ಹಬ್ಬದ ಸ್ವಾಗತಕ್ಕೆ ಸಜ್ಜಾದ ಕ್ರಿಸ್‍ಮಸ್ ಸ್ಟಾರ್

ಹಬ್ಬದ ಸ್ವಾಗತಕ್ಕೆ ಸಜ್ಜಾದ ಕ್ರಿಸ್‍ಮಸ್ ಸ್ಟಾರ್

B.M.Lavakumar   ¦    Dec 16, 2019 06:39:19 PM (IST)
ಹಬ್ಬದ ಸ್ವಾಗತಕ್ಕೆ ಸಜ್ಜಾದ ಕ್ರಿಸ್‍ಮಸ್ ಸ್ಟಾರ್

ಡಿಸೆಂಬರ್ ತಿಂಗಳು ಬಂತೆಂದರೆ ತಣ್ಣಗಿನ ಮೈಕೊರೆಯುವ ಚಳಿಯ ಜತೆಗೆ ಜಗತ್ತು ಕ್ರಿಸ್‍ಮಸ್ ಹಬ್ಬದ ಸ್ವಾಗತಕ್ಕಾಗಿ ಕಾಯುತ್ತಿದ್ದರೆ, ಇತ್ತ ನಿಸರ್ಗದಲ್ಲಿಯೂ ಒಂದಷ್ಟು ಬದಲಾವಣೆ ಕಣ್ಣಿಗೆ ರಾಚುತ್ತದೆ. ಜತೆಗೆ ಕುಸುಮವೊಂದು ಹೂಬಿಟ್ಟು ಹಬ್ಬದ ನಿರೀಕ್ಷೆ ಮಾಡುತ್ತದೆ. ಆ ಕುಸುಮವೇ ಕ್ರಿಸ್‍ಮಸ್ ಸ್ಟಾರ್.

ಈ ಕ್ರಿಸ್‍ಮಸ್ ಸ್ಟಾರ್ ಬರೀ ಉದ್ಯಾನದಲ್ಲಿರದೆ, ಊರಿನ ಖಾಲಿ ಜಾಗಗಳಲ್ಲಿ, ತೋಟದ ಬೇಲಿ ಅಂಚಿನಲ್ಲಿ ಹೀಗೆ ಎಲ್ಲೆಂದರಲ್ಲಿ ವಿವಿಧ ಬಣ್ಣಗಳೊಂದಿಗೆ ಕಂಗೊಳಿಸುತ್ತಾ ಗಮನಸೆಳೆಯುತ್ತಿರುತ್ತದೆ. ಮೊದಲೆಲ್ಲ ಆಕಾಶದೆತ್ತರಕ್ಕೆ ಬೆಳೆದು ಹೂಬಿಡುತ್ತಿದ್ದವು. ಈಗ ಹಾಗಿಲ್ಲ ಅವುಗಳನ್ನು ಸಂಶೋಧಿಸಿ ಹಲವು ರೀತಿಯ ತಳಿಗಳನ್ನು ಅಭಿವೃದ್ಧಿಪಡಿಸಲಾಗಿರುವುದರಿಂದ ಉದ್ಯಾನದಿಂದ ಪ್ರಾರಂಭವಾಗಿ ಮನೆಯ ಕುಂಡಗಳಲ್ಲಿ ಕುಬ್ಜ(ಬೋನ್ಸಾಯ್)ವಾಗಿ ಬೆಳೆದು ಮನೆಗೆ ಅಲಂಕಾರವಾಗಿದೆ.

1972ರಲ್ಲಿ ಹಾಲಿವುಡ್‍ನಲ್ಲಿ ಪಾಯಿನ್ಸೆಟಿಯ ಪಲ್ಚರಿಮ ಹೆನ್ರಿಯಟಕ್ ಡಬಲ್ ಪಾಯಿನ್‍ಸೆಟ್ಯ ಎನ್ನುವಂತಹ ತಳಿಯನ್ನು ಕಂಡು ಹಿಡಿಯಲಾಗಿದ್ದು, ಈ ಗಿಡದ ತುದಿಯಲ್ಲಿ ಬಿಡುವ ಹೂವಿನ ಸುತ್ತಲೂ ಎರಡು ರೀತಿಯ ಎಲೆಗಳು ಇರುತ್ತವೆ. ಹೊರಭಾಗದಲ್ಲಿ ಅಗಲವಾಗಿ ಮಿರುಗುವ ಕುಂಕುಮ ಬಣ್ಣದ ಎಲೆಗಳಿದ್ದರೆ, ಒಳಭಾಗದಲ್ಲಿ ಸಣ್ಣ ಸಣ್ಣ ಎಲೆಗಳು ಇವೆ. ಈ ಜಾತಿಯ ಹೂಗಳು ಗಾತ್ರದಲ್ಲಿ ಹಿರಿದಾಗಿಯೂ ದಪ್ಪವಾಗಿಯೂ ಇರುತ್ತವೆ.

ನೋಡಲು ಥೇಟ್ ನಕ್ಷತ್ರದಂತೆಯೇ ಇದ್ದು, ಕ್ರಿಸ್‍ಮಸ್ ಹಬ್ಬದ ಸಂದರ್ಭವೇ ಹೂವು ಬಿಡುವುದರಿಂದ ಇದು ಕ್ರಿಸ್‍ಮಸ್ ಸ್ಟಾರ್ ಎಂದೇ ಜನಪ್ರಿಯವಾಗಿದೆ. ಆದರೆ ಇದರ ಬಗ್ಗೆ ವೈಜ್ಞಾನಿಕವಾಗಿ ತಿಳಿಯುತ್ತಾ ಹೋದರೆ ಇದು ಪಾಯಿನ್ಸೆಟಿಯ ಪಲ್ಚರಿಮ ಯಫೋರ್ಬಿಯೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿರುವುದು ತಿಳಿಯುತ್ತದೆಯಲ್ಲದೆ, ಇದನ್ನು  ಕ್ರಿಸ್‍ಮಸ್ ಫ್ಲವರ್ ಪೇಯಿಂಟೆಡ್ ಲೀಫ್, ಲಾಬ್‍ಸ್ಟರ್ ಪ್ಲಾಂಟ್, ಮೆಕ್ಸಿಕಿನ್ ಫ್ಲೇಮ್ ಲೀಫ್ ಮುಂತಾದ ಹೆಸರುಗಳು ಇದಕ್ಕಿರುವುದು ಗೊತ್ತಾಗುತ್ತದೆ.

ಮಧ್ಯ ಅಮೆರಿಕದ್ದು ಎಂದು ಹೇಳಲಾಗಿರುವ ಈ ಸಸ್ಯ ಸುಮಾರು ನಾಲ್ಕೈದು ಮೀಟರ್‍ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಜತೆಗೆ ತನ್ನದೇ ವಿಶಿಷ್ಟ ಸೌಂದರ್ಯದಿಂದಾಗಿ ಇತರ ಕಡೆಗಳಿಗೆ ಅಲ್ಲಿಂದ ವರ್ಗಾಯಿಸಲ್ಪಟ್ಟು ಈಗ ಜಗತ್ತಿನಾದ್ಯಂತ ಬೆಳೆಯುತ್ತಿರುವುದನ್ನು ಕಾಣಬಹುದಾಗಿದೆ. ಕಡು ಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು, ಮೇಲ್ನೋಟಕ್ಕೆ ಅಂಡಾಕಾರವಾಗಿರುತ್ತದೆ. ಗಿಡದಲ್ಲಿ ಬಿಳಿ ಬಣ್ಣದಿಂದ ಕೂಡಿದ ರಾಸಾಯನಿಕ ದ್ರವವಿದ್ದು, ಇದು ವಿಷಕಾರಿಯಾಗಿದೆ. ಸಾಮಾನ್ಯವಾಗಿ ಈ ಸಸ್ಯವು ಅಕ್ಟೋಬರ್ ಅಥವಾ ನವೆಂಬರ್‍ನಿಂದ ಹೂ ಬಿಡಲು ಪ್ರಾರಂಭಿಸಿ ಕ್ರಿಸ್‍ಮಸ್ ವೇಳೆಗೆ ಎಲ್ಲೆಡೆಯೂ ಹೂವಿನಿಂದ ಕಂಗೊಳಿಸುತ್ತಾ ಫೆಬ್ರವರಿ ತನಕವೂ ಇರುತ್ತದೆ.

ಹೂ ಬಿಡುವಿಕೆಯಲ್ಲಿ ಇದು ಇತರೆ ಸಸ್ಯಗಳಿಕ್ಕಿಂತ ಭಿನ್ನವಾಗಿದ್ದು, ಹೂಗಳು ಸಹ ವಿಶೇಷತೆಯಿಂದ ಕೂಡಿರುತ್ತದೆ. ಗಿಡದ ಕೊಂಬೆಗಳ ತುದಿಯಲ್ಲಿ ಕೆಂಪು ಬಣ್ಣದ ಎಲೆಗಳನ್ನೊಳಗೊಂಡ ಪುಷ್ಪಗುಚ್ಛಗಳು ಸೃಷ್ಟಿಯಾಗಿ ಗಿಡ ಪೂರ್ತಿ ಕೆಂಪಾಗಿ ಕಂಗೊಳಿಸುತ್ತವೆ. ಪುಷ್ಪಗಳು (ಹೂ) ಚಿಕ್ಕದಾಗಿದ್ದು, ಹೆಣ್ಣು ಹಾಗೂ ಗಂಡು ಹೂವುಗಳು ಜೊತೆಯಾಗಿ ಸಯಾಥಿಯಮ್ ಎನ್ನುವಂತಹ ವಿಶಿಷ್ಟ ಪುಷ್ಪಗುಚ್ಛ ಉಂಟಾಗಿರುತ್ತದೆ. ನೋಡಲು ಬಟ್ಟಲಿನಾಕಾರದಲ್ಲಿರುವ ಸಯಾಥಿಯಮ್‍ನ ಮೇಲೆ ಹಳದಿ ಬಣ್ಣದ ಮಕರಂದದ ತಟ್ಟೆಗಳು ಇರುತ್ತವೆ. ಈ ರೀತಿಯ ಹಲವಾರು ಸಯಾಥಿಯಮ್‍ಗಳ ಸುತ್ತ ಕೃತಕವಾಗಿ ತಯಾರು ಮಾಡಿದ ಹೂಗುಚ್ಛವಿದ್ದು, ಇದರ ಅಡಿಯಲ್ಲಿ ಕೆಂಪು ಬಣ್ಣದ ಎಲೆಗಳು ಸೇರಿಕೊಂಡಿರುತ್ತವೆ.  ಈ ಎಲೆಗಳೇ ಸಸ್ಯಕ್ಕೂ ಹೂಗಳಿಗೂ ಮೆರಗು ನೀಡಿರುವುದು ಎಂದರೆ ತಪ್ಪಾಗಲಾರದು. ಕೆಂಪು ಎಲೆಗಳ ಆಕರ್ಷಣೆಗೆ ಒಳಗಾದ ಕೀಟಗಳು ಹೂವಿನೆಡೆಗೆ ಬರುತ್ತವೆ. ಕೆಂಪು ಎಲೆಗಳ ಮಾರ್ಪಾಟು ಕೀಟಾಕರ್ಷಣೆಗಾಗಿ ಸಸ್ಯವೇ ಮಾಡಿಕೊಂಡಿರುವುದು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ.

ಕ್ರಿಸ್‍ಮಸ್ ಸ್ಟಾರ್‍ನ ಸೌಂದರ್ಯಕ್ಕೆ ಮಾರು ಹೋದ ವಿಜ್ಞಾನಿಗಳು ಈ ಸಸ್ಯದ ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಿ ಬೇರೆಬೇರೆ ರೀತಿಯ ತಳಿಗಳನ್ನು ತಯಾರು ಮಾಡಿದ್ದಾರೆ. ಇವುಗಳಲ್ಲಿ ಹೂವಿನ ಸುತ್ತಲೂ ಕೆಂಪು ಎಲೆಯ ಬದಲಾಗಿ ಬಿಳಿಯ ಎಲೆಗಳನ್ನು ಸೃಷ್ಟಿಸಲಾಗಿದ್ದು, ಇದಕ್ಕೆ ಬಿಳಿ ಪಲ್ಚರಿಮ ಎಂದು ಹೆಸರಿಡಲಾಗಿದೆ. ಅಲ್ಲದೆ, ಗುಲಾಬಿ ಬಣ್ಣವನ್ನೂ ಸೃಷ್ಟಿಸಿದ್ದಾರೆ.

ಸಾಕಷ್ಟು ಬಿಸಿಲು ಬೀಳುವ ಸ್ಥಳದಲ್ಲಿ ಯಥೇಚ್ಛವಾಗಿ ಈ ಸಸ್ಯಗಳು ಬೆಳೆಯುತ್ತವೆ ಅಲ್ಲದೆ, ಉತ್ತಮವಾದ  ಹೂಗಳನ್ನು ಸಹ ಬಿಡುತ್ತವೆ. ಸಸ್ಯಾಭಿವೃದ್ಧಿಯನ್ನು ಕಾಂಡದ ತುಂಡುಗಳನ್ನು ನೆಡುವ ಮೂಲಕ ಮಾಡಬಹುದಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯುತ್ತಿರುವುದನ್ನು ಕಾಣಬಹುದು. ಕ್ರಿಸ್‍ಮಸ್ ಹಬ್ಬದ ಅಲಂಕಾರದಲ್ಲಿ ಇದಕ್ಕೊಂದು ಮಹತ್ವದ ಸ್ಥಾನ ನೀಡಲಾಗುತ್ತಿರುವುದನ್ನು ಕಾಣಬಹುದಾಗಿದೆ.