ಮೇಲುಕೋಟೆಯ ಚೆಲುವನಿಗಿಂದು ವಜ್ರಕಿರೀಟಧಾರಣೆ

ಮೇಲುಕೋಟೆಯ ಚೆಲುವನಿಗಿಂದು ವಜ್ರಕಿರೀಟಧಾರಣೆ

LK   ¦    Mar 17, 2019 12:23:30 PM (IST)
ಮೇಲುಕೋಟೆಯ ಚೆಲುವನಿಗಿಂದು ವಜ್ರಕಿರೀಟಧಾರಣೆ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿಗೆ ಸೇರಿರುವ ಮೇಲುಕೋಟೆಯಲ್ಲಿಂದು ಭಾನುವಾರ ರಾತ್ರಿ ವೈರಮುಡಿ ಬ್ರಹ್ಮೋತ್ಸವ ಲಕ್ಷಾಧಿ ಭಕ್ತರ ಸಮ್ಮುಖದಲ್ಲಿ ನಡೆಯಲಿದ್ದು, ಈ ಸುಂದರ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಭಕ್ತ ಸಮೂಹ ಸಾಗರೋಪಾದಿಯಲ್ಲಿ ಸಾಗಿ ಬರುತ್ತಿದೆ.

ರಾತ್ರಿ ಎಂಟು ಗಂಟೆ ಬಳಿಕ ನಡೆಯುವ ವೈರಮುಡಿ ಬ್ರಹ್ಮೋತ್ಸವದ ಮೆರವಣಿಗೆ ಮುಂಜಾನೆ ವರೆಗೆ ನಡೆಯಲಿದೆ. ಇದೇ ವೇಳೆ ರಾಜಮುಡಿ ಕಿರೀಟಧಾರಣೆಯೂ ನೆರವೇರಲಿದೆ.

ವರ್ಷಕ್ಕೊಮ್ಮೆ ನಡೆಯುವ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಜಗಪ್ರಸಿದ್ಧವಾಗಿದ್ದು, ಇಂತಹ ಉತ್ಸವವೊಂದನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಹೀಗಾಗಿಯೇ ಭಕ್ತರು ರಾಜ್ಯ, ದೇಶ ಮಾತ್ರವಲ್ಲದೆ ವಿದೇಶದಿಂದಲೂ ಇಲ್ಲಿಗೆ ಆಗಮಿಸುವುದನ್ನು ನಾವು ಕಾಣಬಹುದಾಗಿದೆ.

ಹಾಗೇ ನೋಡಿದರೆ ಮೇಲುಕೋಟೆ ಮಂಡ್ಯದಿಂದ 28 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿಯಷ್ಟು ಎತ್ತರದಲ್ಲಿದೆ. ಭಾರತದಲ್ಲಿರುವ ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿದ್ದು, ದಕ್ಷಿಣ ಭಾರತದ ಪ್ರಮುಖ ನಾಲ್ಕು ವೈಷ್ಣವ ಕ್ಷೇತ್ರಗಳಾದ ಶ್ರೀರಂಗ, ತಿರುಪತಿ, ಕಾಂಚೀಪುರ ಜತೆಗೆ ಮೇಲುಕೋಟೆಯೂ ಸೇರುತ್ತದೆ.

ಚೆಲುವರಾಯಸ್ವಾಮಿಯ ವೈರಮುಡಿಯ ಬ್ರಹ್ಮೋತ್ಸವವು ಈ ಬಾರಿ ಮಾ.17ರಂದು ನಡೆಯುತ್ತಿದ್ದು, ಚೆಲುವನಾರಾಯಣ ಸ್ವಾಮಿಗೆ ವಜ್ರ ಖಚಿತ ಕಿರೀಟವಾದ ವೈರಮುಡಿಯನ್ನು ಧರಿಸುವ ಪವಿತ್ರ ದಿನವಾಗಿದೆ. ಇದು ಶ್ರೀಮಾನ್ ನಾರಾಯಣನ ಕಿರೀಟವೆಂದೂ ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂದೂ, ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂದೂ ಹೇಳಲಾಗುತ್ತಿದೆ. ವಜ್ರಖಚಿತ ಕಿರೀಟವನ್ನು ಚೆಲುವರಾಯಸ್ವಾಮಿಗೆ ಧರಿಸುವ ಸಂದರ್ಭ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವವಾಗಿದೆ.

ಮೈಸೂರು ರಾಜರ ಆಡಳಿತದಲ್ಲಿ ವೈರಮುಡಿ ಕಿರೀಟ ರಾಜಾಶ್ರಯದಲ್ಲಿತ್ತಾದರೂ ಬಳಿಕ ಸರ್ಕಾರದ ವಶಕ್ಕೆ ಹಸ್ತಾಂತರಿಸಲಾಯಿತು. ಈಗ ಮಂಡ್ಯದ ಸರ್ಕಾರಿ ಖಜಾನೆಯಲ್ಲಿದ್ದು, ಉತ್ಸವದ ಸಂದರ್ಭ ವೈರಮುಡಿ, ರಾಜಮುಡಿ ಕಿರೀಟವನ್ನು ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ತರಲಾಗುತ್ತದೆಯಲ್ಲದೆ, ಬಳಿಕ ದ್ವಾರದ ಹನುಮಂತನ ಗುಡಿಯ ಬಳಿಯಿಂದ ಬೆಳ್ಳಿ ಪಲ್ಲಕಿಯಲ್ಲಿರಿಸಿ ಪೂಜಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.

ವೈರಮುಡಿ ಬ್ರಹ್ಮೋತ್ಸವ ಸಂದರ್ಭ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಮಾತ್ರವಲ್ಲದೆ, ಮೈಸೂರು ಅರಸರಾದ ರಾಜ ಒಡೆಯರ್ ಅರ್ಪಿಸಿದ ರಾಜಮುಡಿಯಲ್ಲದೆ, ಗಂಡಭೇರುಂಡ ಪದಕ, ಶಂಖ, ಚಕ್ರ, ಗಧೆ, ಪದ್ಮಪೀಠ, ಕರ್ಣಕುಂಡಲ ಸೇರಿದಂತೆ 14 ಆಭರಣಗಳನ್ನು ಧರಿಸಲಾಗುತ್ತದೆ.

ಮೇಲುಕೋಟೆಯಲ್ಲಿ ನಡೆಯುವ ಜಾತ್ರೆಯಲ್ಲಿ ನಾಲ್ಕನೆಯ ದಿನವು ಬಹಳ ಪ್ರಮುಖ ದಿನವಾಗಿದ್ದು ಅಂದು ರಾತ್ರಿ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಹಾಗೂ ಬ್ರಾಹ್ಮಿ ಮುಹೂರ್ತದಲ್ಲಿ ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುತ್ತದೆ. ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳಿಂದ ದೂರದ ಊರುಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡು ಪುನೀತರಾದ ಸಂತಸದಲ್ಲಿ ಮನೆಗೆ ತೆರಳುತ್ತಾರೆ.