ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ಸರ್ ಸಿ.ವಿ. ರಾಮನ್ ಸ್ಮರಣೆ

ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ಸರ್ ಸಿ.ವಿ. ರಾಮನ್ ಸ್ಮರಣೆ

Feb 28, 2020 06:10:06 PM (IST)
ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ಸರ್ ಸಿ.ವಿ. ರಾಮನ್ ಸ್ಮರಣೆ

ಜೀವನದಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮೊದಲ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸರ್. ಸಿ.ವಿ ರಾಮನ್ ಅವರು ‘ರಾಮನ್ ಪರಿಣಾಮ’ ಸಿದ್ದಾಂತವನ್ನು ಪ್ರತಿಪಾದಿಸಿದ ಪ್ರಯುಕ್ತ ಪ್ರತಿ ವರ್ಷ ಫೆ. 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.

ಸಾಮಾನ್ಯ ಜನ ಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿದೆ. ಆದರೆ ವಿಜ್ಞಾನದ ಮಹತ್ವವನ್ನು ಅರಿತಾಗಲೆ, ಅದರ ಪರಿಣಾಮ ಏನು ಎಂದು ತಿಳಿಯಲು ಸಾಧ್ಯ. ಹೀಗಾಗಿ ಜನ ಸಾಮಾನ್ಯರಿಗೂ ವಿಜ್ಞಾನದ ಮಹತ್ವ ತಿಳಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಫೆ. 28 ರ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತದ ಸರ್ ಸಿ.ವಿ. ರಾಮನ್ ಅವರು ಸಾಕಷ್ಟು ಸಂಶೋಧನೆಗಳ ಬಳಿಕ ಪ್ರತಿಪಾದಿಸಿದ ‘ರಾಮನ್ ಪರಿಣಾಮ’ ವನ್ನು ಮಂಡಿಸಿದ್ದು ಫೆ. 28 ರಂದು ಹೀಗಾಗಿ ಈ ದಿನವನ್ನೇ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತ ದೇಶದಲ್ಲಿ ನೋಬೆಲ್ ಪ್ರಶಸ್ತಿ ಹಾಗೂ ಭಾರತ ರತ್ನ ಹೀಗೆ ಎರಡೂ ಅತ್ಯುನ್ನತ ಪ್ರಶಸ್ತಿ ಪಡೆದ ಏಕೈಕ ಸಾಧಕರು ಸರ್ ಸಿ.ವಿ. ರಾಮನ್ ಅವರು.

ಜೀವನ ಚರಿತ್ರೆ :
ಚಂದ್ರಶೇಖರ ವೆಂಕಟರಾಮನ್ (ಸಿ.ವಿ ರಾಮನ್) ಅವರು 1888 ರ ನವೆಂಬರ್ 07 ರಂದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ವಿಜ್ಞಾನ ಶಿಕ್ಷಕ ಚಂದ್ರಶೇಖರ್ ಅವರ ಮಗನಾಗಿ ಜನಿಸಿದರು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ಇವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ಸ್ಥಾನಗಳಿಸಿ, ಕಲ್ಕತ್ತಾದಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದರು.

ಏನಿದು ರಾಮನ್ ಪರಿಣಾಮ? :
ಒಂದೊಮ್ಮೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ರಾಮನ್ ಅವರಿಗೆ ಸಮುದ್ರ ನೀಲಿಯಾಗಿ ಕಾಣುತ್ತಿರುವುದರ ಬಗ್ಗೆ ಕುತೂಹಲ ಹೆಚ್ಚಾಯಿತು. ಇದನ್ನು ಪತ್ತೆ ಮಾಡಲು ಹೊರಟ ಅವರು ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿರಲು ಕಾರಣ ಎಂಬ ವಿಷಯವನ್ನು ಜಗತ್ತಿಗೆ ಪರಿಚಯಿಸಿದರು. ಬೆಳಕು ‘ಚದುರುವಿಕೆ’ ಸಿದ್ದಾಂತ ವಿಶ್ವವಿಖ್ಯಾತವಾಗಿ ‘ರಾಮನ್ ಪರಿಣಾಮ’ ಎಂಬ ಸಿದ್ದಾಂತವಾಯಿತು. ಅವರ ಈ ಸಾಧನೆಗಾಗಿ 1930 ರಲ್ಲಿ ನೋಬೆಲ್ ಪುರಸ್ಕಾರ ಲಭಿಸಿತು. ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊಟ್ಟ ಮೊದಲ ನೊಬೆಲ್ ಪುರಸ್ಕಾರ ಇದಾಗಿತ್ತು.

ಪ್ರಶಸ್ತಿಗಳು : 1954 ರಲ್ಲಿ ಭಾರತ ರತ್ನ ಪ್ರಶಸ್ತಿ, 1929 ರಲ್ಲಿ ನೈಟ್‍ಹುಡ್, 1957 ರಲ್ಲಿ ಲೆನಿನ್ ಶಾಂತಿ ಪ್ರಶಸ್ತಿ ಹಾಗೂ 1935 ರಲ್ಲಿ ಮೈಸೂರು ಮಹಾರಾಜರಿಂದ ‘ರಾಜಸಭಾ ಭೂಷಣ’ ಗೌರವ ಪಡೆದಿದ್ದಾರೆ. 1970 ರ ನವೆಂಬರ್ 21 ರಂದು ಪ್ರೋ. ಸಿ.ವಿ ರಾಮನ್ ಅವರು ದೇಮಹಳ್ಳಿಯಲ್ಲಿ ನಿಧನರಾದರು.
ಇಂದಿನ ಯುವ ಪೀಳಿಗೆಗೆ ವಿಜ್ಞಾನದ ಮಹತ್ವ ತಿಳಿಸುವ ಉದ್ದೇಶದಿಂದ ದೇಶದಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ಉಪನ್ಯಾಸ ಮುಂತಾದ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲಾಗುತ್ತದೆ. ವಿಜ್ಞಾನ ದಿನಾಚರಣೆಯನ್ನು ಪ್ರತಿ ವರ್ಷ ಒಂದು ಘೋಷ ವಾಕ್ಯದಡಿ ಆಚರಿಸಲಾಗುತ್ತಿದ್ದು, ಈ ವರ್ಷದ ಘೋಷವಾಕ್ಯ ‘ವಿಜ್ಞಾನದಲ್ಲಿ ಮಹಿಳೆ’ ಎಂಬುದಾಗಿದೆ.