ನಶಿಸುತ್ತಿರುವ ಮೈಸೂರಿನ ಪಾರಂಪರಿಕ ಕುಂದನ ಕಲೆಗೆ ಜೀವ ನೀಡುತ್ತಿರುವ ಮೆಕ್ಯಾನಿಕಲ್ ಇಂಜಿನಿಯರ್

ನಶಿಸುತ್ತಿರುವ ಮೈಸೂರಿನ ಪಾರಂಪರಿಕ ಕುಂದನ ಕಲೆಗೆ ಜೀವ ನೀಡುತ್ತಿರುವ ಮೆಕ್ಯಾನಿಕಲ್ ಇಂಜಿನಿಯರ್

Coovercolly Indresh   ¦    Sep 16, 2020 04:25:48 PM (IST)
ನಶಿಸುತ್ತಿರುವ ಮೈಸೂರಿನ ಪಾರಂಪರಿಕ ಕುಂದನ ಕಲೆಗೆ ಜೀವ ನೀಡುತ್ತಿರುವ ಮೆಕ್ಯಾನಿಕಲ್ ಇಂಜಿನಿಯರ್

ನಮ್ಮ ಭವ್ಯ ಭಾರತೀಯ ಶ್ರೀಮಂತ ಸಂಸ್ಕ್ರತಿ ಮತ್ತು ಕಲೆ ವಿಶ್ವದಲ್ಲೇ ಸುಪ್ರಸಿದ್ದವಾದುದು. ಅದರಲ್ಲೂ ಭಾರತೀಯ ಶಿಲ್ಪ ಕಲೆಯು ಯುನೆಸ್ಕೋ ಪಟ್ಟಿಯಲ್ಲಿಯೂ ಸೇರಿದೆ. ಪುರಾತನ ಕಾಲದಲ್ಲಿ 64 ಬಗೆಯ ಕಲೆಗಳಿದ್ದವೆಂದು ನಾವು ಪುಸ್ತಕದಲ್ಲಿ ಓದಿದ್ದೇವೆ. ಅದರೆ ಕಾಲ ಕಳೆದಂತೆ ಇಂತಹ ಕಲೆಗಳು ನಶಿಸಿ ಹೋಗಿವೆ, ಹೋಗುತ್ತಿವೆ. ಇದು ನಿಜಕ್ಕೂ ವಿಷಾದನೀಯ.

ಯಾವುದೇ ರೀತಿಯ ಕಲೆ ಸೃಷ್ಟಿಯಾಗಲು ಕಲಾವಿದ ಅಥವಾ ಶಿಲ್ಪಿ ಬೇಕೇ ಬೇಕು. ಸೃಷ್ಟಿ ಮಾಡುವವರು ಅನುಭವಿಗಳೂ , ನೈಪುಣ್ಯತೆ ಹೊಂದಿದವರು ಮತ್ತು ನುರಿತವರಾಗಿರಬೇಕು. ಈ ರೀತಿ ನೈಪುಣ್ಯತೆ ಸಾಧಿಸಲೇ 10-20 ವರ್ಷಗಳ ಕಾಲ ಬೇಕಾಗುತ್ತದೆ. ಈ ನೈಪುಣ್ಯತೆ ಸಂಪಾದಿಸುವ ಸಮಯದಲ್ಲಿ ಕೈಗೊಂಡ ಕಲೆಗೆ ಬೇಡಿಕೆಯೂ ಇರಬೇಕಾಗುತ್ತದೆ. ಇಲ್ಲದಿದ್ದರೆ ಕಲಾವಿದರು ಬದುಕಲೇ ಸಾಧ್ಯವಿಲ್ಲ. ರಚಿಸಿದ ಕೃತಿಗಳಿಗೆ ಬೇಡಿಕೆ ಇಲ್ಲದೆ , ಪೋಷಕರೂ ಇಲ್ಲದೆ ಹತ್ತಾರು ಕಲೆಗಳು ಇಂದು ಆಸ್ತಿತ್ವದಲ್ಲೇ ಇಲ್ಲ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಹತ್ತಾರು ಬಗೆಯ ಕಲೆಗಳನ್ನು ,ಕಲಾವಿದರನ್ನು ಪ್ರೋತ್ಸಾಹಿಸುತಿದ್ದರು. ಆದರೆ ಪ್ರಜಾ ಪ್ರಭುತ್ವ ಆಡಳಿತ ಬಂದ ನಂತರ ಕೆಲವೊಂದು ಅಪರೂಪದ ಕಲೆಗಳಿಗೆ ಪೋಷಕರೆ ಇಲ್ಲದಂತಾಗಿದೆ.

ನಮ್ಮ ಸಾಂಸ್ಕೃತಿಕ ನಗರಿಯು ಮೈಸೂರು ಪಾಕ್ ಮತ್ತು ಮೈಸೂರು ಸಿಲ್ಕ್ ಸೀರೆಗಳಿಗೆ ಪ್ರಸಿದ್ದಿ ಪಡೆದಿದೆ. ಆದರೆ ನೂರಾರು ವರ್ಷಗಳ ಹಿಂದಿನಿಂದಲೇ ಮೈಸೂರು ಕುಂದನ ಕಲೆಗೆ ಪ್ರಸಿದ್ದವಾಗಿದ್ದುದು ಹೊರ ರಾಜ್ಯಗಳವರಿಗೆ ಬಿಡಿ ಇಂದಿನ ಮೈಸೂರಿಗರಿಗೇ ಗೊತ್ತಿಲ್ಲ. ಅದರೆ ಕುಂದನ ಕಲೆಯು ಮೈಸೂರಿನ ಪಾರಂಪರಿಕ ಕಲೆ ಆಗಿದ್ದು ದೇಶದಲ್ಲಿ ಇದರ ಕೇಂದ್ರ ಮೈಸೂರೇ ಆಗಿದೆ. ಈ ಕುಂದನ ಕಲೆಗೆ 400 ವರ್ಷಗಳ ಇತಿಹಾಸ ಇದ್ದು, ಮೈಸೂರು ಮಹಾರಾಜರ ಕಾಲದಲ್ಲಿ ಈ ಕಲೆ ತುಂಬಾ ಪ್ರಸಿದ್ಧಿ ಪಡೆದಿದ್ದು, 2000ಕ್ಕೂ ಹೆಚ್ಚು ಜನ ಕಲಾವಿದರಿದ್ದರು. ಕಾಲ ಕ್ರಮೇಣ ಈ ಕಲೆ ಕ್ಷೀಣಿಸತೊಡಗಿದ್ದು, ನಮ್ಮ ರಾಜ್ಯದಲ್ಲೀಗ ಕೇವಲ 200 ಮಂದಿ ಮಾತ್ರ ಕುಂದನ ಕಲಾವಿದರಿದ್ದಾರೆ ಎಂದು ಅಂದಾಜಿಸಲಾಗಿದೆ. ಕುಂದನ ಕಲೆ (ಇನ್-ಲೇ) ಎಂದರೇನು ?ಮರದಿಂದ ಕೆತ್ತನೆ ಕೆಲಸವನ್ನು ಹಾಗೂ ಕತ್ತರಿಸಿದ ಮರದ ತುಂಡುಗಳಿಂದ ಕಲೆಗಳನ್ನು ರೂಪಿಸುವುದೇ ಈ ಕುಂದನ ಕಲೆಯಾಗಿದ್ದು, ಇಂದು ಅವಸಾನದ ಅಂಚಿನಲ್ಲಿದೆ. 

ಈ ನಡುವೆ ಬೆಂಗಳೂರಿನ ಯುವ ಎಂಜಿನಿಯರಿಂಗ್ ಪದವೀಧರ ಭಾನು ಪ್ರಕಾಶ್ ಕುಂದನ ಕಲೆಯ ಬಗ್ಗೆ ಸ್ವತಃ ಆಸಕ್ತಿ ಮೂಡಿಸಿಕೊಂಡು ಇದರ ಪುನರುಜ್ಜೀವನಕ್ಕೆ ಮುಂದಾಗಿರುವುದು ಶ್ಲಾಘನೀಯ. ಲಂಡನ್‌ ನಲ್ಲಿ ನಾಲ್ಕು ವರ್ಷ ಮತ್ತು ಬೆಂಗಳೂರಿನಲ್ಲಿ 7 ವರ್ಷ ಕೆಲಸ ಮಾಡಿರುವ ಮೆಕ್ಯಾನಿಕಲ್‌ ಎಂಜಿನಿಯರ್‌ ಈಗ ಕುಂದನಕಲೆಯಲ್ಲಿ ತಮ್ಮನ್ನು ಪೂರ್ಣಾವಧಿ ತೊಡಗಿಸಿಕೊಂಡಿದ್ದಾರೆ. 

ಭಾನು ಪ್ರಕಾಶ್ ಅವರು ಕಳೆದ ಒಂದು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಪ್ರೀತಿಯನ್ನು ಕುಂದನ ಕಲೆಯ ಮೂಲಕ ಅರಳಿಸಿದ್ದಾರೆ. ಹತ್ತು ಬೇರೆ ಬೇರೆ ಜಾತಿಯ ವಿಶಿಷ್ಟ ಮರಗಳನ್ನು ಬಳಸಿ 7 ಅಡಿ ಅಗಲ, 5 ಅಡಿ ಉದ್ದದ ಅಪರೂಪದ ಕಲಾಕೃತಿಯನ್ನು ರಚಿಸಿದ್ದು ಇದಕ್ಕೆ 25 ಕುಶಲಕರ್ಮಿಗಳು ಅಹರ್ನಿಶಿ ದುಡಿದಿದ್ದಾರೆ. ಕುಂದನ ಕಲೆಯಲ್ಲಿ ವ್ಯಕ್ತಿಯ ಕುರಿತು ಇಷ್ಟು ದೊಡ್ಡ ಕಲಾಕೃತಿ ನಿರ್ಮಿಸಿರುವುದು. ದೇಶದಲ್ಲೇ ಪ್ರಪ್ರಥಮ ಎಂದ ಭಾನು ಅವರು ಇದನ್ನು ಲಿಮ್ಕ ಬುಕ್‌ ಆಫ್‌ ರೆಕಾರ್ಡ್ಸ್‌ ಗೂ ಕಳಿಸುವುದಾಗಿ ತಿಳಿಸಿದರು.

ಮೋದಿ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಈ ಕಲಾಕೃತಿಯು ನಾಳೆ ಗುರುವಾರದಿಂದ ಸೂರತ್‌ ನ ಲ್ಲಿ ಪ್ರದರ್ಶನಗೊಳ್ಳಲಿದೆ. ಇದನ್ನು ಮಾರಾಟಕ್ಕಿಟ್ಟಿರುವುದಾಗಿಯೂ ತಿಳಿಸಿದ ಅವರು ಇದಕ್ಕೆ ಸುಮಾರು 1.5 ರಿಂದ 2 ಕೋಟಿ ರೂಪಾಯಿಗಳಿಗೆ ಮಾರಾಟವಾಗುವ ಭರವಸೆ ಇದೆ ಎಂದರು. 

ಈ ಕಲಾವಿದರು ಇಂದು ನುರಿತವರಿದ್ದರೂ ಸೂಕ್ತ ಬೇಡಿಕೆ ಇಲ್ಲದೆ ಆಟೋ ಓಡಿಸುವುದು , ಕೂಲಿ ಕೆಲಸ ಮಾಡುವುದಕ್ಕೆ ಮುಂದಾಗುತಿದ್ದಾರೆ. ಇದು ಅವರ ಹೊಟ್ಟೆ ತುಂಬಿಸಲು ಅನಿವಾರ್ಯ ಕೂಡ. ಮುಂದಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆರ್ಟ್ಸ್‌ ಮತ್ತು ಕ್ರಾಪ್ಟ್ಸ್‌ ಕೋರ್ಸನ್ನು ಆರಂಭಿಸಲೂ ಭಾನು ಪ್ರಕಾಶ್‌ ಚಿಂತನೆ ನಡೆಸಿದ್ದಾರೆ. ಇದರಿಂದಾಗಿ ನಶಿಸುತಿದ್ದ ಕುಂದನ ಕಲೆಯ ಪರಿಚಯ ಮುಂದಿನ ಪೀಳಿಗೆಗೆ ಅಗಬಹುದು ಎನ್ನುವ ಆಶಯ ಅವರದ್ದು.