ಪಂಚಭೂತ ತತ್ವದ ಲಿಂಗಗಳು

ಪಂಚಭೂತ ತತ್ವದ ಲಿಂಗಗಳು

????????? ??????.    ¦    Mar 26, 2021 03:46:42 PM (IST)
ಪಂಚಭೂತ ತತ್ವದ ಲಿಂಗಗಳು
ಭಾರತ ವಿಸ್ಮಯಗಳಿಂದ ತುಂಬಿರುವ ದೇಶ. ಇಲ್ಲಿನ ಜೀವನಶೈಲಿ, ಆಹಾರ, ಆಚರಣೆಗಳು, ಸಂಸ್ಕೃತಿ ಮತ್ತು ದೇವಾಲಯಗಳು ಎಲ್ಲಕ್ಕೂ ಅದರದೇ ಆದ ವಿಶೇಷತೆಗಳಿವೆ. ಅದರಲ್ಲಿಯೂ ಭಾರತದ ದೇವಾಲಯಗಳು ಹಲವಾರು ವಿಸ್ಮಯ ಮತ್ತು ನಿಗೂಢತೆಗಳನ್ನು ತನ್ನಲ್ಲಿ ಅಡಗಿಸಿಕೊಂಡಿವೆ. ಶಿವ ಮತ್ತು ವಿಷ್ಣು ದೇವಾಲಯಗಳನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಹೊಂದಿರುವುದು ನಮ್ಮ ದಕ್ಷಿಣ ಭಾರತದ ಹೆಮ್ಮೆ.  
 
ಅಗ್ನಿ, ವಾಯು, ಜಲ, ಭೂಮಿ ಮತ್ತು ಆಕಾಶಗಳಿಗೆ ಪಂಚಭೂತಗಳು ಎಂದು ವಿಶೇಷ ಸ್ಥಾನವನ್ನು ಕೊಟ್ಟು, ನಮ್ಮ ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ಸೃಷ್ಟಿಯ ಮೂಲ ಎಂದೇ ಪರಿಗಣಿಸಲ್ಪಡುವ ಈ ಐದು ತತ್ವಗಳ ಆಧಾರದ ಮೇಲೆ ನಮ್ಮ ಜೀವನ ನಿಂತಿದೆ. ಈ ಶಿವಾಲಯಗಳು ಸಹ ಪಂಚಭೂತಗಳ ಪ್ರಾಮುಖ್ಯತೆಯನ್ನು ಶತಶತಮಾನದಿಂದ ಸಾರುತ್ತಲೇ ಬಂದಿವೆ. ಸುಮಾರು ೨೫೦೦-೩೦೦೦ ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ದೇವಾಲಯಗಳು ನಮ್ಮ ಪೂರ್ವಜರ ವಿಜ್ಞಾನದ ಬಗೆಗಿನ ಜ್ಞಾನ ಮತ್ತು ಆಸಕ್ತಿಯನ್ನು ತಿಳಿಸುತ್ತವೆ. ಈ ದೇವಾಲಯಗಳು ಇಂದಿನ ವಿಜ್ಞಾನ ಕೇಂದ್ರಗಳಂತೆ ಗೋಚರಿಸುತ್ತವೆ. ನಮ್ಮ ಎಲ್ಲಾ ವಿಜ್ಞಾನದ ಮೇಲಿನ ಪ್ರಶ್ನೆಗಳಿಗೆ, ಕುತೂಹಲಗಳಿಗೆ ತಮ್ಮಲ್ಲಿ ಉತ್ತರಗಳನ್ನು ಹೊಂದಿವೆ. ಇವುಗಳಲ್ಲಿ ಒಂದಾದ ಅಗ್ನಿ ಲಿಂಗವು ತನ್ನದೇ ಆದ ಪ್ರಸಿದ್ಧಿಯನ್ನು ಪಡೆದಿದೆ.
 
 ಧಗ ಧಗಿಸುವ "ಅಗ್ನಿಲಿಂಗ"
 
ಭಾರತದ ದಕ್ಷಿಣದಲ್ಲಿರುವ ತಮಿಳುನಾಡಿನ ತಿರುವಣ್ಣಾಮಲೈನ ಅಣ್ಣಾಮಲೈ ದೇವಾಲಯ ಅಗ್ನಿ ತತ್ವದ ಆಧಾರದ ಮೇಲೆ ನಿರ್ಮಾಣವಾಗಿರುವ ಶಿವಾಲಯ. ಇದಕ್ಕೆ ಸಾಕ್ಷಿಯೆಂಬಂತೆ ಈ ದೇವಾಲಯದ ಶಿವಲಿಂಗದ ಬಳಿ ಅತಿ ಹೆಚ್ಚು ಉಷ್ಣಾಂಶ ದಾಖಲೆಯಾಗುತ್ತದೆ. ೩೦-೪೦°c ಉಷ್ಣಾಂಶ ಸದಾಕಾಲ ದೇವಾಲಯದ ಗರ್ಭಗುಡಿಯಲ್ಲಿ ಇರುತ್ತದೆ. ಇದು ಅರುಣಾಚಲ ಬೆಟ್ಟದ ತಪ್ಪಲಲ್ಲಿದೆ. ಅರುಣಾಚಲ ಬೆಟ್ಟವು ಸಾಧು-ಸಂತರ, ಆಯುರ್ವೇದ ಪಂಡಿತರನ್ನು ಹೇರಳವಾಗಿ ಹೊಂದಿರುವ ಸ್ಥಳ. ಇದು ಬೆಟ್ಟದ ತಪ್ಪಲಲ್ಲಿ ಇರುವುದರಿಂದ ಇಲ್ಲಿನ ಶಿವನನ್ನು ಅರುಣಾಚಲೇಶ್ವರ ಎಂದು ಸಹ ಕರೆಯುತ್ತಾರೆ.  ಒಮ್ಮೆ ಪಾರ್ವತಿ ಮತ್ತು ಶಿವ ಏಕಾಂತದಲ್ಲಿರುವಾಗ ಅಕಸ್ಮಾತಾಗಿ ಮಾತೆ ಪಾರ್ವತಿ ಶಿವನ ಕಣ್ಣನ್ನು ಮುಚ್ಚುತ್ತಾಳೆ. ಆಗ ಇಡೀ ಪ್ರಪಂಚವೇ ಕತ್ತಲಲ್ಲಿ ಮುಳುಗುತ್ತದೆ. ತನ್ನ ಈ ಸಲ್ಲಾಪವು ಸೃಷ್ಟಿಯಲ್ಲಿ ವ್ಯತ್ಯಾಸವುಂಟು ಮಾಡಬಾರದೆಂದು ತಿಳಿದು ಮಾತೆಯು ಶಿವನಲ್ಲಿ ಕತ್ತಲನ್ನು ದೂರಾಗಿಸುವಂತೆ ಬೇಡುತ್ತಾಳೆ. ಆಗ ಶಿವನು ಜ್ಯೋತಿ ಸ್ವರೂಪದಲ್ಲಿ ಅರುಣಾಚಲ ಬೆಟ್ಟದ ಮೇಲೆ ಪ್ರತ್ಯಕ್ಷನಾಗಿ, ಕತ್ತಲನ್ನು ದೂರಗೊಳಿಸಿದ ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಅರುಣಾಚಲ ಬೆಟ್ಟವು ಸಹ ಶಿವಲಿಂಗದ ರೂಪದಲ್ಲಿದೆ. ಹೀಗಾಗಿ ಇಂದಿಗೂ ಸಹ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಬೆಟ್ಟದ ಮೇಲೆ ಒಂದು ಬೃಹತ್ ಜ್ಯೋತಿಯನ್ನು ಬೆಳಗಿಸುವುದು ಇಲ್ಲಿನ ಪದ್ಧತಿ.
 
ತಿರುವಣ್ಣಾಮಲೈನ ಅಣ್ಣಮಲೈ ದೇವಾಲಯ ಪ್ರಪಂಚದ ಅತಿ ದೊಡ್ಡ ಶಿವಾಲಯ ಎಂಬ ಖ್ಯಾತಿ ಪಡೆದಿದೆ. ಇದು ಸುಮಾರು ೧೨೫ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ದೇವಾಲಯ. ನಾಲ್ಕು ದಿಕ್ಕುಗಳಲ್ಲೂ ೪ ರಾಜ ಗೋಪುರ ಹಾಗೂ ದ್ವಾರವನ್ನು ಹೊಂದಿದೆ. ಪೂರ್ವದಲ್ಲಿನ ವಿಮಾನ ಗೋಪುರ ಸುಮಾರು ೨೧೭ ಅಡಿ ಎತ್ತರವಾಗಿದೆ. ಸಾಮಾನ್ಯವಾಗಿ ಶಿವನ ದೇವಾಲಯಗಳಲ್ಲಿ ತ್ರಿಕಾಲ ಅಥವಾ ನಾಲ್ಕು ಜಾವದ ಪೂಜೆಗಳನ್ನು ನೆರವೇರಿಸುತ್ತಾರೆ. ಆದರೆ ಇಲ್ಲಿ ೬ ಬಾರಿ ಪೂಜೆಯನ್ನು ಪ್ರತಿದಿನವೂ ನೆರವೇರಿಸುತ್ತಾರೆ. ಇಲ್ಲಿನ ಅರ್ಚಕರ ಪ್ರಕಾರ ದೇವಾಲಯದ ಗರ್ಭಗುಡಿಯ ಒಳಗೆ ಬೇಸಿಗೆ ಕಾಲದಲ್ಲಿ ಹೋಗುವುದು ಬಹಳ ಕಷ್ಟವಂತೆ. ಈ ಸಮಯದಲ್ಲಿ ಉಷ್ಣಾಂಶ ೪೦°c  ಮೀರುತ್ತದೆ. ಚಳಿ ಮತ್ತು ಮಳೆಗಾಲದಲಿ ದೇವಾಲಯದ ಗರ್ಭಗುಡಿ ಬೆಚ್ಚಗಿರುತ್ತದೆ ಎಂದು ಅರ್ಚಕರು ವರದಿ ಮಾಡುತ್ತಾರೆ. 
ಇದಿಷ್ಟು ಅಗ್ನಿ ಲಿಂಗದ ಬಗೆಗಿನ ಸಣ್ಣ ಪರಿಚಯ.