“ಸದ್ದು (ಶಬ್ದ) ನಿಮ್ಮ ಶ್ರವಣ ಸಾಮರ್ಥ್ಯವನ್ನು ಕಡಿಮೆ ಮಾಡುವ ಮೊದಲು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಿ”

“ಸದ್ದು (ಶಬ್ದ) ನಿಮ್ಮ ಶ್ರವಣ ಸಾಮರ್ಥ್ಯವನ್ನು ಕಡಿಮೆ ಮಾಡುವ ಮೊದಲು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಿ”

Jovita Priya Tavro   ¦    Mar 03, 2021 06:07:10 PM (IST)
“ಸದ್ದು (ಶಬ್ದ) ನಿಮ್ಮ ಶ್ರವಣ ಸಾಮರ್ಥ್ಯವನ್ನು ಕಡಿಮೆ ಮಾಡುವ ಮೊದಲು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಿ”

ಸದ್ದು ಮತ್ತು ಸದ್ದು ಪ್ರೇರಿತ ಶ್ರವಣ ದೋಷ ಎಂದರೇನು?

ಸದ್ದು ಅನಗತ್ಯ ಶಬ್ದವಾಗಿದ್ದು ಅದು ಅಹಿತಕರವಾಗಿರುತ್ತದೆ ಮತ್ತು ಕೇಳುಗರಿಗೆ ಅದರಿ೦ದ ತೊಂದರೆಯಾಗುತ್ತದೆ. ಪ್ರತಿದಿನ, ನಮ್ಮ ಪರಿಸರದಲ್ಲಿ ನಾವು  ದೂರದರ್ಶನ, ರೇಡಿಯೋ, ಗೃಹೋಪಯೋಗಿ ವಸ್ತುಗಳಿ೦ದ ಬರುವ ಶಬ್ಧ ಮತ್ತು ಟ್ರಾಫಿಕ್ ಶಬ್ದಗಳಂತೆ ಹಲವಾರು ಶಬ್ದಗಳನ್ನು ಕೇಳುತ್ತೇವೆ. ಸಾಮಾನ್ಯವಾಗಿ, ಈ ಶಬ್ದಗಳು ಸುರಕ್ಷಿತ ಮಟ್ಟದಲ್ಲಿರುತ್ತವೆ ಮತ್ತು ಅವುಗಳು ನಮ್ಮ ಶ್ರವಣಕ್ಕೆ ಹಾನಿ ಮಾಡುವುದಿಲ್ಲ. ಆದರೆ, ಜೋರಾಗಿರುವ ಶಬ್ದಗಳು ಅಲ್ಪಾವಧಿಗೆ  ಅಥವಾ ಹೆಚ್ಚು ಸಮಯದವರೆಗೆ ನಾವು ಕೇಳಿಸಿಕೊ೦ಡರೆ, ಅವುಗಳು ನಮ್ಮ ಕಿವಿಗೆ ಹಾನಿಯನ್ನುಂಟುಮಾಡಬಹುದು. ಈ ಶಬ್ದಗಳು ಕಿವಿಯ ಒಳಭಾಗದಲ್ಲಿರುವ ಸೂಕ್ಷ್ಮ ಭಾಗಗಳನ್ನು ಹಾನಿಗೊಳಿಸುತ್ತವೆ ಮತ್ತು ಶ್ರವಣ ದೋಷವನ್ನು ಉಂಟುಮಾಡುತ್ತದೆ. ಈ ಶ್ರವಣ ದೋಷವನ್ನು  ಸದ್ದು ಪ್ರೇರಿತ ಶ್ರವಣ ದೋಷ ಎಂದು ಕರೆಯಲಾಗುತ್ತದೆ. ಜೋರಾದ ಸದ್ದು ಕೇಳುವುದರಿಂದ ಎರಡು ರೀತಿಯ ಆರೋಗ್ಯ ಸಮಸ್ಯೆಗಳು ಸಂಭವಿಸಬಹುದು. ಈ ಸಮಸ್ಯೆಗಳನ್ನು ಶ್ರವಣೇಂದ್ರಿಯ (ಅಡಿಟರಿ) ಮತ್ತು ಶ್ರವಣೇಂದ್ರಿಯವಲ್ಲದ (ನೊನ್ಅಡಿಟರಿ)  ಸಮಸ್ಯೆಗಳೆಂದು ವಿಂಗಡಿಸಬಹುದು. ಶ್ರವಣೇಂದ್ರಿಯವಲ್ಲದ ಸಮಸ್ಯೆಗಳಲ್ಲಿ ನಿದ್ರಾಹೀನತೆ, ಒತ್ತಡ, ಹೃದಯ ಸಂಬಂಧಿತ ಕಾಯಿಲೆ, ಅಧಿಕ ರಕ್ತದೊತ್ತಡ, ಕಿರಿಕಿರಿಯಿಂದ ಉಂಟಾಗುವಂತಹ ಮಾನಸಿಕ ಸಮಸ್ಯೆಗಳು, ತಲೆನೋವು ಮತ್ತು ಆತಂಕ ಸೇರಿವೆ. ಜೋರಾದ ಸದ್ದಿನಿಂದ ಉಂಟಾಗುವ ಶ್ರವಣ ದೋಷವು ಶ್ರವಣೇಂದ್ರಿಯ ಸಮಸ್ಯೆಯಾಗಿದೆ.

ಸದ್ದು ತಾತ್ಕಾಲಿಕ ಅಥವಾ ಶಾಶ್ವತ ಶ್ರವಣ ದೋಷಕ್ಕೆ ಕಾರಣವಾಗಬಹುದು. ಅತೀಯಾದ ಸದ್ದನ್ನು ಕೇಳಿದ ತಕ್ಷಣ ಸ್ವಲ್ಪ ಪ್ರಮಾಣದ ಶ್ರವಣ ದೋಷ ಉಂಟಾಗುತ್ತದೆ. ಮುಂದೆ ಇಂತಹದೇ ಅತೀಯಾದ ಸದ್ದನ್ನು ನಾವು ಕೇಳದಿದ್ದರೆ, ಶ್ರವಣ ಸಾಮರ್ಥ್ಯದಲ್ಲಿ ಕ್ರಮೇಣ ಚೇತರಿಕೆ ಕಂಡುಬರುತ್ತದೆ.  ಇದನ್ನು ತಾತ್ಕಾಲಿಕ ಶ್ರವಣ ದೋಷ (ಟೆಂಪೊರರಿ ಥ್ರೆಶೋಲ್ಡ್ ಶಿಫ್ಟ್) ಎಂದು ಕರೆಯುತ್ತಾರೆ. ಆದರೆ ದೀರ್ಘಾವಧಿಗೆ ಆಗಾಗ್ಗೆ ನಾವು ಅದೇ ಅತೀಯಾದ ಸದ್ದನ್ನು ಕೇಳುವುದರಿಂದ ಶಾಶ್ವತ ಶ್ರವಣ ದೋಷ  (ಪರ್ಮಿನೆಂಟ್ ಥ್ರೆಶೋಲ್ಡ್ ಶಿಫ್ಟ್) ಉಂಟಾಗುತ್ತದೆ. ಈ ಶಾಶ್ವತ ಶ್ರವಣ ದೋಷವು ಶಬ್ದ ಮಟ್ಟ, ಒಡ್ಡುವಿಕೆಯ ಮಾದರಿ ಮತ್ತು ಚೇತರಿಕೆಯ ಸಮಯವನ್ನು ಅವಲಂಬಿಸಿರುತ್ತದೆ.

 

ಶಬ್ದ ಮಾಲಿನ್ಯದ ಕೆಲವು ಮೂಲಗಳು!

ಕೈಗಾರಿಕಾ ಮತ್ತು ಕೈಗಾರಿಕೇತರ ಮೂಲಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಕಾರ್ಖಾನೆಗಳಲ್ಲಿ ಉಪಯೋಗಿಸುವ ಯಂತ್ರಗಳ ಅತೀಯಾದ ವೇಗ ಮತ್ತು ಕರ್ಕಶ ಶಬ್ಧ ಕೈಗಾರಿಕಾ ಶಬ್ದ ಮಾಲಿನ್ಯಕ್ಕೆ ಕಾರಣವಾಗಿದೆ. ರಸ್ತೆ ಸಂಚಾರ, ವಿಮಾನ, ರೈಲುಮಾರ್ಗಗಳು, ನಿರ್ಮಾಣ, ಮನರಂಜನಾ ಚಟುವಟಿಕೆಗಳು, ಸಾಮಾಜಿಕ ಕೂಟಗಳು ಮತ್ತು ಗೃಹೋಪಯೋಗಿ ಉಪಕರಣಗಳಾದ ವ್ಯಾಕ್ಯೂಮ್ ಕ್ಲೀನರ್‌ಗಳು ಮತ್ತು ಕೆಲವು ಅಡುಗೆ ಸಲಕರಣೆಗಳಿಂದ ಉಂಟಾಗುವ ಶಬ್ದವು ಕೈಗಾರಿಕೇತರ ಶಬ್ದ ಮಾಲಿನ್ಯದ ಮೂಲವಾಗಿದೆ.

ಸದ್ದು ಯಾರೆಲ್ಲರ ಮೇಲೆ ಪರಿಣಾಮ ಬೀರುತ್ತದೆ?

ಯಾವುದೇ ವಯಸ್ಸಿನ ಜನರು ಹಾನಿಕಾರಕ ಸದ್ದಿಗೆ ಒಳಗಾಗಬಹುದು. ಮಕ್ಕಳು, ಹದಿಹರೆಯದವರು, ಯುವ ವಯಸ್ಕರು ಮತ್ತು ವಯಸ್ಸಾದವರು ಸೇರಿದಂತೆ ಎಲ್ಲಾ ವಯಸ್ಸಿನ ಜನರಲ್ಲಿ  ಸದ್ದು ಪ್ರೇರಿತ ಶ್ರವಣ ದೋಷ ಕಾಣಬಹುದು. ಸಂಶೋಧನೆಗಳ ಪ್ರಕಾರ, ಸದ್ದು ವಯಸ್ಸಾದ ವ್ಯಕ್ತಿಗಳ ಕಿವಿಗೆ ಹೆಚ್ಚು ಅಪಾಯಕಾರಿಯಗಿದೆ.

ಸದ್ದು ಪ್ರೇರಿತ ಶ್ರವಣ ದೋಷಕ್ಕೆ ಕಾರಣವೇನು?

ದೀರ್ಘಕಾಲದವರೆಗೆ ಆಗಾಗ್ಗೆ ದೊಡ್ಡ ಸದ್ದಿಗೆ ಒಡ್ಡಿಕೊಳ್ಳುವುದರಿಂದ, ಅದು ನಮ್ಮ ಕಿವಿಯ ಒಳಭಾಗದಲ್ಲಿರುವ ಮೃದು ಕೋಶಗಳನ್ನು ಹಾನಿಗೊಳಿಸಬಹುದು. ಸಾಕಷ್ಟು ಕೋಶಗಳು ನಾಶವಾದರೆ, ಶ್ರವಣ ಶಾಶ್ವತವಾಗಿ ಹಾನಿಯಾಗುತ್ತದೆ.

 

ಸದ್ದು ಪ್ರೇರಿತ ಶ್ರವಣ ದೋಷದ ಲಕ್ಷಣಗಳು !!

ಸದ್ದಿನಿಂದ ಉಂಟಾಗುವ ಶ್ರವಣ ಹಾನಿಯು ಸಾಮಾನ್ಯವಾಗಿ ನಿಧಾನವಾಗಿರುತ್ತದೆ, ಅಥವಾ ಶ್ರವಣ ದೋಷದ ಲಕ್ಷಣಗಳು ಹೆಚ್ಚು ಸ್ಪಷ್ಟವಾಗುವವರೆಗೆ ನೀವು ಅವುಗಳನ್ನು ನಿರ್ಲಕ್ಷಿಸಬಹುದು.

ಶ್ರವಣ ದೋಷದ ಲಕ್ಷಣಗಳು:

 • ಮಾತನ್ನುಅರ್ಥಮಾಡಿಕೊಳ್ಳುವ ತೊಂದರೆ.
 • ಹೆಚ್ಚಿನ ಆವರ್ತನ ಶಬ್ದಗಳನ್ನು ಕೇಳುವಲ್ಲಿ ತೊಂದರೆ.
 • ದೂರದಿಂದ ಮಾತನಾಡುವಂತೆ ಭಾಸವಾಗುವುದು.
 • ಕಿವಿಯೊಳಗೆ ಅಥವಾ ತಲೆಯಲ್ಲಿ ಕೆಲವು ಶಬ್ದಗಳು (ಟಿನೈಟಿಸ್) ಕೇಳಿದಂತಾಗುವುದು.

 

ಕಿವಿ ರಕ್ಷಣಾತ್ಮಕ ಸಾಧನಗಳು (ಇಯರ್ ಪ್ರೊಟೆಕ್ಟಿವ್ ಡಿವೈಸಸ್) ಎ೦ದರೇನು?

ಕಿವಿಯೊಳಗೆ ಪ್ರವೇಶಿಸುವ ಸದ್ದಿನ ಮಟ್ಟವನ್ನು ಕಡಿಮೆ ಮಾಡಲು  ಧರಿಸಿರುವ ಸಾಧನಗಳನ್ನು ಕಿವಿ ರಕ್ಷಣಾತ್ಮಕ ಸಾಧನಗಳು  ಎನ್ನುತ್ತಾರೆ. ವಿವಿಧ ರೀತಿಯ ಕಿವಿ ರಕ್ಷಣಾತ್ಮಕ ಸಾಧನಗಳು: ಫೋಮ್ ಪ್ಲಗ್‌,  ಮೊಲ್ಡೆಡ್ ಪ್ಲಗ್‌, ಇಯರ್‌ಮಫ್‌ ಮತ್ತು ಕೆನಾಲ್ ಕ್ಯಾಪ್ / ಸೆಮಿ-ಇನ್ಸರ್ಟ್ ಪ್ಲಗ್‌.

 

ಸದ್ದು ಪ್ರೇರಿತ ಶ್ರವಣ ದೋಷವನ್ನು ತಡೆಯಬಹುದೇ?

ಹೌದು, ಇದು ಸಂಪೂರ್ಣವಾಗಿ ತಡೆಯಬಹುದಾದ ದೋಷವಾಗಿದೆ.

 • ಯಾವ ಸದ್ದುಗಳು ಕಿವಿಗೆ ಹಾನಿಯನ್ನು ಉ೦ಟುಮಾಡುತ್ತವೆ ಎಂದು ತಿಳಿಯಿರಿ.
 • ದೊಡ್ಡ ಶಬ್ದವಿರುವ ಜಾಗದಲ್ಲಿ ಕೆಲಸ ಮಾಡುವಾಗ ಕಿವಿ ರಕ್ಷಣಾತ್ಮಕ ಸಾಧನಗಳನ್ನು ತಪ್ಪದೇ ಧರಿಸಿ.
 • ನಿಮಗೆ ಸದ್ದನ್ನು ಕಡಿಮೆ ಮಾಡಲು ಅಥವಾ ಅದರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅ ಸದ್ದಿನಿಂದ ದೂರ ಸರಿಯಿರಿ.
 • ಸದ್ದಿರುವ ಜಾಗದಲ್ಲಿ ಕೆಲಸ ಮಾಡುವಾಗ ವಿರಾಮ ತೆಗೆದುಕೊಳ್ಳಿ.
 • ಚಿಕ್ಕಮಕ್ಕಳ ಕಿವಿಗಳನ್ನು ಸದ್ದಿನಿಂದ ರಕ್ಷಿಸಿರಿ.
 • ನೀವು ಕೆಲಸ ಮಾಡುವ ಪ್ರದೇಶದಲ್ಲಿ ಅತೀಯಾದ ಸದ್ದು ಇದ್ದರೆ ನಿಮ್ಮ ಶ್ರವಣ ಶಕ್ತಿಯನ್ನು ಆಗಾಗ್ಗೆ ಶ್ರವಣ ತಜ್ಞರಿಂದ (ಆಡಿಯಾಲಜಿಸ್ಟ್) ಪರೀಕ್ಷಿಸಿ.

ಸದ್ದನ್ನು ನಿಯಂತ್ರಿಸಲು ಕೆಲವು ಸಲಹೆಗಳು!!!

 • ಟಿವಿ, ರೇಡಿಯೋ ಅಥವಾ ಸಂಗೀತಗಳ ಶಬ್ದದ ತೀವ್ರತೆಯನ್ನು ಕಡಿಮೆ ಮಾಡಿ.
 • ಮನೆಯೊಳಗೆ ಅಥವಾ ಕಟ್ಟಡದ ಒಳಗೆ ಹೋಗುವ ಅನಗತ್ಯ ಶಬ್ದವನ್ನು ತಪ್ಪಿಸಲು ಕಿಟಕಿಗಳನ್ನು ಮುಚ್ಚಿರಿ.
 • ಸದ್ದನ್ನು ಹೀರಿಕೊಳ್ಳಲು ಮರಗಳನ್ನು ನೆಡಬೇಕು.
 • ಯಂತ್ರಗಳನ್ನು ನಯಗೊಳಿಸಿ ಮತ್ತು ಉತ್ತಮವಾಗಿ ನಿರ್ವಹಿಸಿ.
 • ಮನೆಯಲ್ಲಿ ಮತ್ತು ಕೆಲಸ ಮಾಡುವ ಜಾಗದಲ್ಲಿ ಶಬ್ದವನ್ನು ಕಡಿಮೆ ಮಾಡಲು ರಬ್ಬರ್ ಮ್ಯಾಟ್ಸ್, ಪರದೆಗಳು, ಕಾರ್ಪೆಟ್ಗಳು ಮತ್ತು ಡಬಲ್-ಪೇನ್ ಕಿಟಕಿಗಳಂತಹ ಧ್ವನಿ-ಹೀರಿಕೊಳ್ಳುವ ವಸ್ತುಗಳ ಬಳಕೆಯನ್ನು ಮಾಡಿ.
 • ಒಂದೇ ಸಮಯದಲ್ಲಿ ಹಲವಾರು ಅತೀಯಾದ ಸದ್ದನ್ನು ಉಂಟುಮಾಡುವ ಯಂತ್ರಗಳನ್ನು ಬಳಸಬೇಡಿ.
 • ಮನರಂಜನಾ ಚಟುವಟಿಕೆಗಳಲ್ಲಿ ಶಬ್ದದ ಪ್ರಮಾಣವನ್ನು ಕಡಿಮೆ ಮಾಡಿ.
 • ಆಸ್ಪತ್ರೆ, ಶಾಲೆ ಮತ್ತು ವಸತಿ ಪ್ರದೇಶಗಳಲ್ಲಿ “ಶಬ್ದ ಮುಕ್ತ ವಲಯ” ಎಂದು ಘೋಷಿಸಿ.

 

ನೀವು ಅಥವಾ ನಿಮಗೆ ತಿಳಿದಿರುವ ಯಾವುದೇ ವ್ಯಕ್ತಿಯು ಸದ್ದನ್ನು ಕೇಳಿದ ಕಾರಣ ಕಿವಿ ಮುಚ್ಚಿದ ಆನುಭವ, ಕಿವಿಯೊಳಗೆ ಅಥವಾ ತಲೆಯಲ್ಲಿ  ಕೆಲವು ಶಬ್ದಗಳುನ್ನು (ಟಿನೈಟಿಸ್) ಕೇಳಿದ ಆನುಭವ, ಶ್ರವಣ ದೋಷ ಅಥವಾ ಮಾತನ್ನುಅರ್ಥಮಾಡಿಕೊಳ್ಳುವಲ್ಲಿ ತೊಂದರೆ ಅನುಭವಿಸಿದರೆ, ತಕ್ಷಣ ಶ್ರವಣ ತಜ್ಞರನ್ನು (ಆಡಿಯಾಲಜಿಸ್ಟ್) ಸಂಪರ್ಕಿಸಿ, ಶ್ರವಣ ಮೌಲ್ಯಮಾಪನಕ್ಕೆ ಒಳಗಾಗಿರಿ ಮತ್ತು ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಪಡೆಯಿರಿ.