ಮಳೆಗಾಲದಲ್ಲಿ ಆದಾಯ ತಂದುಕೊಡುವ ಉಪ್ಪಾಗೆ!

ಮಳೆಗಾಲದಲ್ಲಿ ಆದಾಯ ತಂದುಕೊಡುವ ಉಪ್ಪಾಗೆ!

LK   ¦    Jun 22, 2020 05:02:18 PM (IST)
ಮಳೆಗಾಲದಲ್ಲಿ ಆದಾಯ ತಂದುಕೊಡುವ ಉಪ್ಪಾಗೆ!

ಕೊಡಗಿನಲ್ಲಿ ವಾಣಿಜ್ಯ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯಲಾಗುತ್ತದೆ. ಅದನ್ನು ಹೊರತುಪಡಿಸಿದರೆ ಭತ್ತ ಬೆಳೆಯಲಾಗುತ್ತದೆ. ಒಂದಷ್ಟು ಗ್ರಾಮೀಣ ಪ್ರದೇಶದ ಜನ ಜನ ತಮ್ಮ ಅಗತ್ಯತೆಗೆ ತಕ್ಕಂತೆ ತರಕಾರಿಗಳನ್ನು ಬೆಳೆದರೆ ಹೆಚ್ಚಿನವರು ಹೊರಗಿನಿಂದ ಬರುವ ತರಕಾರಿಯನ್ನೇ ಅವಲಂಬಿಸಿದ್ದಾರೆ.

ಫೆಬ್ರವರಿ ಅಥವಾ ಮಾರ್ಚ್‍ನಲ್ಲಿ ಕೊಯ್ಲಿಗೆ ಬರುವ ಕಾಫಿ ಮತ್ತು ಕರಿಮೆಣಸು ಆದಾಯ ತಂದುಕೊಡುತ್ತದೆ. ಅದರಲ್ಲಿಯೇ ವರ್ಷ ಪೂರ್ತಿ ದಿನ ಕಳೆಯಬೇಕು. ಮೊದಲಾದರೆ ಹೆಚ್ಚಿನವರು ಏಲಕ್ಕಿಯನ್ನು ಬೆಳೆಯುತ್ತಿದ್ದರು. ಏಲಕ್ಕಿ ಆಗಸ್ಟ್ ತಿಂಗಳಿನಿಂದ ಕೊಯ್ಲಿಗೆ ಬರುತ್ತಿತ್ತು. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿತ್ತು.

ಕಳೆದೊಂದು ದಶಕಗಳಿಂದ ಕೊಡಗಿನಲ್ಲಿ ಏಲಕ್ಕಿ ಬೆಳೆ ಕ್ಷೀಣಿಸಿದೆ. ಹೀಗಾಗಿ ಕಾಫಿ ಮತ್ತು ಕರಿಮೆಣಸಿನಿಂದ ಬರುವ ಆದಾಯದಿಂದಲೇ ವರ್ಷ ಪೂರ್ತಿ ದಿನ ಕಳೆಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಮಳೆಗಾಲದಲ್ಲಿ ಒಂದಷ್ಟು ಆದಾಯವನ್ನು ಕಾಡು ಉತ್ಪನ್ನವಾದ ಉಪ್ಪಾಗೆ ತಂದುಕೊಡುತ್ತಿದೆ.

ಉಪ್ಪಾಗೆಯನ್ನು ಕೊಡಗಿನವರು ಪಣಂಪುಳಿ ಎನ್ನುತ್ತಾರೆ. ಇಲ್ಲಿನ ಕಾಡುಗಳಲ್ಲಿ ಹಾಗೂ ಕಾಫಿ ಏಲಕ್ಕಿ ತೋಟಗಳಲ್ಲಿ ಹೆಮ್ಮರವಾಗಿ ಬೆಳೆಯುವ ಮರಗಳು ಮಳೆಗಾಲದ ವೇಳೆಗೆ ಕೊಯ್ಲಿಗೆ ಬರುತ್ತದೆ. ಹೀಗಾಗಿ ಆದಾಯವಿಲ್ಲದ ದಿನಗಳಲ್ಲಿ ಇದು ಆರ್ಥಿಕವಾಗಿ ರೈತರನ್ನು ಕಾಪಾಡುವ ಮೂಲಕ ರೈತರಿಗೆ ವರದಾನವಾಗಿದೆ.

ಈ ಮರಗಳು ಸುಮಾರು 20 ರಿಂದ 30 ಮೀಟರ್ ಎತ್ತರ ಬೆಳೆಯುತ್ತಿದ್ದು, ಹೂಗಳು ಕೆಂಪು ಮಿಶ್ರಿತ ಹಳದಿ ಬಣ್ಣದಿಂದ ಕೂಡಿರುತ್ತದೆ. ಹಸಿರು ಬಣ್ಣದ ಕಾಯಿ ಹಣ್ಣಾಗುತ್ತಿದ್ದಂತೆಯೇ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಣ್ಣಿನ ಮೇಲ್ಭಾಗ 6 ರಿಂದ 8 ಗೆರೆಗಳಿಂದ ಕೂಡಿ, ಉಬ್ಬು-ತಗ್ಗುಗಳನ್ನು ಒಳಗೊಂಡಿರುತ್ತದೆ. ಹಣ್ಣಿನಲ್ಲಿ ಸುಮಾರು 6-8 ಬೀಜಗಳಿರುತ್ತವೆ.

ಇದು ಮಾರ್ಚ್‍ನಲ್ಲಿ ಹೂ ಬಿಟ್ಟು ಜೂನ್-ಜುಲೈ ತಿಂಗಳಲ್ಲಿ ಹಣ್ಣಾಗುತ್ತದೆ. ಪ್ರತಿದಿನವೂ ಹಣ್ಣಾದ ಉಪ್ಪಾಗೆ ನೆಲಕ್ಕೆ ಬೀಳುತ್ತದೆ. ಅದನ್ನು ಆಯ್ದು ತರಬಹುದು ಅಥವಾ ಒಮ್ಮೆಗೆ ಕೊಯ್ಲು ಮಾಡಿ ತಂದು ಅದರೊಳಗಿನ ಬೀಜವನ್ನು ತೆಗೆದು  ಬಿದಿರುವಿನ ತಟ್ಟಿ, ಅಥವಾ ಕಬ್ಬಿಣದ ಪರದೆ ಮೇಲೆ ಹಾಕಿ ಕೆಳಗಿನಿಂದ ಬೆಂಕಿಯ ಶಾಖದಿಂದ ನೀಡಿ ಒಣಗಿಸಲಾಗುತ್ತದೆ. ಒಣಗಿದ ಸಿಪ್ಪೆಯನ್ನು ಕೆಜಿಗಿಷ್ಟು ಎಂಬಂತೆ ದರ ನಿಗದಿ ಮಾಡಿ ಮಾರಾಟ ಮಾಡಲಾಗುತ್ತದೆ.

ಇದನ್ನು ಖರೀದಿಸಲು ಮನೆಮನೆಗೆ ಕೆಲವು ವ್ಯಾಪಾರಿಗಳು ಬರುತ್ತಾರೆ. ಅಥವಾ ಅಂಗಡಿಗಳಲ್ಲಿಯೂ ಕೊಂಡು ಕೊಳ್ಳಲಾಗುತ್ತದೆ. ಇನ್ನು ಕೆಲವರು ಅದನ್ನು ತಂದು ಕೊಳೆಯಲು ಹಾಕುತ್ತಾರೆ, ಅದು ಕೊಳೆಯಲು ಆರಂಭಿಸಿ ನೀರು ಸುರಿಯಲಾರಂಭಿಸುತ್ತದೆ. ಈ ನೀರನ್ನು ಸಂಗ್ರಹಿಸಿ ಅದನ್ನು ಚೆನ್ನಾಗಿ ಕುದಿಸಿದರೆ ಕಪ್ಪು ಬಣ್ಣದ ಮಂದವಾದ ದ್ರವ ಉತ್ಪತ್ತಿಯಾಗುತ್ತದೆ. ಇದನ್ನು ಕಾಚಂಪುಳಿ ಎಂದು ಕರೆಯಲಾಗುತ್ತದೆ. ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಇದು ಮಾಂಸದ ಸಾಂಬಾರಿಗೆ ಹೆಚ್ಚಿನ ರುಚಿ ನೀಡುತ್ತದೆ. ಜೊತೆಗೆ ಇದರಲ್ಲಿ ಹಲವು ರೀತಿಯ ಔಷಧೀಯ ಗುಣಗಳಿರುವುದರಿಂದ ಆರೋಗ್ಯಕಾರಿಯಾಗಿದೆ.

ಮಲೆನಾಡು ರೈತರ ಪಾಲಿಗೆ ಒಂದಷ್ಟು ಆದಾಯ ತರುವ ಉಪ್ಪಾಗೆ ಮಳೆಗಾಲದ ಕಲ್ಪವೃಕ್ಷ ಎಂದರೆ ತಪ್ಪಾಗಲಾರದು. ಹಿಂದಿನ ಕಾಲದಲ್ಲಿ ಇದರ ಬೀಜದಿಂದ ತುಪ್ಪವನ್ನು ತಯಾರಿಸುತ್ತಿದ್ದರು. ಇದರ ತುಪ್ಪ ತಯಾರಿಸುವುದು ಕಷ್ಟವಾದರೂ ರುಚಿ ಮತ್ತು ಆರೋಗ್ಯಕಾರಿಯಾಗಿತ್ತು.

ಇತ್ತೀಚೆಗಿನ ವರ್ಷಗಳಲ್ಲಿ ಮರಗಳನ್ನು ಕಡಿದು ಕಾಫಿ ತೋಟ ನಿರ್ಮಾಣ ಮಾಡುತ್ತಿರುವ ಕಾರಣ ಮತ್ತು ಹಲವು ರೀತಿಯ ಬೆಳವಣಿಗೆಯಿಂದಾಗಿ ಉಪ್ಪಾಗೆ ಮರಗಳು ನಾಶಗೊಳ್ಳುತ್ತಿವೆ. ಅವುಗಳನ್ನು ರಕ್ಷಿಸುವ ಕೆಲಸವಾಗಬೇಕಿದೆ.