ಅಸ್ಸಾಂನಿಂದ ಕೊಡಗಿಗೆ ಬಂತು ಮಡಹಾಗಲಕಾಯಿ

ಅಸ್ಸಾಂನಿಂದ ಕೊಡಗಿಗೆ ಬಂತು ಮಡಹಾಗಲಕಾಯಿ

LavaKumar   ¦    Nov 03, 2020 02:55:30 PM (IST)
ಅಸ್ಸಾಂನಿಂದ ಕೊಡಗಿಗೆ ಬಂತು ಮಡಹಾಗಲಕಾಯಿ

ಒಂದು ಕಾಲದಲ್ಲಿ ಕೊಡಗಿನ ಕಾಡುಗಳಲ್ಲಿ ಮಡಹಾಗಲ ಹೇರಳವಾಗಿ ಬೆಳೆಯುತ್ತಿದ್ದ ಮಡಹಾಗಲ ಇಂದು ಹಲವು ಕಾರಣಗಳಿಂದಾಗಿ ಅವಸಾನದ ಅಂಚಿಗೆ ತಲುಪಿದೆ. ಹೀಗಾಗಿ ಇಂತಹದ್ದೇ ತಳಿಯನ್ನು ಅಸ್ಸಾಂನಿಂದ ತಂದು ರೈತರು ಬೆಳೆಯುವಂತೆ ಮಾಡುವ ಕಾರ್ಯ ನಡೆಯುತ್ತಿದೆ.

ಆಂಗ್ಲಭಾಷೆಯ  ಸ್ಪೈನ್‍ಗಾರ್ಡ್ ಎಂದು ಕರೆಯಲ್ಪಡುವ ಮಡಹಾಗಲಕ್ಕೆ ಕೊಡಗಿನಲ್ಲಿ ಪಾವಕ್ಕ, ಕಾಡುಪೀರೆ ಎಂದೆಲ್ಲ ಹೆಸರಿದೆ. ಹಾಗಲಕಾಯಿ ಜಾತಿಗೆ ಸೇರಿದ ಇದು ಕಹಿಗುಣ ಹೊಂದಿಲ್ಲ. ಆಂಗ್ಲಭಾಷೆಯ  ಸ್ಪೈನ್‍ಗಾರ್ಡ್ ಎಂದು ಕರೆಯಲಾಗುತ್ತಿದೆ.  ಕಾಡಿನಲ್ಲಿದ್ದ ಇದು  ವರ್ಷದಿಂದ ವರ್ಷಕ್ಕೆ ಅರಣ್ಯಗಳು ನಾಶವಾದ ಬಳಿಕ ಇದು ಅಪರೂಪವಾಗ ತೊಡಗಿದೆ.

ಇದನ್ನು ಬಹಳಷ್ಟು ಜನ ಇಷ್ಟಪಡುವುದರಿಂದ ಕಾಡಿನಿಂದ ಮಾರುಕಟ್ಟೆಗೆ ತಂದರೆ ಜನ ಮುಗಿಬಿದ್ದು ಖರೀದಿ ಮಾಡುತ್ತಾರೆ. ಕಾಡಿನಲ್ಲಿ ಸಿಗುವ ಕಾರಣ ಇದಕ್ಕೆ ದುಬಾರಿ ಬೆಲೆಯಿದೆ. ಇದನ್ನು ನಾಡಿನಲ್ಲಿ ಬೆಳೆಯುವಂತಾದರೆ ಬೆಲೆ ಕಡಿಮೆಯಾಗಿ ಎಲ್ಲರಿಗೂ ಸಿಗುವಂತಾಗುತ್ತದೆ. ಇದರ ವಂಶಾಭಿವೃದ್ಧಿಯನ್ನು ಗೆಡ್ಡೆ ಮತ್ತು ಬೀಜದಿಂದ ಮಾಡಬಹುದಾಗಿದೆ. ಕಾಡಿನಲ್ಲಾದರೆ ಅದು ಅಲ್ಲಲ್ಲಿ ಬಿದ್ದು ಅದರ ಪಾಡಿಗೆ ಬೆಳೆಯುತ್ತದೆ. ಹಸಿರು ಬಣ್ಣದ ಹೂಗಳನ್ನು ಬಿಡುತ್ತದೆಯಲ್ಲದೆ, ಕಾಯಿ ಹಸಿರು ಬಣ್ಣವನ್ನು ಹೊಂದಿದ್ದು ಮೇಲ್ಮೈ ಮುಳ್ಳಿನಂತೆ ಕಾಣುತ್ತದೆ. ಹಣ್ಣಾದರೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಳ್ಳಿ ಒಣಗಿ ಗೆಡ್ಡೆ ಮಣ್ಣಿನಡಿಯಲ್ಲಿ ಸುಪ್ತಾವಸ್ಥೆಯಲ್ಲಿರುತ್ತದೆ. ಮಳೆ ಬೀಳುತ್ತಿದ್ದಂತೆಯೇ ಚಿಗುರಿ ಮರಗಳನ್ನು ಆಸರೆಯನ್ನಾಗಿಸಿಕೊಂಡು ಹಬ್ಬಿ ಬೆಳೆಯುತ್ತದೆ. ಬಳಿಕ ಹೂ ಬಿಟ್ಟು ಕಾಯಿಯಾಗುತ್ತದೆ. ಈ ಕಾಯಿಯನ್ನು ಮನುಷ್ಯರು ನೋಡಿ ಅದನ್ನು ಕೀಳದಿದ್ದರೆ, ಅದನ್ನು ಕಾಡು ಹಂದಿ, ಪಕ್ಷಿಗಳು ತಿಂದು ಹಾಕುತ್ತವೆ. ಕಾಡುಹಂದಿಗಳು ಗೆಡ್ಡೆ ಸಹಿತ ತಿನ್ನುವುದರಿಂದ ಇದರ ಸಂತತಿ ಕಾಡಿನಲ್ಲಿಯೂ ನಾಶವಾಗುತ್ತಿದೆ. ಮಡಹಾಗಲದಲ್ಲಿ ಔಷಧೀಯ ಗುಣಗಳಿದ್ದು, ವಿಟಮಿನ್‍ನ ಆಗರವಾಗಿದೆ. ಮೂಲವ್ಯಾಧಿ ಮತ್ತು ಮಧುಮೇಹಕ್ಕೆ ರಾಮಬಾಣವಾಗಿದೆ.

ಕಾಡಿನಲ್ಲಿ ಬೆಳೆಯುವ ಮಡಹಾಗಲದ ತಳಿಯನ್ನು ಅಸ್ಸಾಂನಿಂದ ತಂದು ಕೊಡಗಿನಲ್ಲಿ ಬೆಳೆಸುವ ಪ್ರಯತ್ನವನ್ನು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮಾಡಿದ್ದು, ಇದರಲ್ಲಿ ಯಶಸ್ವಿಯೂ ಆಗಿದೆ. ಕೊಡಗಿನ ಮಂದಿ ಮಡಹಾಗಲವನ್ನು ಹೆಚ್ಚು ಇಷ್ಟಪಡುವುದನ್ನು ಅರಿತ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದ ಮೇಲ್ವಿಚಾರಕರಾದ ಡಾ. ಭಾರತಿ ಅವರು 2008ರಲ್ಲಿ ಕೊಡಗಿನಲ್ಲಿ ಏಕೆ ಕೃಷಿ ಮಾಡಬಾರದು ಎಂದು ಆಲೋಚಿಸಿ ಅಸ್ಸಾಂನಲ್ಲಿ ಬೆಳೆಯುತ್ತಿದ್ದ ತಳಿಯನ್ನು ತಂದು ಕೊಡಗಿನ ವಾತಾವರಣದಲ್ಲಿ ಬೆಳೆಯುತ್ತದೆಯಾ ಎಂದು ಪರೀಕ್ಷಿಸುವ ಸಲುವಾಗಿ ಚಿಕ್ಕದಾದ ಸ್ಥಳದಲ್ಲಿ ನೆಟ್ಟರು. ಅದು ಇಲ್ಲಿನ ಹವಾಗುಣಕ್ಕೆ ಹೊಂದಿ ಬೆಳೆಯಲು ಆರಂಭಿಸಿತು. ಇದರಿಂದ ಖುಷಿಗೊಂಡ ಅವರು ಇದರ ವಂಶಾವೃದ್ಧಿ ಮಾಡಿ ಇದುವರೆಗೆ ಜಿಲ್ಲೆಯಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೀಡಿದ್ದಾರೆ.

ಕಾಡಿನಲ್ಲಿರುವ ಮಡಹಾಗಲಕ್ಕೂ ಅಸ್ಸಾಂನಿಂದ ತಂದು ವೃದ್ಧಿ ಮಾಡಿದ ಮಡಹಾಗಲಕ್ಕೂ ಹೆಚ್ಚು ವ್ಯತ್ಯಾಸ ಕಂಡು ಬರದಿದ್ದರೂ ಕಾಡಿನಲ್ಲಿ ಬೆಳೆಯುವ ತಳಿಯಲ್ಲಿ ಪರಾಗಸ್ಪರ್ಶಕ್ರಿಯೆ ಸ್ವಾಭಾವಿಕವಾಗಿದ್ದರೆ,  ಅಸ್ಸಾಂನಿಂದ ತಂದು ವೃದ್ಧಿ ಮಾಡಿರುವ ತಳಿಯಲ್ಲಿ ಗಂಡು ಹೂವನ್ನು ಹೆಣ್ಣು ಹೂವಿಗೆ ಸ್ಪರ್ಶಿಸಿ ಕೃತಕ ಪರಾಗಸ್ಪರ್ಶ ಮಾಡಬೇಕಾದ ಅಗತ್ಯವಿದೆ. ಇನ್ನು  ಅಸ್ಸಾಂ ತಳಿಯ ಕಾಯಿ ಗಾತ್ರದಲ್ಲಿ ದೊಡ್ಡದಾಗಿದ್ದು, ತೂಕವೂ ಇದೆ. ಈಗಾಗಲೇ ಅಸ್ಸಾಂನಿಂದ ತಂದಿರುವ ಮಡಹಾಗಲಕಾಯಿ ತಳಿಯು ಕೊಡಗಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯಲು ಆರಂಭಿಸಿರುವುದು ಖುಷಿಯ ವಿಚಾರವಾಗಿದೆ.