ದೀಪಾವಳಿ ಬೆಳಕು ತರಲಿ... ಪಟಾಕಿ ಹಚ್ಚಿ ಕತ್ತಲು ಮಾಡಿಕೊಳ್ಳದಿರಿ..

ದೀಪಾವಳಿ ಬೆಳಕು ತರಲಿ... ಪಟಾಕಿ ಹಚ್ಚಿ ಕತ್ತಲು ಮಾಡಿಕೊಳ್ಳದಿರಿ..

LK   ¦    Oct 28, 2019 09:38:31 AM (IST)
ದೀಪಾವಳಿ ಬೆಳಕು ತರಲಿ... ಪಟಾಕಿ ಹಚ್ಚಿ ಕತ್ತಲು ಮಾಡಿಕೊಳ್ಳದಿರಿ..

ದೀಪಾವಳಿಯನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ಎಂದು ಹೇಳಲಾಗುತ್ತದೆ. ಇದು ಅಕ್ಷರಶಃ ನಿಜ. ಹಬ್ಬದ ಆಚರಣೆ ಓಕೆ ಆದರೆ ಪಟಾಕಿ ಬೇಕೆ? ಎಂಬ ಪ್ರಶ್ನೆಯೂ ಸದ್ದಿಲ್ಲದೆ ಏಳುತ್ತದೆ. ಹಬ್ಬಕ್ಕೆ ಪಟಾಕಿ ಬೇಡವೇ ಬೇಡ ಎನ್ನಲಾಗುವುದಿಲ್ಲ. ಆದರೆ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಎಚ್ಚರವಾಗಿರುವುದು ಒಳಿತು ಇಲ್ಲಾಂದ್ರೆ ನಾವು ಮಾಡಿಕೊಳ್ಳುವ ಎಡವಟ್ಟುಗಳಿಂದ ಬಾಳೇ ಕತ್ತಲೆಯಾಗುವ ಸಾಧ್ಯತೆ ಇಲ್ಲದಿಲ್ಲ.

 ದೀಪಾವಳಿ ಹಬ್ಬವನ್ನು ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಹಬ್ಬದಲ್ಲಿ ಹಲವು ಬಗೆಯ ಸಂಪ್ರದಾಯಗಳಿದ್ದು, ಅದರಂತೆ ಆಚರಣೆ ನಡೆಯುತ್ತಾ ಬರುತ್ತಿದೆ. ಈ ಆಚರಣೆಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ವಲ್ಪ ಮಟ್ಟಿಗೆ ವಿಭಿನ್ನತೆ ಕಂಡು ಬಂದರೂ ಹಬ್ಬದಲ್ಲಿ ಪಟಾಕಿ ಸಿಡಿಸುವುದಂತು ಎಲ್ಲೆಡೆಯೂ ಇದ್ದೇ ಇದೆ. ಹಿಂದಿನ ಕಾಲದಲ್ಲಿ ಈಗಿನಷ್ಟು ಮುಂದುವರೆದಿರಲಿಲ್ಲ. ಜೊತೆಗೆ ಆರ್ಥಿಕವಾಗಿಯೂ ಹೆಚ್ಚಿನವರು ಸ್ಥಿತಿವಂತರಾಗಿರಲಿಲ್ಲ. ಹಾಗಾಗಿ ತಮ್ಮ ಇತಿಮಿತಿಯಲ್ಲಿ ಹಬ್ಬವನ್ನು ಆಚರಿಸಿ ಸಂತೋಷಪಡುತ್ತಿದ್ದರು. ಅವತ್ತು ಹಬ್ಬದ ಆಚರಣೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದರಲ್ಲದೆ, ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುತ್ತಿದ್ದರು. ಪಟಾಕಿಯನ್ನು ಸಿಡಿಸುತ್ತಿದ್ದರಾದರೂ ಈಗಿನಷ್ಟು ಪ್ರಾಮುಖ್ಯತೆ ನೀಡುತ್ತಿರಲಿಲ್ಲ.

 ಅವತ್ತು ಹಬ್ಬದ ದಿನ ಹತ್ತಿರ ಬರುತ್ತಿದೆ ಎಂದರೆ ಸಾಕು ಮನೆ ಮಂದಿಗೆ ಎಲ್ಲಿಲ್ಲದ ಕಾತರ. ಹಬ್ಬಕ್ಕಾಗಿ ಎಲ್ಲಿಲ್ಲದ ಸಿದ್ಧತೆಗಳು ನಡೆಯುತ್ತಿದ್ದವು. ಮನೆಯಲ್ಲಿ ಮಹಿಳೆಯರು ಏನೇನು ಬೇಕೋ ಅದನ್ನೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದರು. ಕೆಲವರು ಮನೆಗೆ ಸುಣ್ಣ, ಬಣ್ಣ ಬಳಿದು ಹಬ್ಬಕ್ಕೆ ಸಿಂಗರಿಸುತ್ತಿದ್ದರು. ಮನೆಯ ಮುಂದಿನ ವಿಶಾಲ ಅಂಗಳವನ್ನು ಸಗಣಿಯಿಂದ ಸಾರಿಸಿ ರಂಗೋಲಿ ಹಾಕಿ ಮನೆಯ ಸುತ್ತಲೂ ದೀಪಗಳಿಂದ ಅಲಂಕರಿಸಿ ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.

 ಇನ್ನು ಮನೆಗಳಲ್ಲಿ ಮಕ್ಕಳಿಗೆ ಹಬ್ಬದಲ್ಲಿ ಮಾಡುವ ಹಬ್ಬದೂಟಕ್ಕಿಂತ ಪಟಾಕಿಯ ಮೇಲೆಯೇ ಆಶೆ. ವಿವಿಧ ನಮೂನೆಯ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವ ತವಕ. ದಿನನಿತ್ಯವೂ ಪಟಾಕಿಯದ್ದೇ ಧ್ಯಾನ. ಅವತ್ತಿನ ದಿನಗಳಲ್ಲಿ ಆರ್ಥಿಕವಾಗಿ ಹೆಚ್ಚಿನವರು ಸ್ಥಿತಿವಂತರಾಗಿಲ್ಲದ ಕಾರಣ ಪಟಾಕಿಗೆ ಹೆಚ್ಚಿನ ಹಣ ಸುರಿಯುತ್ತಿರಲಿಲ್ಲ. ಅಷ್ಟೋ ಇಷ್ಟೋ ಹಣ ನೀಡಿ ಪಟಾಕಿ ಖರೀದಿಸಿ ಮಕ್ಕಳಿಗೆ ನೀಡುತ್ತಿದ್ದರು. ಮಕ್ಕಳು ಅದರಲ್ಲೇ ತೃಪ್ತಿಪಟ್ಟುಕೊಳ್ಳುತ್ತಿದ್ದರು.

 ಬದಲಾದ ಕಾಲಘಟ್ಟದಲ್ಲಿ ಹಬ್ಬದ ಆಚರಣೆಗಿಂತ ಪಟಾಕಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಸೂಕ್ಷ್ಮವಾಗಿ ಗಮನಿಸಿದಾಗ ಅರಿವಿಗೆ ಬರುತ್ತದೆ. ಇವತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಿರುವುದರಿಂದ  ಹಬ್ಬದ ಸಂಭ್ರಮವನ್ನು ಕೆಲವರು ಪಟಾಕಿ ಸಿಡಿಸುವುದರ ಮೂಲಕ ಹೊರಗೆಡವುತ್ತಾರೆ. ಪಟಾಕಿ ಖರೀದಿಸಿ ಮನೆಗೆ ತರುವಲ್ಲಿಯೂ ಪೈಪೋಟಿ ಕೆಲವೆಡೆ ಕಂಡು ಬರುತ್ತದೆ.

 ಪಟಾಕಿ ಸಿಡಿಸದೆ ಹಬ್ಬ ಆಚರಿಸಿ ಎನ್ನುವುದು ಕೂಡ ಸಾಧ್ಯವಾಗದ ಮಾತು. ಹಬ್ಬ ಎಂದ ಮೇಲೆ ಪಟಾಕಿ ಸದ್ದು ಕೇಳಲೇ ಬೇಕು. ಹಾಗಿದ್ದರೆ ಮಾತ್ರ ಹಬ್ಬಕ್ಕೊಂದು ಕಳೆ. ಆದರೆ ಹಬ್ಬದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಯನ್ನು ಬೆಂಕಿಯಲ್ಲಿ ಸುಡುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಕೂಡ ನಮ್ಮನ್ನು ಕಾಡದಿರದು. ಪಟಾಕಿ ಸಿಡಿಸುವುದರಿಂದ ಮೊದಲಿಗೆ ಹಣವನ್ನು ಬೆಂಕಿಯಲ್ಲಿ ಸುಟ್ಟಂತಾಗುತ್ತದೆ. ಎರಡನೆಯದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದು ಎರಡು ಕೂಡ ಇಡೀ ಸಮಾಜದ ಮೇಲೆ ಬೀರುವ ದುಷ್ಪರಿಣಾಮ. ಇನ್ನು ಪಟಾಕಿ ಸಿಡಿಸುವಾಗ ಜಾಗ್ರತೆ ವಹಿಸದೆ ಆಗುವ ಅನಾಹುತ ವ್ಯಕ್ತಿ ಹಾಗೂ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. 

ಪಟಾಕಿ ಸಿಡಿಸುವುದರಿಂದ ಆಗುವ ಅನಾನುಕೂಲ ಮತ್ತು ದುರಂತದ ಬಗ್ಗೆ ಈ ಹಿಂದಿನಿಂದಲೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೆಲವರು ಮಾಡುತ್ತಲೇ ಬಂದಿದ್ದಾರೆ.  ಆದರೂ ಅದರಿಂದ ಹೆಚ್ಚಿನ ಪ್ರಯೋಜನವಾದಂತೆ ಕಂಡು ಬರುತ್ತಿಲ್ಲ. ಏಕೆಂದರೆ  ಈಗಾಗಲೇ ಪಟಾಕಿ ಎಂಬ ಸಿಡಿಮದ್ದಿನ ಮಾಯಾಂಗನೆ ಅಬಾಲವೃದ್ದರಾಗಿ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದೆ. ಹಾಗಾಗಿ ಪಟಾಕಿ ಸಿಡಿಸುವುದರಲ್ಲೇ ಅದೇನೋ ಮಜಾ ಕಾಣುತ್ತಾರೆ. 

ಹಬ್ಬದ ಸಂದರ್ಭ ಪಟಾಕಿ ಸಿಡಿಸಲೇ ಬೇಡಿ... ಬರೀ ದೀಪ ಹಚ್ಚಿ.... ಭಕ್ಷ್ಯ ಭೋಜನ ಸವಿದು ಹಬ್ಬ ಆಚರಿಸಿ... ಹಾಗೆಂದು ಹೇಳೋಕೆ ಯಾರಿಂದ ಸಾಧ್ಯ? ಇಷ್ಟಕ್ಕೂ ಅದನ್ನು ಕೇಳಿ ಪಾಲಿಸೋರು ಅದೆಷ್ಟು ಮಂದಿ ಇದ್ದಾರೆ? ಪಟಾಕಿ ಹಚ್ಚಲೇ ಬೇಡಿ ಅನ್ನೋದಕ್ಕಿಂತ ಪಟಾಕಿ ಹಚ್ಚುವಾಗ ಒಂದಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಿ ಎಂಬ ಸಲಹೆ ನೀಡಿದರೆ ಒಂದಷ್ಟು ಮಂದಿ ಅದನ್ನು ಪಾಲಿಸಿ ತಾವೇ ತಮ್ಮ ಕೈಯ್ಯಾರೆ ತಂದುಕೊಳ್ಳುವ ದುರಂತಕ್ಕೆ ಕಡಿವಾಣ ಹಾಕಲು ಸಾಧ್ಯವಾಗಬಹುದು. 

ಹಬ್ಬ ವರ್ಷಕ್ಕೊಮ್ಮೆ ಬರೋದು... ಜೊತೆಗೆ ಕತ್ತಲಿನಿಂದ ಬೆಳಕಿಗೆ ನಮ್ಮನ್ನು ಕೊಂಡೊಯ್ಯುವ ಹಬ್ಬ ಎಂದು ಕೂಡ ಹೇಳಲಾಗುತ್ತದೆ. ಹೀಗಿರುವಾಗ  ಹಬ್ಬದ ಸಂಭ್ರಮದಲ್ಲಿ  ಪಟಾಕಿ ಸಿಡಿಸೋ ಭರದಲ್ಲಿ ಎಚ್ಚರ ತಪ್ಪಿ ತಮ್ಮ ಬದುಕನ್ನು ಕತ್ತಲೆಗೆ ತಳ್ಳಿಕೊಳ್ಳಬಾರದಲ್ವ ಹಾಗಾಗಿ ಪಟಾಕಿ ಸಿಡಿಸುವ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ಜೊತೆಗಿರಲಿ.