ರೈತನ ಹಿತವೇ ದೇಶದ ಬಲ

ರೈತನ ಹಿತವೇ ದೇಶದ ಬಲ

Anto Kristen   ¦    Sep 29, 2020 05:01:06 PM (IST)
ರೈತನ ಹಿತವೇ ದೇಶದ ಬಲ

ಭಾರತದ ಜನಸಂಖ್ಯೆಯಲ್ಲಿ ಶೇ. 50ರಷ್ಟು ಜನ ಕೃಷಿಕರಿದ್ದಾರೆ. ಈ ಶೇ. 50 ಕೃಷಿಕರೆ ಉಳಿದ ಶೇ. 50ರಷ್ಟು ಜನರ ವಾರ್ಷಿಕ ಆದಾಯಕ್ಕೆ ಪ್ರಮುಖ ಕಾರಣರಾಗಿದ್ದಾರೆ. ಒಬ್ಬ ರೈತನ ಬದುಕು ಹಸನಾದರೆ ಮಾತ್ರ ಆಟೋಮೊಬೈಲ್,  ಟೆಕ್ಸ್ ಟೈಲ್ ಮುಂತಾದ ಉದ್ಯಮಗಳಿಗೆ ಬೇಡಿಕೆ ಉಂಟಾಗುವುದು. ರೈತರ ಕೈಯಲ್ಲಿ ಹಣವಿಲ್ಲದೆ ಹೋದರೆ ಇನ್ಯಾವುದೇ ಉದ್ಯಮಕ್ಕೂ ಬೇಡಿಕೆ ಇಲ್ಲ. ಬೇಡಿಕೆ ಇಲ್ಲವಾದಲ್ಲಿ ಎಷ್ಟೋ ಉದ್ಯಮಗಳು ಭಾರಿ ನಷ್ಟವನ್ನು ಅನುಭವಿಸಬೇಕಾಗಬಹುದು. ಭಾರತದ ಆರ್ಥಿಕತೆಗೂ ಕೃಷಿಯೇ ಆಧಾರ. ಹಾಗಾಗಿ ರೈತರ ತೊಂದರೆ ಎಂದರೆ ಅದು ಎಲ್ಲರ ತೊಂದರೆ ಇದ್ದಂತೆ.

ಇತ್ತೀಚೆಗೆ ಸರಕಾರದಿಂದ ಜಾರಿಗೆ ಬಂದಿರುವ ಮೂರು ಮಸೂದೆಗಳು ರೈತರಿಗೆ ಅಸಮಾಧಾನವನ್ನು ತಂದಿದ್ದು, ದೇಶಾದ್ಯಂತ ಬಾರಿ ಹೋರಾಟ ಮತ್ತು ಚಳುವಳಿಗೆ ಕಾರಣವಾಗಿದೆ. ಈ ಮೂರು ಮಸೂದೆಯಲ್ಲಿ ಇರುವ ನಿಯಮಗಳು ರೈತರ ಪರವಾಗಿ ಇದ್ದರೂ ಒಂದು ನಿಯಮ ಮಾತ್ರ ರೈತರಿಗೆ ವಿರುದ್ಧವಾಗಿದೆ ಎಂಬಂತೆ ಭಾಸವಾಗಿದೆ ಮತ್ತು ಇದೇ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿರುವಂತಹದ್ದು.

1960ರ ಸಮಯದಲ್ಲಿ ಆಗ ಇದ್ದ ಸರಕಾರ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಇದರ ಮುಖಾಂತರ ರೈತರಿಗೆ ಮಿನಿಮಮ್ ಸಪೋರ್ಟ್ ಪ್ರೈಸ್[ಎಮ್ ಎಸ್ ಪಿ] ಎಂಬ ಕಾನೂನನ್ನು ರೈತರಿಗೆ ಎಂಬಲ ನೀಡುವ ನಿಟ್ಟಿನಲ್ಲಿ ಜಾರಿಗೆ ತಂದಿದ್ದರು. ಈ ಎಮ್ ಎಸ್ ಪಿ ಏನು ಎಂದರೆ ರೈತರು ಬೆಳೆದಿರುವ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡರೆ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಆ ಬೆಳೆಗಳನ್ನು ರೈತರಿಂದ ಅವರ ನಷ್ಟವನ್ನು ಭರಿಸಲು ಬೇಕಾಗುವ ಕನಿಷ್ಟ ದರವನ್ನು ನೀಡಿ ಖರೀದಿ ಮಾಡುತ್ತಿದ್ದರು. ಈ ಒಂದು ಕಾನೂನು ಕೃಷಿಯನ್ನು ಮುಂದುವರಿಸಲು ಕೃಷಿಕರಿಗೆ ಪ್ರೋತ್ಸಾಹವನ್ನು ನೀಡುವಂತಿತ್ತು. ಈಗ ಹೊಸದಾಗಿ ಜಾರಿಗೆ ಬಂದಿರುವ ಮಸೂದೆಯಲ್ಲಿ ಈ ಎಮ್ ಎಸ್ ಪಿ ಯನ್ನು ರದ್ದುಗೊಳಿಸಿ ಸೆಕ್ಷನ್ ಮೂರರ ಅಡಿಯಲ್ಲಿ ಇ-ಪೋರ್ಟಲ್ ಸೆಲ್ಲಿಂಗ್ ಎಂದರೆ ರೈತರು ವಿದೇಶಗಳಿಗೆ ತಂತ್ರಜ್ನಾನವನ್ನು ಉಪಯೋಗಿಸಿ ಬೆಳೆಯನ್ನು ಮಾರಬಹುದು ಎಂದು.

ಯಾಕೆ ಈ ಎಮ್ ಎಸ್ ಪಿ ಕೃಷಿಕರಿಗೆ ಅಷ್ಟೊಂದು ಪ್ರಮುಖವಾಗಿದೆ ಎಂದರೆ, ಉಳಿದೆಲ್ಲಾ ಉದ್ಯಮಗಳೂ ಮುಂದೆ ಬರುವ ತೊಂದರೆ ತೊಡಕುಗಳ್ನು ಊಹಿಸಿ ಅದನ್ನು ಬರದಂತೆ ತಡೆಯುವ ಅಥವಾ ಬಂದರೂ ನಿಭಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದರೆ ಇಲ್ಲಿ ಹಾಗಾಗುವುದಿಲ್ಲ ಇಲ್ಲಿ ಎಲ್ಲವೂ ಅನಿಶ್ಚಿತ. ಏಕೆಂದರೆ ಕೃಷಿ ಪ್ರಕೃತಿಯನ್ನು ಆಧಾರವಾಗಿರಿಸಿಕೊಂಡು ನಡೆಯುತ್ತದೆ. ಮಳೆ, ಹವಮಾನ ವೈಪರೀತ್ಯ, ಕಾಡಾನೆ ಮುಂತಾದ ವನ್ಯಜೀವಿಗಳ ದಾಳಿ, ಮಣ್ಣಿನ ಗುಣ, ಇವೆಲ್ಲವನ್ನು ವಿಜ್ಞಾನಿಯೂ ನಿಖರವಾಗಿ ಹೇಳಲು ಅಸಮರ್ಥ. ಇಷ್ಟು ಅನಿಶ್ಚಿತ ಕೆಲಸವನ್ನು ನಿಭಾಯಿಸಬೇಕು ಎಂದರೆ ಒಂದು ಬಲವಾದ ಬೆಂಬಲದ ಅವಶ್ಯಕತೆ ಇದೆ. ಅದು ಒಬ್ಬ ರೈತನಿಗೆ ಸಿಗಲೇ ಬೇಕು. ರೈತನು ಅಪೇಕ್ಷಿಸುತ್ತಿರುವುದು ವಿದೇಶಿಯರೊಡನೆ ವ್ಯಾಪಾರವೂ ಅಲ್ಲ ದೊಡ್ಡ ಲಾಭವೂ ಅಲ್ಲ. ಬದಲಾಗಿ ಒಂದು ಭರವಸೆಯ ಬೆಂಬಲ ಮಾತ್ರ.

ರೈತನು ಕೃಷಿಯನ್ನು ಬಿಟ್ಟರೆ ದೇಶದ ಆರ್ಥಿಕತೆ ಭಾರಿ ಕುಸಿತವನ್ನು ಕಾಣುತ್ತದೆ. ಹಾಗಾಗಿ ಯಾವುದೇ ನಿಯಮವನ್ನು ಜಾರಿಗೆ ತರುವ ಮೊದಲು ಸರಿಯಾಗಿ ಮತ್ತು ಘನವಾಗಿ ಆಲೋಚನೆಯನ್ನು ಮಾಡಬೇಕು. ಜೊತೆಗೆ ಅದರ ಕುರಿತಾದ ಸ್ಪಷ್ಟ ಮಾಹಿತಿಯನ್ನು ಕೃಷಿಕರಿಗೆ ತಲುಪಿಸುವ ಕಾರ್ಯ ನಡೆಯಬೇಕು. ಕೃಷಿಕರನ್ನು ಬೆಂಬಲಿಸುವ ಪೂರಕ ಕಾನೂನು ಜಾರಿಗೊಳ್ಳಬೇಕು. ಆ ನಿಟ್ಟಿನಲ್ಲಿ ರೈತನ ಮತ್ತು ದೇಶ್ದ ಹಿತ ದೃಷ್ಟಿಯಲ್ಲಿ ಕಾನೂನು ಜಾರಿಗೊಳ್ಳಲಿ ಎಂಬುದಷ್ಟೇ ಭಾರತದ ಪ್ರಜೆಯಾಗಿ ನನ್ನ ಕೋರಿಕೆ.

ಆಂಟೋ ಕ್ರಿಸ್ಟನ್