ಹಿಮಸಿಂಚನದ ಮುದನೀಡುವ ಗೋಪಾಲಸ್ವಾಮಿ ಬೆಟ್ಟ

ಹಿಮಸಿಂಚನದ ಮುದನೀಡುವ ಗೋಪಾಲಸ್ವಾಮಿ ಬೆಟ್ಟ

B.M.LAVAKUMAR   ¦    Sep 28, 2018 02:11:16 PM (IST)
ಹಿಮಸಿಂಚನದ ಮುದನೀಡುವ ಗೋಪಾಲಸ್ವಾಮಿ ಬೆಟ್ಟ

ಪ್ರವಾಸ ತೆರಳುವವರಿಗೆ ಅದರಲ್ಲೂ ನಿಸರ್ಗ ಮಡಿಲ ತಾಣಗಳತ್ತ ಮುಖ ಮಾಡುವವರಿಗೆ ಈಗ ಹೇಳಿ ಮಾಡಿಸಿದ ಸಮಯ... ಏಕೆಂದರೆ ಮುಂಗಾರು ಮಳೆಗೆ ಇಡೀ ನಿಸರ್ಗ ಹಸಿರಹಚ್ಚಡವನ್ನು ಹೊದ್ದುಕೊಂಡು ಪ್ರಕೃತಿ ಪ್ರೇಮಿಗಳನ್ನು ಸ್ವಾಗತಿಸಲೇನೋ ಎಂಬಂತೆ ನಿಂತಿದೆ.. ಇನ್ನೊಂದೆಡೆ ವಾತಾವರಣವೂ ಒಂದಷ್ಟು ಹುಮ್ಮಸ್ಸು ನೀಡುವಂತಿದೆ. ಇಂತಹ ಸಮಯದಲ್ಲಿ ನಿಸರ್ಗ ಸುಂದರ ತಾಣಗಳಿಗೆ ತೆರಳಿ ಒಂದಷ್ಟು ಸಮಯವನ್ನು ಕಳೆದು ಬಂದರೆ ಅದಕ್ಕಿಂತ ರಿಲ್ಯಾಕ್ಸ್ ಮತ್ತೊಂದಿಲ್ಲ.

ನಗರಗಳ ಜಂಜಾಟದಲ್ಲಿ ತಮ್ಮದೇ ಕೆಲಸದಲ್ಲಿ ಮುಳುಗಿ ಹೋದವರು ಒಂದಿಷ್ಟು ಬಿಡುವು ಮಾಡಿಕೊಂಡು ಪ್ರವಾಸ ಹೊರಟಿದ್ದೇ ಆದರೆ ಪ್ರಕೃತಿಯ ಸುಂದರ ಕ್ಷಣಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ. ಬಿಸಿಲಲ್ಲಿ ತಂಗಾಳಿಯಿಂದ, ಮುಂಜಾನೆ ಸಂಜೆ ಹಿಮದ ಮಳೆಯಲ್ಲಿ ಖುಷಿಯಾಗಿ ಕಾಲ ಕಳೆಯ ಬೇಕೆಂದು ಬಯಸಿದರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವದ್‍ಗೋಪಾಲಸ್ವಾಮಿ ಬೆಟ್ಟದತ್ತ ಪ್ರವಾಸಿಗರು ತಮ್ಮ ಪ್ರಯಾಣವನ್ನು ಮುಂದುವರೆಸಬಹುದಾಗಿದೆ.

ಗೋಪಾಲಸ್ವಾಮಿ ಬೆಟ್ಟವು ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟವಾಗಿದೆ. ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿದೆ. ಸುಮಾರು 1450 ಅಡಿ ಎತ್ತರದ ಈ ಬೆಟ್ಟದಲ್ಲಿ ಶ್ರೀ ಗೋಪಾಲಸ್ವಾಮಿ ನೆಲೆನಿಂತಿದ್ದು, ಚಾರಣ ಪ್ರಿಯರಿಗೆ ಹುರುಪಿನ ತಾಣವಾಗಿಯೂ, ನಿಸರ್ಗ ಪ್ರೇಮಿಗಳಿಗೆ ಮುದ ನೀಡುವ, ಭಕ್ತರಿಗೆ ಇಷ್ಟಾರ್ಥ ನೆರವೇರಿಸುವ ಕ್ಷೇತ್ರವಾಗಿಯೂ ಗಮನಸೆಳೆಯುತ್ತಿದೆ.

ಸದಾ ಒತ್ತಡಗಳಿಂದ, ಪೇಟೆ, ಪಟ್ಟಣಗಳ ಗೌಜುಗದ್ದಲಗಳಲ್ಲಿ ಬದುಕು ಕಟ್ಟಿಕೊಂಡವರು ತಮ್ಮ ವಾರದ ರಜಾ ದಿನಗಳನ್ನು ಕಳೆಯಲು ಇಲ್ಲಿಗೆ ಬಂದರೆ, ಪ್ರೇಮಿಗಳು ಏಕಾಂತ ಬಯಸಿ ಬರುತ್ತಾರೆ. ಹಾಗೆ ಬಂದವರು ದಟ್ಟ್ಟ ಅರಣ್ಯ ನಡುವೆ ಹಿಮದಿಂದ ಆವೃತವಾದ ಬೆಟ್ಟದ ರಮಣೀಯ ನೋಟವನ್ನು ನೋಡುತ್ತಾ ಮೈಮರೆಯುತ್ತಾರೆ.

ಇನ್ನು ಅತಿ ಎತ್ತರದ ವಿಶಾಲ ಪ್ರದೇಶವನ್ನು ಹೊಂದಿ ತಂಗಾಳಿಯೊಂದಿಗೆ ಮುಂಜಾನೆ ಹಾಗೂ ಸಂಜೆ ಸದಾ ಹಿಮದಿಂದ ಆವೃತವಾಗುವುದರಿಂದ ಹಾಗೂ ಇಲ್ಲಿ ಗೋಪಾಲಸ್ವಾಮಿ ನೆಲೆ ನಿಂತಿದ್ದರಿಂದ ಒಟ್ಟಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿರುವುದಾಗಿ ಹೇಳಲಾಗುತ್ತಿದೆ.

ಗುಂಡ್ಲುಪೇಟೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿ ಗೋಪಾಲಸ್ವಾಮಿ ಬೆಟ್ಟವಿದ್ದು, ಕಡಿದಾದ ಅಂಕುಡೊಂಕು ರಸ್ತೆಯಲ್ಲಿ ತೆರಳವುದೇ ಒಂದು ರೋಮಾಂಚನಕಾರಿ ಅನುಭವ. ಇಲ್ಲಿಗೆ ಖಾಸಗಿ ವಾಹನಗಳಿಗೆ ನಿರ್ಬಂಧ ಇರುವ ಕಾರಣ ಸರ್ಕಾರಿ ಬಸ್‍ನಲ್ಲೇ ತೆರಳಬೇಕಾಗುತ್ತದೆ. ಅಂಕು ಡೊಂಕು ಹಾದಿಯಲ್ಲಿ ಸಾಗುವಾಗ ಸಿಗುವ ಸುಂದರ ದೃಶ್ಯಗಳು ಗಮನಸೆಳೆಯುತ್ತವೆ.

ಇನ್ನು ಹಿಮವದ್ ಗೋಪಾಲಸ್ವಾಮಿ ದೇಗುಲದ ಬಗ್ಗೆ ಹೇಳುವುದಾದರೆ ಇದಕ್ಕೆ ಸುಮಾರು ಏಳು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಇತಿಹಾಸದ ಪ್ರಕಾರ ಹೊಯ್ಸಳ ದೊರೆ ಚೋಳ ಬಲ್ಲಾಳ ಈ ದೇವಾಲಯವನ್ನು ನಿರ್ಮಿಸಿದನೆಂದೂ ಬಳಿಕ ಮೈಸೂರಿನ ಒಡೆಯರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಲಾಯಿತು ಎನ್ನಲಾಗಿದೆ.

ಒಂದೇ ಸುತ್ತುಪೌಳಿಯಲ್ಲಿ ನಿರ್ಮಾಣವಾಗಿರುವ ದೇವಾಲಯ ವಿಶಾಲ ಆವರಣವನ್ನು ಹೊಂದಿದ್ದು, ಮುಖಮಂಟಪದಲ್ಲಿ ದಶಾವತಾರದ ಕೆತ್ತನೆಗಳು, ಬಲಿಪೀಠ, ಧ್ವಜ ಸ್ತಂಭಗಳು ಆಕರ್ಷಕವಾಗಿವೆ.

ಈ ಬೆಟ್ಟಕ್ಕೆ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಹೇಗೆ ಬಂತೆಂಬ ಪ್ರಶ್ನೆಗೆ ಇಲ್ಲಿನವರು ತಮ್ಮದೇ ಆದ ಉತ್ತರವನ್ನು ನೀಡುತ್ತಾರೆ. ಸ್ಥಳೀಯ ಹಿರಿಯರು ಹೇಳುವ ಪ್ರಕಾರ ಈ ಬೆಟ್ಟಕ್ಕೆ ಹಿಂದೆ ಗೋವರ್ಧನಗಿರಿ ಎನ್ನುತ್ತಿದ್ದರಂತೆ ಇದಕ್ಕೆ ಕಾರಣ ಬೆಟ್ಟ ದೂರದಿಂದ ನೋಡಲು ಹಸುವಿನ ರೀತಿ ಕಾಣುತ್ತದೆಯಂತೆ. ಅಷ್ಟೇ ಅಲ್ಲ ಹಸಿರ ಸಂಪತ್ತಿನಿಂದ ಕಂಗೊಳಿಸುತ್ತಿದ್ದ ಬೆಟ್ಟಕ್ಕೆ ಹಿಂದಿನ ಕಾಲದಲ್ಲಿ ಗೋಪಾಲಕರು ದನ ಮೇಯಿಸಲು ಬರುತ್ತಿದ್ದರಂತೆ ಗೋಪಾಲಕರು ಬರುತ್ತಿದ್ದರಿಂದ ಗೋವರ್ಧನಗಿರಿ ಗೋಪಾಲಸ್ವಾಮಿ ಬೆಟ್ಟವಾಯಿತು ಎಂದು ಅಭಿಪ್ರಾಯಪಡಲಾಗಿದೆ.

ರುಕ್ಮಿಣಿ, ಸತ್ಯಭಾಮೆಯರ ಸಹಿತ ಇಲ್ಲಿ ನೆಲೆಸಿರುವ ಶ್ರೀಕೃಷ್ಣನನ್ನು ಸಂತಾನ ಗೋಪಾಲಕೃಷ್ಣ ಎಂದೂ ಕರೆಯಲಾಗುತ್ತದೆ. ಇಲ್ಲಿನ ಮೂಲ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರೆಂದೂ ಹೇಳಲಾಗುತ್ತದೆ. ಗೋಪಾಲಸ್ವಾಮಿ ಬೆಟ್ಟವು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನಗಿರಿ ಮೊದಲಾದ ಬೆಟ್ಟಗಳಿಂದ ಸುತ್ತುವರೆದಿದ್ದು, ಹಂಸತೀರ್ಥ, ಪದ್ಮತೀರ್ಥ, ಶಂಖ ತೀರ್ಥ, ಚಕ್ರ ತೀರ್ಥ, ಗದಾ ತೀರ್ಥ, ಶಜ್ಞಾತೀರ್ಥ, ವನಮೂಲಿಕಾ ತೀರ್ಥ, ತೊಟ್ಲು ತೀರ್ಥ ಎಂಬ ಅಷ್ಟ ತೀರ್ಥಗಳಿವೆ. ಮಕ್ಕಳಿಲ್ಲದವರು ತೊಟ್ಲು ತೀರ್ಥದಲ್ಲಿ ಸ್ನಾನ ಮಾಡಿದರೆ ಮಕ್ಕಳಾಗುತ್ತವೆಂಬ ನಂಬಿಕೆಯೂ ಇಲ್ಲಿನವರಿಗಿದೆ. ವಿಶ್ವಪ್ರಸಿದ್ಧ ಮೈಸೂರು ದಸರಾ ಸಂದರ್ಭದಲ್ಲಿ ಮೇಲುಕೋಟೆ, ಶ್ರೀರಂಗಪಟ್ಟಣ ದೇವಸ್ಥಾನಗಳೊಂದಿಗೆ ಗೋಪಾಲಸ್ವಾಮಿ ಬೆಟ್ಟದಲ್ಲೂ ವಿಶೇಷ ಪೂಜೆ ನಡೆಯುವುದು ವಿಶೇಷ.

ಇಲ್ಲಿಗೆ ತೆರಳುವ ಮೊದಲು ಸಮೀಪದ ಹಂಗಳ ಗ್ರಾಮದಲ್ಲಿ ಬೇಕಾದ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋಗಬೇಕು. ಬೆಟ್ಟದ ಮೇಲೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. ಪ್ರವೇಶಾವಕಾಶ ಬೆಳಿಗ್ಗೆ 8 ರಿಂದ ಸಂಜೆ 4.30 ಗಂಟೆಯವರಗೆ ಮಾತ್ರ. ಗೋಪಾಲಸ್ವಾಮಿಬೆಟ್ಟವು ರಾಜಧಾನಿ ಬೆಂಗಳೂರಿನಿಂದ 220 ಕಿ.ಮೀ. ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಿಂದ 74 ಕಿ.ಮೀ. ದೂರದಲ್ಲಿದೆ. ಗುಂಡ್ಲುಪೇಟೆಯಿಂದ 20 ಕಿ.ಮೀ. ಅಂತರದಲ್ಲಿದೆ.

More Images