ಮೈಸೂರಿನ ಗೊಮ್ಮಟಗಿರಿಯ ‘ಗೊಮ್ಮಟೇಶ್ವರ’

ಮೈಸೂರಿನ ಗೊಮ್ಮಟಗಿರಿಯ ‘ಗೊಮ್ಮಟೇಶ್ವರ’

LK   ¦    Mar 05, 2021 01:24:09 PM (IST)
ಮೈಸೂರಿನ ಗೊಮ್ಮಟಗಿರಿಯ ‘ಗೊಮ್ಮಟೇಶ್ವರ’

ಮೈಸೂರಿಗೆ ಆಗಮಿಸುವ ಪ್ರವಾಸಿಗರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ  ಬೆಟ್ಟದೂರು ಗ್ರಾಮ ಪಂಚಾಯಿತಿಗೆ ಸೇರುವ ಶ್ರೀ ಗೊಮ್ಮಟಗಿರಿ ಬೆಟ್ಟಕ್ಕೆ ತೆರಳಿದ್ದೇ ಆದರೆ ಆ ಬೆಟ್ಟದಲ್ಲಿ ನೆಲೆ ನಿಂತಿರುವ ಗೊಮ್ಮಟೇಶ್ವರನಿಗೆ ನಮೋ ಎನ್ನಬಹುದು.

ನಿಸರ್ಗ ಸೌಂದರ್ಯದೊಂದಿಗೆ ಬೃಹತ್ ಬೆಟ್ಟದ ಮೇಲೆ ವಿರಾಜಮಾನನಾಗಿರುವ ಗೊಮ್ಮಟೇಶ್ವರ ಕಳೆದ ಎಳೆಂಟು ಶತಮಾನಗಳಿಂದ ಭಕ್ತರನ್ನು ಹರಸುತ್ತಲೇ ಬಂದಿದ್ದಾನೆ. ಜೈನ ಭಕ್ತರು ಇಲ್ಲಿಗೆ ತೆರಳಿ ಗೊಮ್ಮಟೇಶ್ವರನ ದರ್ಶನ ಮಾಡಿ ಬರುತ್ತಾರೆ. ಈ ತಾಣ ಶ್ರವಣಬೆಳಗೊಳದಂತೆ ಪ್ರಖ್ಯಾತ ಹೊಂದಿಲ್ಲದಿದ್ದರೂ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ.

ಸುಮಾರು ಇನ್ನೂರು ಅಡಿ ಎತ್ತರ, ಇನ್ನೂರೈವತ್ತು ಅಡಿ ಅಗಲದ ಹೆಬ್ಬಂಡೆಯಲ್ಲಿ ಹದಿನಾರು ಅಡಿ ಎತ್ತರದ ಏಕಶಿಲೆಯಲ್ಲಿ ಗೊಮ್ಮಟೇಶ್ವರನನ್ನು ಕೆತ್ತಲಾಗಿದೆ. ಈ ಮೂರ್ತಿಯನ್ನು ತಲುಪಬೇಕಾದರೆ ಹೆಬ್ಬಂಡೆಯ ಸುಮಾರು ತೊಂಬತ್ತು ಮೆಟ್ಟಿಲನ್ನು ಹತ್ತಿ ಸಾಗಬೇಕು. ಹೀಗೆ ಸಾಗಿದ ಮೇಲೆ ಹತ್ತಿರದಿಂದ ಕಾಣುವ ಗೊಮ್ಮಟೇಶ್ವರನ ಮೂರ್ತಿ ನಿಜಕ್ಕೂ ನೋಡುಗರ ಆಯಾಸವನ್ನು ತಣಿಸಿ ಮನಸ್ಸು ಪ್ರಶಾಂತಗೊಳಿಸುತ್ತದೆ.

ಇನ್ನು ಈ ಗೊಮ್ಮಟೇಶ್ವರನ ನಿರ್ಮಾಣದ ಕುರಿತಂತೆ ಯಾವುದೇ ಶಾಸನಗಳು ಲಭ್ಯವಾಗಿಲ್ಲ. ಹೀಗಾಗಿ ಕೆಲವರು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ ಈ ಭಾಗದಲ್ಲಿದ್ದ ಗಂಗರಸರು ಈ ಮೂರ್ತಿಯನ್ನು ನಿರ್ಮಿಸಿರಬಹುದೆಂದು ಹೇಳಿದರೆ ಮತ್ತೆ ಕೆಲವರು ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮೂರ್ತಿ ಕೆತ್ತಿದ ಚಾವುಂಡರಾಯನೇ ಇದನ್ನು ಕೆತ್ತಿರಬಹುದೆಂದು ಹೇಳುತ್ತಾರೆ.

ಜೈನತೀರ್ಥಂಕರರ  ಸಾಂಪ್ರದಾಯಿಕ ಚಿಹ್ನೆಯಾದ ಹಾವು ಬಾಹುಬಲಿಯ ಪಾದತಳದಿಂದ ಮುಡಿಯವರೆಗೆ ಆವರಿಸಿದೆ. ಕಪ್ಪು ಶಿಲೆಯಿಂದ ಕೆತ್ತಲ್ಪಟ್ಟಿರುವ  ಮೂರ್ತಿ ಆಕರ್ಷಕವಾಗಿದೆ. ಇನ್ನು ಇಲ್ಲಿನ ಬೆಟ್ಟದ ತಪ್ಪಲಿನ ಬಲಭಾಗದಲ್ಲಿ ವರ್ಧಮಾನ ಕಾಲದ 24 ಜೈನ ತೀರ್ಥಂಕರರ ಕೂಟಗಳು ಎಡಭಾಗದಲ್ಲಿ ಕುಂದಾಚಾರ್ಯರ ದ್ವಿಸಹಸ್ರಾಬ್ದಿ ಜ್ಞಾಪಕಾರ್ಥವಾಗಿ ನಿರ್ಮಿಸಿರುವ ಪಾದ ಕೂಟ, ಹಾಗೂ ಪಕ್ಕದಲ್ಲೇ ಜಲಮಂದಿರವನ್ನು ಕಾಣಬಹುದಾಗಿದೆ. ಸರ್ಕಾರ ಈ ತಾಣವನ್ನು ಅಭಿವೃದ್ಧಿ ಮಾಡಿದ್ದೇ ಆದರೆ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದಾಗಿದೆ.