ಅರಣ್ಯ ಕಾಪಾಡುವ ಕಾರ್ಯಕ್ಕೆ ಮುಂದಾಗೋಣ....

ಅರಣ್ಯ ಕಾಪಾಡುವ ಕಾರ್ಯಕ್ಕೆ ಮುಂದಾಗೋಣ....

LK   ¦    Mar 21, 2020 03:54:30 PM (IST)
ಅರಣ್ಯ ಕಾಪಾಡುವ ಕಾರ್ಯಕ್ಕೆ ಮುಂದಾಗೋಣ....

ಬೇಸಿಗೆ ಬಂತೆಂದರೆ ಬೆಚ್ಚಿ ಬೀಳುವ ಸರದಿ ನಮ್ಮದಾಗಿದೆ. ಕಾರಣ ಬಿಸಿಲಿಗೆ ಒಣಗಿ ನಿಂತ ಅರಣ್ಯ ಯಾವಾಗ ಬೇಕಾದರೂ ಹೊತ್ತಿ ಉರಿಯಬಹುದು. ಪ್ರತಿವರ್ಷವೂ ಬೇಸಿಗೆಯಲ್ಲಿ ಅಲ್ಲಲ್ಲಿ ಹಲವು ಕಾರಣಗಳಿಗೆ ಬೆಂಕಿ ಹೊತ್ತಿ ಉರಿದು ಅರಣ್ಯ ನಾಶವಾಗುತ್ತದೆ.

ವಿಶ್ವ ಅರಣ್ಯದಿನವನ್ನು ಆಚರಿಸುತ್ತಿರುವ ಈ ದಿನದಲ್ಲಿ ಅರಣ್ಯವನ್ನು ರಕ್ಷಿಸುವ ಕಾರ್ಯ ಬರೀ ಅರಣ್ಯ ಇಲಾಖೆ ಮಾತ್ರವಲ್ಲ. ಪ್ರತಿಯೊಬ್ಬ ಜವಬ್ದಾರಿಯುತ ವ್ಯಕ್ತಿಯ ಕಾರ್ಯವಾಗಿದೆ. ಅರಣ್ಯಗಳು ಇವತ್ತು ಹಲವು ಕಾರಣಗಳಿಗೆ ನಾಶವಾಗುತ್ತಿವೆ. ಭೌಗೋಳಿಕವಾಗಿ ನೋಡುವುದಾದರೆ ದಿನದಿಂದ ದಿನಕ್ಕೆ ನಾವು ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಅದನ್ನು ಅಭಿವೃದ್ಧಿ ಎಂದು ಕೂಡ ಕರೆಯುತ್ತಿದ್ದೇವೆ. ನಮಗೆ ಮೂಲಭೂತ ಸೌಲಭ್ಯಗಳು ಬೇಕು. ಆ ಸೌಲಭ್ಯ ಕಲ್ಪಿಸಬೇಕೆಂದರೆ ಅಲ್ಲಿ ಒಂದಷ್ಟು ಬದಲಾವಣೆ ಆಗಲೇ ಬೇಕು. ಹೀಗೆ ಬದಲಾವಣೆ ಮಾಡುವಾಗಲೆಲ್ಲ ಮೊದಲಿಗೆ ಬಲಿಯಾಗುವುದೇ ಅರಣ್ಯ.

ಉದಾಹರಣೆಗೆ ಒಂದು ಉತ್ತಮ ರಸ್ತೆ ಬೇಕೆಂದರೆ ಬೆಟ್ಟಗುಡ್ಡ ಅಗೆಯಬೇಕು, ಮರಗಳನ್ನು ಕಡಿಯಬೇಕು. ಅದಷ್ಟನ್ನು ಮಾಡಿಲ್ಲ ಅಂದರೆ ರಸ್ತೆ ನಿರ್ಮಾಣ ಆಗಲ್ಲ. ಪ್ರತಿಯೊಂದು ವಿಚಾರದಲ್ಲೂ ಲಾಭ ನಷ್ಟದ ಲೆಕ್ಕಚಾರ ಮಾಡುತ್ತೇವೆ. ಅಪ್ಪ ನೆಟ್ಟು ಬೆಳೆಸಿದ ಹಲಸಿನ ಮರದ ಹಣ್ಣನ್ನು ತಿಂದು ಬೆಳೆಯುವ ಮಗನಿಗೆ ಅದು ಕೊಡುವ ಹಣ್ಣಿಗಿಂತ ಅದನ್ನು ಕಡಿದು ಮಾರಿದರೆ ಸಿಗುವ ಹಣವೇ ಮುಖ್ಯವಾಗುತ್ತದೆ. ಇಲ್ಲಿ ಮರದ ಹಣ್ಣಿಗಿಂತ ಅದು ತಂದುಕೊಡುವ ಹಣವೇ ಕೆಲಸ ಮಾಡುತ್ತದೆ.

ಹಲವು ಕಡೆಗಳಲ್ಲಿ ಅದರಲ್ಲೂ ಮಲೆನಾಡುಗಳಲ್ಲಿ ಕಾಡುಗಳು ನಾಶವಾಗಿ ತೋಟಗಳಾಗಿವೆ. ಗದ್ದೆಗಳು ನಿವೇಶನಗಳಾಗಿ ಕಾಂಕ್ರಿಟ್ ಕಾಡಾಗಿ ಮಾರ್ಪಟ್ಟಿದೆ. ಹೈಟನ್ಷನ್ ವಿದ್ಯುತ್ ಮಾರ್ಗಗಳು, ರೈಲು ಮಾರ್ಗಗಳು ಮರಕಾಡುಗಳನ್ನು ನುಂಗಿ ಹಾಕಿದೆ.

ನಾವೆಷ್ಟು ಲೆಕ್ಕಚಾರಿಗಳಾಗಿ ಸ್ವಾರ್ಥಿಗಳಾಗುತ್ತಿದ್ದೇವೆ ಎಂದರೆ ಮಾವು, ಹಲಸು, ನೇರಳೆ ಸೇರಿದಂತೆ ಹಲವು ರೀತಿಯ ಪರಿಸರ ಸ್ನೇಹಿ ಗಿಡನೆಟ್ಟು ಅದರಿಂದ ಒಂದಷ್ಟು ಜೀವಿಗಳಿಗೆ ಬದುಕಲು ಅವಕಾಶ ಮಾಡಿಕೊಡುವ ಮನೋಭಾವವಿಲ್ಲ. ಇವತ್ತು ಗಿಡನೆಟ್ಟರೆ ಇನ್ನೊಂದು ಹತ್ತು ವರ್ಷ ಬಿಟ್ಟು ಕಡಿದರೆ ಅದರಿಂದ ಎಷ್ಟು ಆದಾಯ ಬರಬಹುದು ಎಂದು ಆಲೋಚಿಸುತ್ತಿದ್ದೇವೆ. ಜತೆಗೆ ಆದಾಯ ತಂದು ಕೊಡುವ ನೀಲಗಿರಿ, ಸಿಲ್ವರ್‍ಓಕ್, ತೇಗದ ಮರಗಳನ್ನು ನೆಡುತ್ತೇವೆ. ಅವುಗಳಿಂದ ಹಸಿರುವ ಪ್ರಪಂಚವನ್ನು ಸೃಷ್ಠಿ ಮಾಡುತ್ತಿದ್ದೇವೆ. ಮುಂದೆ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಪರಿಸರ ಸ್ನೇಹಿ ಅರಣ್ಯವನ್ನು ಪಡೆಯಲು ಸಾಧ್ಯನಾ ಎಂದು ನಾವ್ಯಾರು ಯೋಚಿಸುತ್ತಲೇ ಇಲ್ಲ.

ಪ್ರತಿವರ್ಷ ವನಮಹೋತ್ಸವ, ಪರಿಸರ ದಿನಾಚರಣೆಯನ್ನು ಗಿಡನೆಡುವುದರ ಮೂಲಕ ಆಚರಿಸುತ್ತಿದ್ದೇವೆ. ಸಾವಿರಾರು ಗಿಡಗಳನ್ನು ನೆಡುತ್ತಲೇ ಇದ್ದೇವೆ.  ಅದು ಕೆಲವರಿಗೆ ಪ್ರಚಾರ ಪಡೆಯುವುದಕ್ಕಷ್ಟೆ ಸೀಮಿತವಾಗಿ ಹೋಗಿದೆ. ದುರಂತ ಏನೆಂದರೆ ಕಳೆದ ವರ್ಷ ನೆಟ್ಟ ಸ್ಥಳದಲ್ಲೇ ಈ ವರ್ಷವೂ ಗಿಡ ನೆಡುತ್ತೇವೆ. ಆದರೆ ನಾವ್ಯಾರೂ ಕಳೆದ ವರ್ಷ ನೆಟ್ಟ ಗಿಡ ಏನಾಯಿತು ಎಂದು ಯೋಚಿಸುವುದೇ ಇಲ್ಲ.

ಇವತ್ತಿನ ಪರಿಸ್ಥಿತಿಯಲ್ಲಿ ಗಿಡವನ್ನು ನೆಡುವವರಿಗಿಂತ ನೆಟ್ಟ ಗಿಡವನ್ನು ಸಂರಕ್ಷಿಸುವವರು ಬೇಕಾಗಿದ್ದಾರೆ. ಗಿಡವನ್ನು ಯಾರು ಬೇಕಾದರೂ ನೆಡಬಹುದು ಆದರೆ ಅವುಗಳನ್ನು ಪೋಷಿಸಿ ಬೆಳೆಸುವುದು ಎಲ್ಲರಿಂದ ಸಾಧ್ಯವಿಲ್ಲ. ಅದು  ಸಾಲುಮರದ ತಿಮ್ಮಕ್ಕನಂತಹ ಕೆಲವೇ ಕೆಲವರಿಂದ ಸಾಧ್ಯ. ಇನ್ನು ಮುಂದೆಯಾದರೂ ಬರೀ ಗಿಡನೆಡದೆ ಅದನ್ನು ಪೋಷಿಸಿ ಬೆಳೆಸುವ ಕಾರ್ಯ ಮಾಡೋಣ.. ಸದ್ಯದ ಪರಿಸ್ಥಿತಿಯಲ್ಲಿ ನಾವು ಮಾಡಬೇಕಾಗಿರುವುದು ಗಿಡಮರಗಳನ್ನು ಕಾಪಾಡುವ ಕೆಲಸ.. ಗಿಡ ನೆಟ್ಟು ಕೈತೊಳೆದುಕೊಳ್ಳದೆ ಪೋಷಿಸಿ ಬೆಳೆಸಬೇಕು ಬೆಳೆಸಿದ ಗಿಡಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದಾಗ ಮಾತ್ರ ಅರಣ್ಯ ಉಳಿಯಲು ಸಾಧ್ಯ. ಅರಣ್ಯದಿನಕ್ಕೊಂದು ಗೌರವ ನೀಡಿದಂತೆ...