ದೀನಬಂಧು: ಹೀಗೊಂದು ಮಕ್ಕಳಾಶ್ರಮ

ದೀನಬಂಧು: ಹೀಗೊಂದು ಮಕ್ಕಳಾಶ್ರಮ

R.S.Darshan   ¦    Nov 14, 2020 02:08:02 PM (IST)
ದೀನಬಂಧು: ಹೀಗೊಂದು ಮಕ್ಕಳಾಶ್ರಮ

ಆರ್. ಎಸ್. ದರ್ಶನ್

ಮಕ್ಕಳು ದೇವರ ಸ್ವರೂಪ ಎನ್ನುತ್ತಾರೆ ಅಲ್ಲವೇ? ಆದರೆ ಕೆಲವೊಮ್ಮೆ ದೇವರಿಗೂ ತೊಂದರೆಗಳುಂಟಾಗುತ್ತದೆ! ಹೆತ್ತವರ ಬಡತನವೋ, ಆಕಸ್ಮಿಕ ಸಾವೋ, ಇಂತಹ ತೊಂದರೆಗಳಲ್ಲೊಂದಾಗಿರಬಹುದು. ಈ ರೀತಿಯ ತೊಂದರೆಯಲ್ಲಿರುವ ದೇವರಿಗೆ, ಅಂದರೆ ದೈವರೂಪಿ ಮಕ್ಕಳಿಗೆ ಆಶ್ರಯ ನೀಡುವ ಸನ್ನಿಧಾನವೊಂದು ಚಾಮರಾಜನಗರದಲ್ಲಿದೆ. ದೀನಬಂಧು ಆಶ್ರಮವೆಂಬುದು ಈ ಪುಣ್ಯಸ್ಥಳದ ಹೆಸರು.

ಪ್ರತೀ ಮಗುವಿನ ಪೋಷಣೆ, ಸ್ವಾವಲಂಬಿ ಬದುಕು, ಸಕಾರಾತ್ಮಕ ಬೆಳವಣಿಗೆ ದೀನಬಂಧುವಿನ ಧ್ಯೇಯವಾದರೆ, ಅನಾಥ ಮತ್ತು ಬಡ ಮಕ್ಕಳ ವಿದ್ಯಾಭ್ಯಾಸ, ಭೌದ್ದಿಕ ಹಾಗೂ ಮಾನಸಿಕ ಬೆಳವಣಿಗೆ, ಮೌಲ್ಯಾಧಾರಿತ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ಕಲೆ-ಸಾಹಿತ್ಯ-ಸಂಗೀತದ ಮೂಲಕ ಕೌಶಲ್ಯ ಮತ್ತು ವ್ಯಕ್ತಿತ್ವ ಅಭಿವೃದ್ಧಿ ಇದರ ಮುಖ್ಯೋದ್ದೇಶ. ಕೇವಲ ಆರು ಗಂಡು ಮಕ್ಕಳನ್ನೊಳಗೊಂಡು 1992 ರಲ್ಲಿ ಪ್ರಾರಂಭವಾದ ದೀನಬಂಧು ಆಶ್ರಮ ಇಂದು ಸುಮಾರು 40ಗಂಡು ಮಕ್ಕಳು ಹಾಗೂ 40ಹೆಣ್ಣು ಮಕ್ಕಳಿಗೆ ಆಶ್ರಯ ನೀಡುವ ಹೆಮ್ಮರವಾಗಿದೆ. ಇಲ್ಲಿ ಬದುಕು ರೂಪಿಸಿಕೊಂಡ ಬಹಳಷ್ಟು ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಗೌರವಯುತವಾದ ಜೀವನ ನಡೆಸುತ್ತಿದ್ದಾರೆ.

ಪ್ರೊ. ಜಿ. ಎಸ್. ಜಯದೇವ್ ರವರು ದೀನಬಂಧು ಸಂಸ್ಥೆಯ ಸ್ಥಾಪಕರು ಹಾಗು ಗೌರವಾನ್ವಿತ ಕಾರ್ಯದರ್ಶಿಗಳು. ಇವರು ಕನ್ನಡನಾಡು ಕಂಡ ಶ್ರೇಷ್ಠ ಕವಿಗಳಲೊಬ್ಬರಾದ, ರಾಷ್ಟ್ರಕವಿ ಬಿರುದಾಂಕಿತರೂ ಆದ ಜಿ. ಎಸ್. ಶಿವರುದ್ರಪ್ಪನವರ ಸುಪುತ್ರರು. 1992ರಲ್ಲಿ ಬಾಡಿಗೆ ಮನೆಯೊಂದರಲ್ಲಿ ಆಶ್ರಮ ಪ್ರಾರಂಭವಾಯಿತು. 1994ರಲ್ಲಿ ಸ್ವಿಟ್ಜಲ್ರ್ಯಾಂಡ್ ನ ಮೆಗಾಲೆ ರ್ಯೇನಾವ್ಡ್ ಎಂಬ ಮಹಿಳೆಯ ಭೇಟಿಯ ನಂತರ ಸಂಸ್ಥೆಯ ಚಿತ್ರಣ ಬದಲಾಯಿತು. ಮೆಗಾಲೆ ರವರ ಸಹಾಯದಿಂದ ಆಶ್ರಮದ ಸ್ವಂತ ಕಾಟೇಜ್‍ಗಳ ನಿರ್ಮಾಣ ಸಾಧ್ಯವಾಯಿತು. ಹಾಗೂ 2004ರಿಂದೀಚೆಗೆ ಹೆಣ್ಣು ಮಕ್ಕಳಿಗೂ ಆಶ್ರಮದಲ್ಲಿ ಆಶ್ರಯ ನೀಡಲು ದೀನಬಂಧು ಸಂಸ್ಥೆ ಶುರುಮಾಡಿತು. ದೀನಬಂಧುವಿನ ಈ ಪ್ರಯತ್ನ ಸಫಲವಾಗಿ ಇಂದು ಅದೆಷ್ಟೋ ಶಿಕ್ಷಣ ವಂಚಿತ ಹೆಣ್ಣುಮಕ್ಕಳು ಉತ್ತಮ ಜೀವನ ರೂಪಿಸಿಕೊಳ್ಳುವಂತಾಗಿದೆ.  6ರಿಂದ 8 ವರ್ಷ ವಯಸ್ಸಿನ ಅನಾಥ ಹಾಗೂ ಬಡ ಮಕ್ಕಳನ್ನು ಗುರುತಿಸಿ, ಅವರು ಶಾಲಾ ಶಿಕ್ಷಣ ಮುಗಿಸುವವರೆಗೂ ಆಶ್ರಮದಲ್ಲಿ ಯಾವುದೇ ಹಣ ಸ್ವೀಕರಿಸದೆ ಆಶ್ರಯ, ಆಹಾರ, ಶಿಕ್ಷಣ, ಕೌಶಲ್ಯ ತರಬೇತಿಯ ಜೊತೆಗೆ ಖ್ಯಾತ ಕಲಾವಿದರಿಂದ ಸಂಗೀತ ನಟನೆ ಮುಂತಾದ ಕಲೆಯ ಜ್ಞಾನವನ್ನು ಸಹ ಮಕ್ಕಳಿಗೆ ನೀಡಲಾಗುತ್ತಿದೆ. ಕಲಾ ಶಿಕ್ಷಣಕ್ಕೆ ಸಂಸ್ಥೆ ಎಷ್ಟು ಪ್ರಾಮುಖ್ಯತೆ ನೀಡುತ್ತದೆ ಎನ್ನುವುದಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡ ‘ಶನಿ’ ಧಾರಾವಾಹಿಯಲ್ಲಿ ಶನಿಯ ಪಾತ್ರ ನಿರ್ವಹಿಸಿದ ಹುಡುಗನೇ ಪ್ರತ್ಯಕ್ಷ ಸಾಕ್ಷಿ. ಹೌದು ಆ ಹುಡುಗ ದೀನಬಂಧುವಿನ ಕೊಡುಗೆ. ಶಾಲಾ ಶಿಕ್ಷಣ ಮುಗಿದ ನಂತರವೂ ಆಶ್ರಮದ ಮಕ್ಕಳು ಕಾಲೇಜು ಹಂತದಲ್ಲಿ ಆಯ್ಕೆ ಮಾಡಿಕೊಂಡ ಆಸಕ್ತ ವಿಷಯಗಳ ಶಿಕ್ಷಣದ ಜವಾಬ್ದಾರಿಯನ್ನು ಆಶ್ರಮವೇ ವಹಿಸಿಕೊಂಡು, ಆ ಮಕ್ಕಳು ಬೆಳೆದು ಆರ್ಥಿಕವಾಗಿ ಸಬಲರಾಗುವವರೆಗೂ ಬೆಂಬಲವನ್ನು ಮುಂದುವರೆಸುತ್ತಿದೆ.

ಸಮಯ ಕಳೆದಂತೆ ಸಂಸ್ಥೆ ಬೆಳೆದು ದೀನಬಂಧು ಶಾಲೆಯು ಚಾಮರಾಜನಗರಕ್ಕೆ ಸೇರಿದಂತೆಯೇ ಇರುವ ರಾಮಸಮುದ್ರ ಗ್ರಾಮದಲ್ಲಿ ಪ್ರಾರಂಭವಾಯಿತು. ಸುತ್ತಲಿನ ಹಲವಾರು ಗ್ರಾಮಗಳ ಬಡ ಮಕ್ಕಳಿಗೆ ಈ ಶಾಲೆ ವರದಾನದಂತಿದೆ. ಸುಸಜ್ಜಿತ ಕಟ್ಟಡ, ಆಟದ ಮೈದಾನಗಳನ್ನೊಳಗೊಂಡ ಶಾಲೆಯು ಅತ್ಯಂತ ಸ್ವಚ್ಛ ಹಾಗೂ ಸುಂದರವಾದ ವಾತಾವರಣದಲ್ಲಿ ನಿರ್ಮಾಣವಾಗಿದೆ. ನರ್ಸರಿಯಿಂದ ಹತ್ತನೇ ತರಗತಿವರೆಗಿನ ಶಿಕ್ಷಣವನ್ನು ಅತ್ಯಂತ ಕಡಿಮೆ ಶುಲ್ಕದಲ್ಲಿ ನೀಡಲಾಗುತ್ತಿದೆ. ಇದರ ಜೊತೆಗೆ ಒರ್ಯಾಕಲ್, ಅಡೋಬ್ ನಂತಹ ಕಂಪನಿಗಳ ಸಹಾಯದೊಂದಿಗೆ ಸರ್ಕಾರಿ ಶಾಲಾ ಶಿಕ್ಷಕರ ವೃತ್ತಿಪರ ಅಭಿವೃದ್ದಿಗೆ ಸುಸ್ಥಿರ ಬೆಂಬಲ ನೀಡುವ ಯೋಜನೆಯನ್ನು ಸಂಸ್ಥೆಯು ನಡೆಸಿಕೊಂಡು ಬಂದೆದೆ ಹಾಗೂ ಈ ಯೋಜನೆಯ ಲಾಭವನ್ನು ಸುಮಾರು 200ಕ್ಕೂ ಹೆಚ್ಚು ಶಿಕ್ಷಕರು ಪಡೆದುಕೊಂಡಿದ್ದು ತನ್ಮೂಲಕ 10000 ಮಕ್ಕಳಿಗೆ ಇದರ ಪ್ರಯೊಜನವಾಗಿದೆ.

ಗಡಿಜಿಲ್ಲೆಯಾದ ಚಾಮರಾಜನಗರದ ಅದೆಷ್ಟೊ ಮಕ್ಕಳ ಪಾಲಿಗೆ ದೀನಬಂಧು ಸಂಸ್ಥೆ ದಾರಿದೀಪವಾಗಿದೆ. ಪ್ರೊ. ಜಿ. ಎಸ್. ಜಯದೇವ್ ಅವರು ಸದಾ ಆಶ್ರಮದಲ್ಲೆಯೇ ಇದ್ದುಕೊಂಡು ಮಕ್ಕಳ ಪಾಲನೆ ಪೋಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆಶ್ರಮದ ಮಕ್ಕಳ ಸೌಜನ್ಯ, ಸನ್ನಡತೆ, ಉತ್ಸಾಹ, ಲವಲವಿಕೆ ಆಶ್ರಮದ ಇಷ್ಟು ವರ್ಷಗಳ ಸಾಧನೆಯನ್ನು ಸಾರಿ ಹೇಳುತ್ತಿದೆ.