ಚಾರಣಪ್ರಿಯರಿಗೆ ಮುದ ನೀಡುವ ಕೈಲಾಸ ಬೆಟ್ಟ...

ಚಾರಣಪ್ರಿಯರಿಗೆ ಮುದ ನೀಡುವ ಕೈಲಾಸ ಬೆಟ್ಟ...

B.M. Lavakumar   ¦    Nov 04, 2020 12:18:25 PM (IST)
ಚಾರಣಪ್ರಿಯರಿಗೆ ಮುದ ನೀಡುವ ಕೈಲಾಸ ಬೆಟ್ಟ...

ಹಸಿರು ಹಚ್ಚಡ ನಿಸರ್ಗ ಸುಂದರ ಪರಿಸರದಲ್ಲಿ ಹೆಜ್ಜೆ ಹಾಕುತ್ತಾ ಒಂದಷ್ಟು ಹೊತ್ತನ್ನು ಖುಷಿಯಾಗಿ ಕಳೆಯ ಬೇಕೆಂದುಕೊಳ್ಳುವವರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿರುವ ಕೈಲಾಸ ಬೆಟ್ಟದತ್ತ ಹೆಜ್ಜೆ ಹಾಕಬಹುದಾಗಿದೆ.

ವಾರಾಂತ್ಯದ ಪಿಕ್‍ನಿಕ್‍ಗೆ ಕೈಲಾಸ ಹೇಳಿ ಮಾಡಿಸಿದ ತಾಣವಾಗಿದೆ. ಈಗಂತೂ ಮಳೆಗಾಲ ಕಳೆದು ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿರುವ ಕಾರಣ ಇಡೀ ಪರಿಸರ ಹಚ್ಚಹಸುರಾಗಿದ್ದು, ಈ ಸುಂದರ ಪರಿಸರವನ್ನು ವೀಕ್ಷಿಸುತ್ತಾ ಸಂಚರಿಸುವುದೇ ಒಂಥರಾ ಮಜಾ.. ಅದರಲ್ಲಿಯೂ ಗದ್ದೆ, ತೋಟ ದಾಟಿಕೊಂಡು ಕಾಡಿನ ನಡುವೆ ಹೆಜ್ಜೆ ಹಾಕುತ್ತಾ ಬೆಟ್ಟವೇರುವುದಂತು ಮರೆಯಲಾರದ ಅನುಭವವಾಗುತ್ತದೆ.

ಸ್ಥಳೀಯರು ಇದನ್ನು ಕಲ್ಲೂರಪ್ಪನ ಗುಡ್ಡ ಎಂತಲೂ ಕರೆಯುತ್ತಾರೆ. ಇಲ್ಲಿಗೆ ಹುಣಸೂರಿನಿಂದ ನಾಗರಹೊಳೆ ರಸ್ತೆಯ ಮೂಲಕ ಹೊಸ ಪೆಂಜಳ್ಳಿ ಗೇಟ್‍ಗೆ ತೆರಳಿ ಅಲ್ಲಿಂದ ಹನಗೋಡಿಗೆ ಹೋಗುವ ರಸ್ತೆಯಿಂದ ಹರಳಹಳ್ಳಿ ಕಡೆಗೆ ತೆರಳಿದರೆ ಮಾದಳ್ಳಿ ಪಕ್ಕದಲ್ಲೇ ಕಲ್ಲೂರಪ್ಪನ ಗುಡ್ಡ ಸಿಗುತ್ತದೆ. ಇಲ್ಲಿಗೆ ಹನಗೋಡು ಕಡೆಯಿಂದ ಕಿರಂಗೂರು ಮಾರ್ಗವಾಗಿಯೂ ತೆರಳ ಬಹುದಾಗಿದ್ದು, ಹನಗೋಡಿನಿಂದ  ಸುಮಾರು ಐದು ಕಿ.ಮೀ. ದೂರದಲ್ಲಿದೆ.

ಕೈಲಾಸಬೆಟ್ಟವು ನಿಸರ್ಗ ನಿರ್ಮಿತ ತಾಣವಾಗಿದೆ. ಇಲ್ಲಿ ಕಲ್ಲೂರೇಶ್ವರಸ್ವಾಮಿಯ ದೇವಾಲಯ ಬಂಡೆಗಳ ನಡುವೆ ನಿರ್ಮಿತವಾಗಿದೆ. ಈ ತಾಣಕ್ಕೆ ಆಸ್ತಿಕರು, ನಾಸ್ತಿಕರೆನ್ನದೆ ಎಲ್ಲರೂ ತೆರಳಬಹುದಾಗಿದೆ. ಇಲ್ಲಿಗೆ ಬರುವವರನ್ನು ಹಸಿರನ್ನೊದ್ದ ಸುಂದರ ನಿಸರ್ಗ, ಬೆಟ್ಟದ ಮೇಲೆ ಆಳೆತ್ತರ ನಿಂತ ಬೃಹತ್ ಬಂಡೆಕಲ್ಲುಗಳು ಕೈ ಬೀಸಿ ಕರೆದರೆ ಹೆಬ್ಬಂಡೆಗಳ ನಡುವೆ ವಿರಾಜಮಾನನಾಗಿರುವ ಕಲ್ಲೂರೇಶ್ವರಸ್ವಾಮಿ ಹರಸಲು ನಿಂತಂತೆ ಗೋಚರಿಸುತ್ತದೆ.

ಇನ್ನು ಕಲ್ಲೂರೇಶ್ವರ ಬೆಟ್ಟವನ್ನೇರಲು ರಸ್ತೆಯಿಂದ ಸುಮಾರು 70 ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಈ ಮೆಟ್ಟಿಲುಗಳನ್ನೇರುತ್ತಾ ಹೋದರೆ 50ಕ್ಕೂ ಹೆಚ್ಚು ತರಾವರಿ ಕಲ್ಲುಬಂಡೆಗಳು ಗಮನಸೆಳೆಯುತ್ತವೆ. ಇಲ್ಲಿನ ಪ್ರಮುಖ ಆಕರ್ಷಣೆಯೇ ಬಂಡೆಗಳಾಗಿದ್ದು, ಆಕಾಶದೆತ್ತರಕ್ಕೆ ಎದ್ದು ನಿಂತಂತೆ ಭಾಸವಾಗುವ ಬೃಹತ್ ಗಾತ್ರದ ಬಂಡೆಗಳು ಪ್ರಮುಖ ಆಕರ್ಷಣೆಯಾಗಿವೆ. ಒಂದೊಂದೇ ಮೆಟ್ಟಿಲೇರುತ್ತಾ ಹೋದಂತೆಯೇ ಬೀಸಿ ಬರುವ ತಂಗಾಳಿ ಮೆಟ್ಟಿಲೇರುವಾಗ ಆಗುವ ಆಯಾಸವನ್ನು ತಣಿಸುತ್ತದೆ. ಗುಡ್ಡದ ಮೇಲಿನÀ  ಎರಡು ಬೃಹತ್ ಬಂಡೆಗಳು ಯಾವುದೇ ಆಸರೆಯಿಲ್ಲದೆ ನಿಂತಿದ್ದು, ಮೇಲ್ನೋಟಕ್ಕೆ ಆಮೆಯಂತೆ ಗೋಚರಿಸುತ್ತದೆ.

ಈ ಎರಡು ಬೃಹತ್ ಬಂಡೆಗಳ ನಡುವೆ ಕಲ್ಲೂರೇಶ್ವರನ ಪ್ರತಿಮೆ, ನೂರೊಂದು ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಮತ್ತೊಂದು ಬಂಡೆಯ ಗುಹೆಯಲ್ಲಿ ಲಿಂಗವಿದ್ದು, ಈ ಲಿಂಗಕ್ಕೆ ನಿತ್ಯ ಪೂಜೆ ನಡೆಯುತ್ತದೆ.

ಹಿಂದಿನ ಕಾಲದಲ್ಲಿ ಈ ಕೈಲಾಸ ಬೆಟ್ಟವು ದಟ್ಟಾರಣ್ಯದಿಂದ ಕೂಡಿ, ಹುಲಿಗಳ ಆವಾಸ ತಾಣವಾಗಿತ್ತು. ಆದರೆ ಈಗ ಸುತ್ತಲಿನ ಅರಣ್ಯವೆಲ್ಲ ಸಾಗುವಳಿ ಭೂಮಿಯಾಗಿದೆ. ಆದರೆ ಅವತ್ತು ಹುಲಿಗಳು ಇದ್ದವು ಎಂಬುದಕ್ಕೆ ಇಲ್ಲಿರುವ ಹುಲಿಗುಹೆ ಸಾಕ್ಷಿಯಾಗಿ ನಿಂತಿದೆ.