ಜೈನ ಪರಂಪರೆಗೆ ಸಾಕ್ಷಿಯಾದ ಮಾಯಸಂದ್ರ: ಸಂಕೀಘಟ್ಟದ ಬಸದಿಗಳು!

ಜೈನ ಪರಂಪರೆಗೆ ಸಾಕ್ಷಿಯಾದ ಮಾಯಸಂದ್ರ: ಸಂಕೀಘಟ್ಟದ ಬಸದಿಗಳು!

LK   ¦    Oct 21, 2020 03:41:23 PM (IST)
ಜೈನ ಪರಂಪರೆಗೆ ಸಾಕ್ಷಿಯಾದ ಮಾಯಸಂದ್ರ: ಸಂಕೀಘಟ್ಟದ ಬಸದಿಗಳು!

ಮಾಗಡಿ: ಕರ್ನಾಟಕ ಸರ್ವ ಧರ್ಮಗಳಿಗೆ ನೆಲೆ ಕಲ್ಪಿಸಿದ ರಾಜ್ಯವಾಗಿದ್ದು, ಇವತ್ತಿಗೂ ಇಲ್ಲಿ ಹಲವು ರೀತಿಯ ದೇಗುಲ, ಚರ್ಚ್, ಮಸೀದಿ, ಬಸದಿಗಳನ್ನು ಕಾಣ ಬಹುದಾಗಿದೆ. ಅಷ್ಟೇ ಅಲ್ಲದೆ ಹಲವು ಪ್ರದೇಶಗಳಲ್ಲಿರುವ ಮಂದಿರ, ದೇಗುಲಗಳು ಭಾವೈಕ್ಯತೆಯ ಸಂಗಮವಾಗಿಯೂ ಗಮನಸೆಳೆಯುತ್ತಿವೆ.

ಜೈನರಿಗೂ ರಾಜ್ಯ ಆಶ್ರಯ ತಾಣವಾಗಿತ್ತು ಎಂಬುದಕ್ಕೆ ಇಲ್ಲಿರುವ ಹಲವು ಬಸದಿಗಳು ನಿದರ್ಶನವಾಗಿವೆ. ಈ ಪೈಕಿ ಮಾಗಡಿ ತಾಲೂಕಿನ ಮಾಯಸಂದ್ರ ಮತ್ತು ಸಂಕೀಘಟ್ಟದಲ್ಲಿರುವ ಜೈನ ಬಸದಿಗಳು ಗಮನಸೆಳೆಯುತ್ತವೆ. ನಾವು ಇತಿಹಾಸವನ್ನು ನೋಡಿದರೆ ಬೆಂಗಳೂರು ಬಳಿಯ ಮಾಗಡಿ ಸೀಮೆಯಲ್ಲಿ ಜೈನ ಪರಂಪರೆ ಪ್ರಚಲಿತದಲ್ಲಿದ್ದುದನ್ನು ಕಾಣಬಹುದು. 

ಈ ವ್ಯಾಪ್ತಿಯಲ್ಲಿ ಸುತ್ತಾಡಿದರೆ ಹರ್ತಿ, ಕಲ್ಯಾ, ಬಿಸ್ಕೂರುಗಳಲ್ಲಿನ ಬಸದಿಗಳು ಕಾಣಬರುತ್ತಿಲ್ಲವಾದರೂ ಸಂಕೀಘಟ್ಟದಲ್ಲಿರುವ ಬಸದಿಯಲಿ ವರ್ಧಮಾನ ಸ್ವಾಮಿಯ ಕಂಚಿನ ಅದರ ಹಿಂದೆ ಕಲ್ಲಿನ ವಿಗ್ರಹಗಳೆರಡಿದ್ದು ಅವುಗಳಿಗೆ ನಿತ್ಯ ಪೂಜೆ ಮಾಡಲಾಗುತ್ತಿದೆ.

ಈ ಬಗ್ಗೆ ತಿಳಿಯುತ್ತಾ ಹೋದರೆ ಒಂದನೇ ಹೊಯ್ಸಳ ನರಸಿಂಹ ಕ್ರಿ.ಶ. 1141ರಿಂದ 1173ರ ಆಳ್ವಿಕೆಯ ವೇಳೆ ಬಸದಿ ನಿರ್ಮಿಸಿರುವುದಾಗಿ ತಿಳಿದು ಬರುತ್ತದೆ. ಪುರಾತನ ವರ್ಧಮಾನ ಸ್ವಾಮಿಯ ಶಿಲೆಯ ಬೆನ್ನಹಿಂದಿನ ಪೀಠದಲ್ಲಿ 12ನೇ ಶತಮಾನದ ಶಿಲಾಶಾಸನವಿದೆ. ಸಂಕೀಘಟ್ಟದ ಕವಿ ಚಿಕ್ಕಪದ್ಮಣ್ಣಶೆಟ್ಟಿ 1581ರಲ್ಲಿ ಅನಂತನಾಥ ಚರಿತೆ ಇದೇ ಬಸದಿಯಲ್ಲಿ ಕುಳಿತು ರಚಿಸಿದ ಬಗ್ಗೆ ಕಣ್ಣುಸ್ವಾಮಿ ಪಂಚಾಂಗದಲ್ಲಿ ದೃಢಪಡಿಸಲಾಗಿದೆ.

ಕವಿಯ ತಂದೆ, ಚಂದ್ರಣ್ಣಶೆಟ್ಟಿ, ತಾಯಿ ಇಚ್ಚಮ್ಮ, ಅಕ್ಕ ಪದ್ಮೆ, ಅಣ್ಣನೊಬ್ಬನಿದ್ದನೆಂದು, ಕಿರಿಯವನೇ ಚಿಕ್ಕಪದ್ಮಣ್ಣಕವಿ. ಈತನಿಗೆ ಬುಸೆಟ್ಟಿ ಎಂಬಾತನು ಕಾವ್ಯರಚನೆಗೆ ಪ್ರೋತ್ಸಾಹ ನೀಡಿದ ಬಗ್ಗೆ ದೇವಳದಲ್ಲಿ ದಾಖಲೆಯಿದೆ. ಅನಂತನಾಥ ಚರಿತೆ ಇಂದಿಗೂ ಲಭ್ಯವಿದೆ. ಆದರೆ ಎರಡನೆಯ ಕಾವ್ಯ ಅಲಭ್ಯವಾಗಿದೆ.

ಬಸದಿಯ ಮುಖಮಂಟಪ ಮತ್ತು ಸುತ್ತಲ ಪ್ರಾಕಾರವನ್ನು ಮಾಗಡಿಯ ಇಮ್ಮಡಿಕೆಂಪೇಗೌಡ ಕಟ್ಟಿಸಿಕೊಟ್ಟಿದ್ದಾನೆ ಎಂಬುದಾಗಿ ತಿಳಿದು ಬರುತ್ತದೆ. ಸಂಕೀಘಟ್ಟದ ಊರ ಮಧ್ಯೆ ಇಂದಿಗೂ ಬಸದಿ ಉತ್ತಮವಾಗಿ ನಿರ್ವಹಣೆಗೊಂಡು ಗಮನ ಸೆಳೆಯುತ್ತಿರುವುದು ವಿಶೇಷವಾಗಿದೆ.

ಇಲ್ಲಿಗೆ ತೆರಳುವವರು ರಾ.ಹೆ.48ರಲ್ಲಿ ತಿಪ್ಪಸಂದ್ರ ಗೇಟಿನಿಂದ ಸುಮಾರು 9 ಕಿ.ಮೀ ದೂರ ಹುಳ್ಳೆನಹಳ್ಳಿ ನಂತರ ಸಂಕೀಘಟ್ಟ ಗ್ರಾಮಕ್ಕೆ ಹೋಗಬಹುದು. ಅಲ್ಲಿಂದ ಅನತಿ ದೂರದಲ್ಲಿ ಮಾಯಸಂದ್ರದ ಜೈನಬಸದಿಗೂ ಭೇಟಿ ನೀಡಬಹುದು. ತಾಲೂಕು ಮಟ್ಟದ ಉತ್ತಮ ಡಾಂಬರು ರಸ್ತೆಯಿದೆ. ತುಮಕೂರಿನಿಂದ ಬರುವವರು ಸುಗ್ಗನಹಳ್ಳಿಯ ನರಸಿಂಹದೇವರ ಗುಡಿಯ ಪಕ್ಕದ ರಸ್ತೆಯಲ್ಲಿ ವಿರುಪಾಪುರ, ಹೊನ್ನಾಪುರ ದಾಟಿದ ನಂತರ ಮಾಯಸಂದ್ರ, ಸಂಕೀಘಟ್ಟವನ್ನು ತಲುಪಬಹುದಾಗಿದೆ.