ಕಾವೇರಿ ಸೃಷ್ಟಿಸಿದ ರಮಣೀಯ ಜಲಧಾರೆಗಳು…

ಕಾವೇರಿ ಸೃಷ್ಟಿಸಿದ ರಮಣೀಯ ಜಲಧಾರೆಗಳು…

LK   ¦    Oct 14, 2020 10:14:11 AM (IST)
ಕಾವೇರಿ ಸೃಷ್ಟಿಸಿದ ರಮಣೀಯ ಜಲಧಾರೆಗಳು…

ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ತಾನು ಹರಿದಲೆಲ್ಲ ಪವಿತ್ರ ತಾಣಗಳನ್ನು, ನಿಸರ್ಗ ರಮಣೀಯ ಜಲಧಾರೆಗಳನ್ನು ಸೃಷ್ಟಿಸಿದ್ದಾಳೆ. ಈ ಪೈಕಿ ಗಗನಚುಕ್ಕಿ ಮತ್ತು ಭರಚುಕ್ಕಿ ಪ್ರವಾಸಿಗರ ಸೆಳೆಯುವ ಜಲಧಾರೆಗಳಾಗಿ ಗಮನಸೆಳೆಯುತ್ತಿವೆ.

ಕಾವೇರಿ ಕೊಡಗಿನಿಂದ ಮುಂದೆ ಹಲವು ಉಪ ನದಿಗಳೊಂದಿಗೆ ಸಂಗಮಗೊಂಡು ಕೆಆರ್‍ಎಸ್ ತಲುಪುತ್ತಾಳೆ. ಬಳಿಕ ಟಿ.ನರಸೀಪುರ ಬಳಿ ಕಬಿನಿ ಇತರೆ ಉಪನದಿಗಳು ಸಂಗಮವಾಗುತ್ತವೆ. ಈ ಸಂದರ್ಭ ಕಾವೇರಿ ರೌದ್ರತೆಯನ್ನು ತಾಳುತ್ತಾಳೆ. ಬೆಟ್ಟಗುಡ್ಡ, ಕಾಡುಮೇಡುಗಳನ್ನೆಲ್ಲಾ ಕ್ರಮಿಸುತ್ತಾ ಶಿವನಸಮುದ್ರ ತಲುಪುತ್ತಿದ್ದಂತೆಯೇ ಗಗನದೆತ್ತರದಿಂದ ಧುಮುಕಿ ಗಗನಚುಕ್ಕಿಯಾಗಿ, ಬಳಿಕ ಭರದಿಂದ ಹರಿದು ಭರಚುಕ್ಕಿಯಾಗಿ ಗಮನಸೆಳೆಯುತ್ತಾಳೆ. ನಿಸರ್ಗದ ನಡುವೆ ಹೆಬ್ಬಂಡೆಗಳ ಮೇಲೆ ಹಾಲ್ನೊರೆಯಾಗಿ ಧುಮುಕುತ್ತಾ ವೀಕ್ಷಕರ ಮನಕ್ಕೆ ಲಗ್ಗೆಯಿಡುವ ಈ ಜಲಧಾರೆಗಳು ಶಿವನಸಮುದ್ರದ ಮುಕುಟ ಮಣಿಗಳಾಗಿವೆ.

ಈ ಎರಡು ಜಲಧಾರೆಗಳು ಕೆಲವೇ ಕೆಲವು ಕಿಲೋಮೀಟರ್ ದೂರದ ಅಂತರದಲ್ಲಿದ್ದರೂ ಇವು ಬೇರೆ, ಬೇರೆ ಜಿಲ್ಲೆಗಳಿಗೆ ಸೇರಿವೆ. ಭರಚುಕ್ಕಿ ಚಾಮರಾಜನಗರಕ್ಕೆ ಸೇರಿದರೆ, ಗಗನಚುಕ್ಕಿ ಮಂಡ್ಯ ಜಿಲ್ಲೆಗೆ ಸೇರಿದೆ. ಈ ಜಲಧಾರೆಗಳು ನಯನಮನೋಹರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ವಿದ್ಯುತ್ ಉತ್ಪಾದನಾ ಘಟಕವನ್ನು ನೋಡಲು ಮುಗಿ ಬೀಳುತ್ತಾರೆ. ಹೀಗಾಗಿ ಈ ವಿದ್ಯುತ್ ಉತ್ಪಾದನಾ ಘಟಕಗಳನ್ನು ವೀಕ್ಷಿಸಲೆಂದೇ ಟ್ರಾಲಿಗಳನ್ನು ನಿರ್ಮಿಸಲಾಗಿದೆ. ಬ್ರಿಟೀಷರು ಶಿವನಸಮುದ್ರ ವಿದ್ಯುತ್ ಉತ್ಪಾದನಾ ಘಟಕವನ್ನು ಬ್ಲಫ್ ಎಂಬ ಹೆಸರಿನಿಂದ ಕರೆಯುತ್ತಿದ್ದರು.

ಶಿವನಸಮುದ್ರಕ್ಕೆ ಬೆಂಗಳೂರಿನಿಂದ ಬರುವುದಾದರೆ ರಾಮನಗರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಮೂಲಕ ಹಾಗೂ ಮೈಸೂರಿನಿಂದ ಬನ್ನೂರು, ಮಳವಳ್ಳಿ ಅಥವಾ ಚಾಮರಾಜನಗರ, ಕೊಳ್ಳೆಗಾಲ ಮೂಲಕವೂ ಬರಬಹುದು. ಶಿವನಸಮುದ್ರಕ್ಕೆ ತೆರಳಿದರೆ ಸುತ್ತಮುತ್ತಲಿರುವ ತಲಕಾಡು, ಸೋಮನಾಥಪುರ ಮುಂತಾದ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಬರಬಹುದಾಗಿದೆ.

ಇಲ್ಲಿಗೆ ತೆರಳಲು ಹೆಚ್ಚಿನ ಬಸ್ ಸಂಪರ್ಕ ಇಲ್ಲದಿರುವುದರಿಂದ ಬಾಡಿಗೆ ಅಥವಾ ಸ್ವಂತ ವಾಹನಗಳಲ್ಲಿ ತೆರಳಬೇಕಾಗುತ್ತದೆ.  ಶಿವನಸಮುದ್ರಕ್ಕೆ ತೆರಳುವ ಪ್ರವಾಸಿಗರು ಇಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಧಾರೆಗಳನ್ನು ದೂರದಿಂದ ನೋಡಿ ಹಿಂತಿರುಗಿದರೆ ಕ್ಷೇಮ. ಅದು ಬಿಟ್ಟು ಜಲಧಾರೆಯ ಸೌಂದರ್ಯಕ್ಕೆ ಮನಸೋತು ಜಲಧಾರೆಯಲ್ಲಿ ಈಜುವ, ಸ್ನಾನ ಮಾಡುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇಲ್ಲಿ ಪ್ರಾಣಕಳೆದುಕೊಂಡವರ ದೊಡ್ಡಪಟ್ಟಿಯೇ ಇದೆ.

ಶಿವನಸಮುದ್ರದಲ್ಲಿ ಮಾರಮ್ಮನ ದೇವಾಲಯವಿದ್ದು ಕೋಳಿ, ಕುರಿಗಳನ್ನು ಬಲಿಕೊಡಲಾಗುತ್ತದೆ.  ಇನ್ನು ಇಲ್ಲಿ ಐತಿಹಾಸಿಕ  ದರ್ಗಾವೂ ಇದೆ. ದೂರದಿಂದ ತೆರಳುವ ಪ್ರವಾಸಿಗರಿಗೆ ಅಲ್ಲಿ ಉಳಿದುಕೊಳ್ಳಲು ಯಾವುದೇ ಸೌಲಭ್ಯವಿಲ್ಲ ಹಾಗಾಗಿ ಸಮೀಪದ ಪಟ್ಟಣಗಳಾದ ಕೊಳ್ಳೆಗಾಲ ಅಥವಾ ಮಳವಳ್ಳಿಗೆ ಹೋಗಬೇಕಾಗುತ್ತದೆ.