ಕಡಖ್ ಕೋಳಿ ಈ ಖಡಖ್‍ನಾಥ್

ಕಡಖ್ ಕೋಳಿ ಈ ಖಡಖ್‍ನಾಥ್

.Prema Hirehasade   ¦    Jan 12, 2021 03:23:04 PM (IST)
ಕಡಖ್ ಕೋಳಿ ಈ ಖಡಖ್‍ನಾಥ್

ಕೋಳಿಯು ಒಂದು ಪಳಗಿಸಿದ ಹಕ್ಕಿ. ಕೋಳಿಗಳಲ್ಲಿಯೇ ನಾನಾ ವಿಧವಾದ ತಳಿಗಳನ್ನು ಕಾಣಬಹುದು. ಅವುಗಳಲ್ಲಿ ದೇಸಿ ಕೋಳಿ, ಟರ್ಕಿ, ಫಾರಂ, ಗಿರಿರಾಜ, ಕಾಡುಕೋಳಿ ಮುಂತಾದ ಹತ್ತು ಹಲವು ತರಹದ ತಳಿಗಳನ್ನು ನೀವೆಲ್ಲರೂ ನೋಡಿರಬಹುದು. ಹಾಗೂ ತಿಂದಿರಬಹುದು. ಕೋಳಿಯು ಕೆಂಪು ಕಾಡು ಕೋಳಿಯ ಉಪ ಪ್ರಜಾತಿಯಾಗಿದೆ. ದೇಶೀಯ ಪ್ರಾಣಿಗಳ ಪೈಕಿ ಅತಿ ಸಾಮಾನ್ಯ ಹಾಗೂ ವ್ಯಾಪಕ. 2003 ರಲ್ಲಿ 24 ಬಿಲಿಯನ್‍ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿತ್ತೆಂದು ಅಂದಾಜು ಮಾಡಲಾಗಿದೆ. ಕೋಳಿಯು ಇತರ ಯಾವುದೇ ರೀತಿಯ ಪಕ್ಷಿಜಾತಿಗಳಿಗಿಂತ ಕೋಳಿ ಹೆಚ್ಚಾಗಿ ಕಾಣಬಹುದು. ಮಾನವರು ಕೋಳಿಗಳನ್ನು ಪ್ರಮುಖವಾಗಿ ಒಂದು ಆಹಾರ ಮೂಲವಾಗಿ ಇಟ್ಟುಕೊಳ್ಳುತ್ತಾರೆ. ಈ ಜಾತಿಯ ಪಕ್ಷಿಯ ಮಾಂಸ ಹಾಗೂ ಮೊಟ್ಟೆಯು ಬಳಕೆಯಲ್ಲಿದ್ದು, ಎರಡನ್ನೂ ಸಹ ಸೇವಿಸುತ್ತಾರೆ. ಇದಿಷ್ಟು ನಾವು ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಕಾಣಸಿಗುವ ಸರ್ವೇ ಸಾಮಾನ್ಯ ಕೋಳಿಯಾಗಿದೆ.


ಆದರೆ, ಕಪ್ಪು ಮಾಂಸ ಹಾಗೂ ಕಪ್ಪು ಮೊಟ್ಟೆ, ಕಪ್ಪು ರಕ್ತದ ಕೋಳಿಯ ಬಗ್ಗೆ ನಾವು ಈವರೆಗೂ ಕೇಳಿರದ ಸಂಗತಿ, ಅದೇ ಖಡಕ್‍ನಾಥ್ ತಳಿಯ ಕೋಳಿಗಳು. ಈ ಕೋಳಿಗಳ ಸಾಕಾಣಿಕೆ ಮೂಲತಃ ಮದ್ಯಪ್ರದೇಶದ ಬುಡಕಟ್ಟು ಸಮುದಾಯಗಳಲ್ಲಿ ಪ್ರಚಲಿತದಲ್ಲಿದ್ದು ಪ್ರಸ್ತುತ ತಮಿಳುನಾಡಿನಾದ್ಯಂತ ಈ ತಳಿಯ ಕೋಳಿಗಳ ಸಾಕಾಣಿಕೆ ಹೆಚ್ಚು ವ್ಯಾಪಕವಾಗಿದೆ. ನಮಗೆ ತಿಳಿದಿರುವ ನಾಟಿ ಕೋಳಿ ಮಾಂಸಕ್ಕಿಂತ ಖಡಖ್‍ನಾಥ್ ಕೋಳಿ ಮಾಂಸದಲ್ಲಿ ಹೆಚ್ಚಿನ ಪ್ರೋಟಿನ್ ಹೊಂದಿದ್ದು ನಾಟಿ ಕೋಳಿ ಮಾಂಸಕ್ಕಿಂತಲೂ ಇದು ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಇದರ ಉಪಯೋಗ ಎಷ್ಟಿದೆ ಎಂದರೆ ಇದರ ಮಾಂಸ ತಿನ್ನುವುದಕ್ಕೆ ಮಾತ್ರವಲ್ಲದೆ ಔಷಧಿಗಳಿಗೆ ಬಳಸುತ್ತಾರೆ. ಸಾಧಾರಣ ನಾಟಿ ಕೋಳಿಗಳಿಗೆ ಹೋಲಿಸಿದರೆ ಈ ಕೋಳಿಯಲ್ಲಿ ವಿಟಮಿನ್ ಡಿ1, ವಿಟಮಿನ್ 2,6,12 ಹಾಗೂ ಸಿ ಜೀವಸತ್ವ, ಕ್ಯಾಲ್ಸಿಯಂ ಅಂಶಗಳು ಹೆಚ್ಚಾಗಿದ್ದು, ನ್ಯುಮೋನಿಯಾ, ರಕ್ತಹೀನತೆ ಇನ್ನಿತರ ಸಮಸ್ಯೆಗಳಾದ ಕ್ಷಯ, ಬಿ.ಪಿ, ಅಸ್ತಮಾದಂತಹ ಕಾಯಿಲೆಗಳಿಗೆ ಸಿದ್ಧೌಷದವಾಗಿದೆ. ರಕ್ತಸ್ರಾವ, ಗಭರ್óಪಾತ ಪ್ರಸವದ ನಂತರದಲ್ಲಿ ಹಾಗೂ ನರಗಳ ದೌರ್ಬಲ್ಯವನ್ನು ತಡೆಗಟ್ಟುವಲ್ಲಿ ಒಂದು ಪರಿಣಾಮಕಾರಿ ಔಷಧವಾಗಿಯೂ ಬಳಕೆಯಲ್ಲಿದೆ. ಇದರಲ್ಲಿ ಕೊಬ್ಬಿನ ಪದಾರ್ಥವು ಕಡಿಮೆ ಇದ್ದು ಮಾರುಕಟ್ಟೆಯಲ್ಲಿ ಇದರ ಬೇಡಿಕೆ ದಿನದಿಂದ ದಿನಕ್ಕೆ ಏರು ಗತಿಯಲ್ಲಿ ಸಾಗಿದೆ. ಸಧ್ಯ ಪ್ರತಿ ಒಂದು ಕೆ.ಜಿ ಖಡಖ್ನಾಥ್ ಕೋಳಿ ಮಾಂಸದ ಬೆಲೆ ರೂ.1000 ಇದೆ. ಇದರ ಮೊಟ್ಟೆಯ ಬೆಲೆ ರೂ.45. ಒಂದು ಜೊತೆ ಕೋಳಿಗಳು ವರ್ಷಕ್ಕೆ 80 ರಿಂದ 100 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಹಾಗಾಗಿ ಆರ್ಥಿಕವಾಗಿ ದುಃಸ್ಥಿತಿಯಲ್ಲಿರುವ ಗ್ರಾಮೀಣ ಜನರಿಗೊಂದು ಪರ್ಯಾಯ ಆದಾಯ ಮೂಲವೂ ಆಗುವ ಸಾಧ್ಯತೆ ನಿಚ್ಚಳವಾಗಿದೆ.