ಮೈಸೂರಿನ ಅಪೂರ್ವ ವೇಣುವಾದಕಿ ಸ್ಮಿತಾ ಶ್ರೀ ಕಿರಣ್

ಮೈಸೂರಿನ ಅಪೂರ್ವ ವೇಣುವಾದಕಿ ಸ್ಮಿತಾ ಶ್ರೀ ಕಿರಣ್

LK   ¦    Oct 23, 2020 07:37:02 PM (IST)
ಮೈಸೂರಿನ ಅಪೂರ್ವ ವೇಣುವಾದಕಿ ಸ್ಮಿತಾ ಶ್ರೀ ಕಿರಣ್

ವೇಣುವಾದನದ ಮೂಲಕ ಗಮನಸೆಳೆದವರು ಮೈಸೂರು ನಿವಾಸಿಯಾದ ಸ್ಮಿತಾ ಕಿರಣ್. ಇವರು ಕೊಳಲು ಹಿಡಿದರೆಂದರೆ ಮೈಮನಪುಳಗೊಳ್ಳುತ್ತದೆ. ಏಕೆಂದರೆ ಕೊಳಲಿನಿಂದ ಹೊರ ಬರುವ ನಾದವನ್ನು ಆಲಿಸುವುದೇ ಮನಸ್ಸಿಗೆ ಮುದ ನೀಡುವುದು.

ಸ್ಮಿತಾ ಅವರು ಕೊಳಲು ನುಡಿಸುವುದೇ ಒಂದು ಚೆಂದ.  ಅದನ್ನು ಕೇಳುವುದೇ ಒಂದು ಮಹದಾನಂದ.  ವಿದುಷಿ ಅದಿತಿ (ವಯೊಲಿನ್) ಮತ್ತು ವಿದ್ವಾನ್ ಕುಮಾರಸ್ವಾಮಿ (ಮೃದಂಗ) ಅವರುಗಳ ಪಕ್ಕವಾದ್ಯಗಳೊಡನೆ ಇವರು ಕೊಳಲು ನುಡಿಸುತ್ತಿದ್ದರೆ ನಿಜಕ್ಕೂ ಅದು ಸಂಗೀತ ಸಾಗರದ ಗಾನಾಮೃತವೇ ಸರಿ. ಸ್ಮಿತಾ ಅವರು ಕೊಳಲಿಗೆ ಒಲಿದಿದ್ದಾರೋ, ಕೊಳಲೇ ಇವರಿಗೆ ಒಲಿದಿದೆಯೋ ಏನೋ ಒಟ್ಟಿನಲ್ಲಿ ಕೊಳಲಿಗೂ ಇವರಿಗೂ ಅಂಥಾ ಅವಿನಾಭಾವ ಸಂಬಂಧ. ಕೊಳಲು ವಾದನದಲ್ಲಿ ಸಿದ್ಧಹಸ್ತರಿವರು.  ಇದಿವರಿಗೆ ಸುಖಾಸುಮ್ಮನೆ ಸಿದ್ಧಿಸಿದ್ದಲ್ಲ.  ಇದರ ಹಿಂದೆ ಇವರ ಪರಿಶ್ರಮವೂ ಬಹುದೊಡ್ಡದಿದೆ.  ಕೇವಲ ಏಳರ ಎಳೆ ವಯಸ್ಸಿನಲ್ಲೇ ಕೊಳಲು ವಾದನದತ್ತ ಆಸಕ್ತಿ ತಳೆದ ಸ್ಮಿತಾ ಅವರಿಗೆ ತಾಯಿ ವಿಜಯಾ ಸುಬ್ರಹ್ಮಣ್ಯಂ ಅವರೇ ಮೊದಲಗುರು.  ಮೂಲತಃ ಸಂಗೀತದ ಹಿನ್ನೆಲೆಯ ಕುಟುಂಬದಿಂದ ಬಂದ ಇವರಿಗೆ ಒಂದು ರೀತಿ ಸಂಗೀತವೆಂಬುದು ರಕ್ತಗತವಾಗಿ ಬಂದದ್ದೇ ಎನ್ನಬಹುದು.  ಇವರ ತಾಯಿ ಹಾಗೂ ಅಕ್ಕಂದಿರೆಲ್ಲರೂ ಶಾಸ್ತ್ರೀಯ ಸಂಗೀತ ಕಲಾವಿದರೇ ಆಗಿದ್ದಾರೆ.  ಹಾಗಾಗಿ ಇವರು ಸಂಗೀತದ ಹಾದಿಯಲ್ಲಿ ಸುಲಭವಾಗಿ ನಡೆದು ಬರುವಂತಾಯ್ತು.  ವಿದ್ವಾನ್ ಎ.ವಿ. ಪ್ರಕಾಶ್ ಅವರ ಬಳಿ ಕೊಳಲು ವಾದನವನ್ನು ಕಲಿತ ಸ್ಮಿತಾ ಅವರು ವಿದುಷಿ ಆರ್.ಎನ್. ಶ್ರೀಲತಾ ಅವರ ಹತ್ತಿರ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತು ಗುರುಗಳೀರ್ವರಲ್ಲೂ ಭೇಷ್ ಎನಿಸಿಕೊಂಡಿದ್ದಾರೆ.

ತಮ್ಮ ಕೊಳಲು ವಾದನದ ಮೂಲಕ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಮಿತಾ ಅವರು ಇದುವರೆಗೆ ಅರ್ಧ ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ಎಲ್ಲೆಡೆ ನೀಡಿ ಸಂಗೀತ ಪ್ರೇಮಿಗಳ ಮನತಣಿಸಿದ್ದಾರೆ. ಯುಗಾದಿ ಉತ್ಸವ ಹಾಗೂ ಜಗದ್ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ಮೈಸೂರು ಅರಮನೆಯ ದರ್ಬಾರ್‍ಹಾಲ್‍ನಲ್ಲಿ ಇವರು ಕೊಳಲು ನುಡಿಸಿದ್ದಾರೆ.  ಐತಿಹಾಸಿಕ ಜಗನ್ಮೋಹನ ಅರಮನೆಯಲ್ಲೂ ಇವರ ಕೊಳಲಿನ ನಿನದ ಮಾರ್ದನಿಸಿದೆ.  ನಾದಬ್ರಹ್ಮ ಯುವ ಸಂಗೀತೋತ್ಸವ, ಜೆ.ಎಸ್.ಎಸ್. ಸಂಗೀತ ಸಭಾ ಉತ್ಸವ, ಗಾನಕಲಾ ಪರಿಷತ್‍ನ ಯುವಗಾನ ಮೇಳ, ಚಂದನ ಉತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದಯ ವನದಲ್ಲಿ ಉದಯರಾಗ, ನಾದಜ್ಯೋತಿ ಸಂಗೀತ ಉತ್ಸವ ಮುಂತಾದ ಸುಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಸ್ಮಿತಾ ಅವರು ತಮ್ಮ ಕೊಳಲು ವಾದನ ನಡೆಸಿ ಕೊಟ್ಟಿದ್ದಾರೆ.

ಗಾಯನ ಪರಂಪರೆಯನ್ನು ತಮ್ಮೊಡಲಲ್ಲಿಟ್ಟುಕೊಂಡು ಸಂಗೀತವನ್ನು ಉಸಿರಾಡುತ್ತಿರುವ ಮೈಸೂರಿನ ಬಿಡಾರಂ ಕೃಷ್ಣಪ್ಪ ಮಂದಿರ, ತ್ಯಾಗರಾಜ ಸಂಗೀತಸಭಾ, ಗಾನಭಾರತಿ, ಪ್ರಸನ್ನ ಸುಂದರ ರಾಮಮಂದಿರ, ಕೃಷ್ಣ ಗಾನಸಭಾ, ಸುರಭಿಗಾನ ಕಲಾ ಮಂದಿರ, ಶ್ರುತಿ ಮಂಜರಿ ಫೌಂಡೇಷನ್, ಸುಶಿರಾ ಮತ್ತು ಭಗಿನಿ ಸೇವಾ ಸಮಾಜ ಒಳಗೊಂಡಂತೆ ಬೆಂಗಳೂರು, ಮಂಗಳೂರು, ಉಡುಪಿ, ಹಾಸನ, ಮಂಡ್ಯ, ಬೆಳಗಾಂ, ಶ್ರೀರಂಗಪಟ್ಟಣ, ನಂಜನಗೂಡು ಮುಂತಾದ ಸ್ಥಳಗಳ ಐತಿಹಾಸಿಕ ಮಹತ್ವದ ತಾಣಗಳಲ್ಲಿ ಕರ್ನಾಟಕದಾದ್ಯಂತ ಸ್ಮಿತಾ ಅವರು ತಮ್ಮ ಕೊಳಲು ವಾದನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.  ಜನಮೆಚ್ಚಿದ ವೇಣುವಾದಕಿಯಾಗಿ ಸೈ ಎನಿಸಿಕೊಂಡಿದ್ದಾರೆ.  ನಾಡಿನಲ್ಲಷ್ಟೇ ಅಲ್ಲದೆ ನಾಡಿನಿಂದಾಚೆಗೂ ದೇಶದಿಂದಾಚೆಗೂ ಚೆನ್ನೈ, ವಿಜಯವಾಡ, ನಾಗ್ಪುರ, ತಿರುಪತಿ, ಕರ್ನೂಲ್, ಕ್ಯಾಲಿಕಟ್, ಹೈದರಾಬಾದ್ ಹಾಗೂ ಪೂರ್ವ ಆಫ್ರಿಕಾದ ನೈರೋಬಿಯ ಮುಂತಾದೆಡೆಗಳಲ್ಲೆಲ್ಲಾ ಸ್ಮಿತಾ ಅವರ ಕೊಳಲು ವಾದನದ ಇಂಪು ಮಧುರವಾಗಿ ಹರಡಿದೆ.