಿದೆ.

ಕೃಷಿಯ ಹಿನ್ನಲೆಯಲ್ಲಿ ಆಚರಿಸಲ್ಪಡುವ ಈ ಹಬ್ಬ ಕೇರಳಿಗರ ಪಾಲಿಗೆ ಹೊನ್ನಿನ ಹಬ್ಬವಾಗಿ ಜನಜನಿತವಾಗಿದೆ. ಮುಂಗಾರು ಆರಂಭದಿಂದ ಇಲ್ಲಿಯವರೆಗೆ ಮಳೆಯ ಆರ್ಭಟದ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಅದನ್ನೆಲ್ಲಾ ಮುಗಿಸಿ ಹಬ್ಬದ ಆಚರಣೆ ಮಾಡುವುದು ವಿಶೇಷವಾಗಿದೆ.

ಓಣಂ ಹಬ್ಬ ಸಿಂಹ ಮಾಸದಲ್ಲಿ ಬರುತ್ತದೆ. ಸಿಂಹ ಮಾಸದ ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಓಣಂ ಆಚರಣೆಯಲ್ಲಿರುತ್ತದೆಯಾದರೂ ಕೊನೆಯ ಶ್ರಾವಣ ನಕ್ಷತ್ರದ ದಿನ ಬಹುಮುಖ್ಯವಾಗಿದ್ದು, ಇದೇ ತಿರುವೋಣಂ.

ಓಣಂ ಪ್ರಾಚೀನ ಕಾಲದಲ್ಲಿಯೇ ಆಚರಣೆಯಲ್ಲಿತ್ತು ಎನ್ನಲಾಗುತ್ತಿದ್ದು, ಕ್ರಿ.ಶ. 861ರ ರವಿವರ್ಮನ ಕಾಲದ ತಾಮ್ರದ ಶಾಸನದಲ್ಲಿ ಓಣಂ ಕುರಿತಂತೆ ಉಲ್ಲೇಖಗಳಿವೆ ಎಂದು ಹೇಳಲಾಗಿದೆ.

ಓಣಂ ಆಚರಣೆ ಹೇಗೆ ಜಾರಿಗೆ ಬಂತು ಎಂಬುವುದನ್ನು ಪುರಾಣದ ಹಿನ್ನಲೆಯಲ್ಲಿ ನೋಡುವುದಾದರೆ ವಾಮನ ರೂಪದಲ್ಲಿ ಬಂದ ವಿಷ್ಣು ಬಲಿಚಕ್ರವರ್ತಿಯನ್ನು ಮೂರು ಅಡಿ ಜಾಗ ಕೇಳಿ ಆ ಮೂಲಕ ಬಲಿಯನ್ನು ಸಂಹರಿಸುವ ಕಥೆ ಎಲ್ಲರಿಗೂ ತಿಳಿದದ್ದೇ, ಅದರಂತೆ ವಾಮನ ರೂಪದಲ್ಲಿದ್ದ ವಿಷ್ಣು ತ್ರಿವಿಕ್ರಮನಾಗಿ ಬೆಳೆದು ಒಂದು ಪಾದದಿಂದ ಭೂಮಿಯನ್ನು ಇನ್ನೊಂದು ಪಾದದಿಂದ ಆಕಾಶವನ್ನು ಅಳೆದು ಇನ್ನೊಂದು ಪಾದವನ್ನು ಎಲ್ಲಿ ಇಡಲಿ ಎಂದು ಕೇಳುತ್ತಾನೆ. ಮಹಾದಾನಿಯಾಗಿದ್ದ ಬಲಿ ಚಕ್ರವರ್ತಿ ಮಾತಿಗೆ ತಪ್ಪದೆ ತನ್ನ ಶಿರವನ್ನು ತೋರಿಸುತ್ತಾನೆ. ಅದರಂತೆ ವಾಮನ ಅವತಾರದಲ್ಲಿದ್ದ ವಿಷ್ಣು ಆತನ ತಲೆ ಮೇಲೆ ಪಾದವನ್ನಿಡುತ್ತಿದ್ದಂತೆಯೇ ಬಲಿಚಕ್ರವರ್ತಿ ಪಾತಾಳ ಸೇರುತ್ತಾನೆ. ಆದರೆ ಪಾತಾಳ ಸೇರುವ ಮೊದಲು ವರ್ಷಕ್ಕೊಮ್ಮೆ ಪ್ರಜೆಗಳನ್ನು ನೋಡಲು ಅನುಮತಿಯನ್ನು ಕೋರುತ್ತಾನೆ. ಅದಕ್ಕೆ ವಿಷ್ಣು ಒಪ್ಪಿಗೆ ನೀಡುತ್ತಾನೆ. ಅದರಂತೆ ಇಂದಿಗೂ ತಿರುವೋಣಂ ದಿನ ಬಲಿಚಕ್ರವರ್ತಿ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಕೇರಳಿಗರದ್ದಾಗಿದೆ. ಹಾಗಾಗಿ ಮನೆ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿ ಹಾಕಿ ಮಧ್ಯೆ ದೀಪವನ್ನಿಟ್ಟು ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಿ ಬಲಿ ಚಕ್ರವರ್ತಿಗಾಗಿ ಕಾಯುವುದು ಇಂದಿಗೂ ರೂಢಿಯಲ್ಲಿದೆ.

ಹಬ್ಬದ ದಿನದಂದು ಮುಂಜಾನೆ ಎದ್ದು ಸ್ನಾನ ಮಾಡಿ ಹೊಸಬಟ್ಟೆ ಧರಿಸಿ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಮಹಿಳೆಯರು ಶ್ವೇತ ವಸ್ತ್ರಧರಿಸಿ ಹೂವಿನ ರಂಗೋಲಿ ಹಾಕಿ ಮಧ್ಯೆ ಹಣತೆ ಬೆಳಗಿ ಪ್ರಾರ್ಥಿಸುತ್ತಾರೆ. ಮಧ್ಯಾಹ್ನ ಕುಟುಂಬದವರೆಲ್ಲಾ ಒಂದೆಡೆ ಕುಳಿತು ಭೋಜನ ಮಾಡುತ್ತಾರಲ್ಲದೆ, ಗೆಳೆಯರು, ಗೆಳತಿಯರು, ಸಂಬಂಧಿಕರು ಹೀಗೆ ಒಟ್ಟಾಗಿ ಕಲೆತು ಸುಖ ದುಃಖಗಳನ್ನು ಹಂಚಿಕೊಳ್ಳುತ್ತಾರೆ.

ಪ್ರತಿ ಊರಿನಲ್ಲಿ ಬಡವ-ಬಲ್ಲಿದ ಎನ್ನದೆ ಎಲ್ಲರೂ ಒಂದೆಡೆ ಕಲೆತು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಹಬ್ಬದ ಮತ್ತೊಂದು ವಿಶೇಷತೆಯಾಗಿದೆ. ಕೇರಳದಿಂದ ಹೊರ ಹೋಗಿ ನೆಲೆಸಿರುವ ಕೇರಳಿಯರು ಓಣಂ ದಿನದಂದು ಒಂದೆಡೆ ಬೆರೆತು ಹಬ್ಬವನ್ನು ಆಚರಿಸುವ ಪರಿಪಾಠ ಬೆಳೆದು ಬಂದಿದೆ. ಆದರೆ ಈ ಬಾರಿಯ ಓಣಂ ಸಂಭ್ರಮಕ್ಕೆ ಕೊರೋನಾ ಕರಿನೆರಳಾಗಿರುವುದಂತು ಸತ್ಯ.