ನೋವಿನಲ್ಲೂ ನಲಿವು ತರುವ ಓಣಂ

ನೋವಿನಲ್ಲೂ ನಲಿವು ತರುವ ಓಣಂ

Lavakumar   ¦    Sep 10, 2019 02:54:17 PM (IST)
ನೋವಿನಲ್ಲೂ ನಲಿವು ತರುವ ಓಣಂ

ಕಳೆದ ಎರಡು ವರ್ಷದಿಂದ ಮುಂಗಾರು ಮಳೆಯ ಅಬ್ಬರ ಮತ್ತು ಅದು ತಂದ ದುರಂತದಿಂದಾಗಿ ಕೇರಳದಲ್ಲಿ ನಲಿವಿಗಿಂತ ನೋವೇ ಜಾಸ್ತಿಯಾಗಿದೆ. ಆದರೂ ತಮ್ಮೆಲ್ಲ ನೋವನ್ನು ಮರೆತು ಸಂಭ್ರಮಿಸಲೆಂದೇ ಓಣಂ ಹಬ್ಬ ಬಂದಿದೆ.

 ಕಳೆದ ಎರಡು ವರ್ಷಗಳಿಂದ ಓಣಂ ಸಂಭ್ರಮ ಕಡಿಮೆಯಾದರೂ ಆಚರಣೆಗೆ ಚ್ಯುತಿ ಬಂದಿಲ್ಲ. ತಮ್ಮದೇ ಪರಿದಿಯಲ್ಲಿ ಆಚರಿಸಿ ಸಂಭ್ರಮ ಪಡುತ್ತಿದ್ದಾರೆ ಕೇರಳಿಗರು. ಹಿಂದಿನಿಂದಲೂ ಈ ಹಬ್ಬವನ್ನು ಕೃಷಿಯ ಹಿನ್ನಲೆಯಲ್ಲಿ ಆಚರಿಸಲ್ಪಡುತ್ತಿದ್ದು, ಮಳೆಗಾಳಿಗೆ ದುಡಿದು ಬೆಂಡಾದ ಜೀವಗಳಿಗೆ ಸಂತಸ ಸಂಭ್ರಮನ್ನೀಯುವ ಹಬ್ಬವಾಗಿಯೇ ಮುನ್ನಡೆಯುತ್ತಾ ಸಾಗುತ್ತಿದೆ.

 ಓಣಂ ಹಬ್ಬದ ಸಂಭ್ರಮವೇ ವಿಭಿನ್ನ. ಮಲಯಾಳಿಗರ ಮನೆಯ ಮುಂದಿನ ಅಂಗಳದಲ್ಲೊಂದು ಹೂವಿನ ರಂಗೋಲಿ(ಪೂಕಳಂ)... ನಡುವೆ ಬೆಳಗುವ ಹಣತೆ... ಹಬ್ಬದ ಸಂಭ್ರಮವನ್ನು ಹೊರಸೂಸುತ್ತಿರುತ್ತದೆ. ಹಬ್ಬದ ಬಗ್ಗೆ ಹೇಳುವುದಾದರೆ ಓಣಂ ಹಬ್ಬ ಸಿಂಹ ಮಾಸದಲ್ಲಿ ಬರುತ್ತದೆ. (ಈ ಬಾರಿ ಸೆ.11ರಂದು ಆಚರಿಸಲಾಗುತ್ತಿದೆ.) ಸಿಂಹ ಮಾಸ ಕೇರಳದವರ ಪಾಲಿಗೆ ಚಿನ್ನದ ಮಾಸ. ಏಕೆಂದರೆ ಹಿಂದಿನ ಕಾಲದಲ್ಲಿ ಈ ವೇಳೆಗೆ ಕೃಷಿ ಚಟುವಟಿಕೆಯನ್ನು ಮುಗಿಸಿ ಜನ ನೆಮ್ಮದಿಯಾಗಿರುತ್ತಿದ್ದರು. ಸಿಂಹ ಮಾಸದ ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಓಣಂ ಆಚರಣೆಯಲ್ಲಿರುತ್ತದೆಯಾದರೂ ಕೊನೆಯ ಶ್ರಾವಣ ನಕ್ಷತ್ರದ ದಿನ ತಿರುವೋಣಂನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. 

ಪ್ರತಿ ಊರಿನಲ್ಲಿ  ಬಡವ-ಬಲ್ಲಿದ ಎನ್ನದೆ ಎಲ್ಲರೂ ಒಂದೆಡೆ ಕಲೆತು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಹಬ್ಬದ ಮತ್ತೊಂದು ವಿಶೇಷತೆಯಾಗಿದೆ. ಕೇರಳದಿಂದ ಹೊರ ಹೋಗಿ ನೆಲೆಸಿರುವ ಕೇರಳಿಯರು ಓಣಂ ದಿನದಂದು ಒಂದೆಡೆ ಬೆರೆತು ಸಾಮೂಹಿಕವಾಗಿ ಹಬ್ಬವನ್ನು ಆಚರಿಸುವ ಪರಿಪಾಠ ಇತ್ತೀಚೆಗೆ ಬೆಳೆದು ಬಂದಿದೆ. ಈ ಸಂದರ್ಭ ಮಹಿಳೆಯರಿಗೆ ಹೂವಿನ ರಂಗೋಲಿ ಹಾಕುವುದು ಸೇರಿಂತೆ ಕಿರಿಯರಿಗೆ ಹಾಗೂ ಹಿರಿಯರಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.

 ಮುಂದುವರೆದ ಇಂದಿನ ದಿನದಲ್ಲಿ ಓಣಂ ಹಬ್ಬದ ಆಚರಣೆಗಳಲ್ಲಿ ಒಂದಷ್ಟು ಬದಲಾವಣೆಗಳಾಗಿರಬಹುದು. ಆದರೆ ಹಬ್ಬದ ಸಂಭ್ರಮ ಮಾತ್ರ ಕಳೆಗುಂದಿಲ್ಲ ಹಾಗಾಗಿ ಇದು ಹೊನ್ನಿನ ಹಬ್ಬವಾಗಿ ಮುಂದುವರೆಯುತ್ತಿದೆ. 

ಓಣಂ ಹಬ್ಬಕ್ಕೆ ತನ್ನದೇ ಆದ ಇತಿಹಾಸ  ಹಾಗೂ ಪೌರಾಣಿಕ ಹಿನ್ನಲೆಯಿರುವುದನ್ನು ನಾವು ಕಾಣಬಹುದು. ಈ ಹಬ್ಬ ಪ್ರಾಚೀನ ಕಾಲದಲ್ಲಿಯೇ ಆಚರಣೆಯಲ್ಲಿತ್ತು ಎನ್ನಲಾಗುತ್ತಿದ್ದು, ಕ್ರಿ.ಶ. 861ರ ರವಿವರ್ಮನ ಕಾಲದ ತಾಮ್ರದ ಶಾಸನದಲ್ಲಿ ಓಣಂ ಕುರಿತಂತೆ ಉಲ್ಲೇಖಗಳಿರುವುದನ್ನು ಕಾಣಬಹುದಾಗಿದೆ. 

ಓಣಂ ಆಚರಣೆ ಹೇಗೆ ಜಾರಿಗೆ ಬಂತು ಎಂಬುವುದನ್ನು ಪುರಾಣದ ಹಿನ್ನಲೆಯಲ್ಲಿ ನೋಡುವುದಾದರೆ ವಾಮನ ರೂಪದಲ್ಲಿ ಬಂದ ವಿಷ್ಣು ಬಲಿಚಕ್ರವರ್ತಿಯನ್ನು ಸಂಹರಿಸುವ ಕಥೆ ಎಲ್ಲರಿಗೂ ತಿಳಿದದ್ದೇ,  ಓಣಂ ಹಬ್ಬ ಕೂಡ ಬಲಿಚಕ್ರವರ್ತಿಯ ಸಂಹಾರದ ನಂತರ ಆಚರಣೆಗೆ ಬಂದಿದೆ ಎಂಬುವುದು ಪುರಾಣ ಕಥೆಗಳಿಂದ ತಿಳಿದು ಬರುತ್ತದೆ. ದೇವತೆಗಳ ಪಾಲಿಗೆ ಕಂಟಕನಾಗಿದ್ದ ಬಲಿ ಚಕ್ರವರ್ತಿಯನ್ನು ವಧಿಸುವ ಸಲುವಾಗಿ ವಿಷ್ಣು ವಾಮನ ರೂಪದಲ್ಲಿ ಬಂದು ತಪ್ಪಸ್ಸಿಗಾಗಿ ಮೂರು ಹೆಜ್ಜೆಯಷ್ಟು ಅಗಲದ ಜಾಗ ಕೇಳುತ್ತಾನೆ. ಮಹಾದಾನಿಯಾಗಿದ್ದ ಬಲಿ ಚಕ್ರವರ್ತಿ ತನ್ನನ್ನು ವಧಿಸಲು ವಿಷ್ಣುವೇ ವಾಮನ ರೂಪದಲ್ಲಿ ಬಂದಿದ್ದಾನೆ ಎಂಬುದನ್ನು ಅರಿಯದೆ ಜಾಗ ನೀಡಲು ಒಪ್ಪುತ್ತಾನೆ. ಈ ವೇಳೆ ತ್ರಿವಿಕ್ರಮನಾಗಿ ಬೆಳೆದ ವಾಮನ ರೂಪದ ವಿಷ್ಣು ಭೂಮಿ ಆಕಾಶವನ್ನು ಒಂದೊಂದು ಹೆಜ್ಜೆಯನ್ನಾಗಿ ಮಾಡಿ ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳುತ್ತಾನೆ ಈ ವೇಳೆ ಬಲಿ ಚಕ್ರವರ್ತಿ ತನ್ನ ಶಿರವನ್ನೇ ಒಡ್ಡುತ್ತಾನೆ ಆಗ ವಿಷ್ಣು ಶಿರದ ಮೇಲೆ ಹೆಜ್ಜೆಯಿಟ್ಟು ಪಾತಾಳಕ್ಕೆ ತಳ್ಳುತ್ತಾನೆ. ಈ ವೇಳೆ ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡುವ ಸಲುವಾಗಿ ವರ್ಷಕ್ಕೊಮ್ಮೆ ಭೂಮಿಗೆ ಬರಲು ಅವಕಾಶ ಕೊಡುವಂತೆ ಬೇಡಿಕೊಳ್ಳುತ್ತಾನೆ. ಅದಕ್ಕೆ ವಿಷ್ಣು ಅಭಯ ನೀಡುತ್ತಾನೆ. ಅದರಂತೆ ಇಂದಿಗೂ ತಿರುವೋಣಂ ದಿನ ಬಲಿಚಕ್ರವರ್ತಿ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಕೇರಳಿಗರದ್ದಾಗಿದೆ. ಹಾಗಾಗಿ ಮನೆ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿ ಹಾಕಿ ಮಧ್ಯೆ ದೀಪವನ್ನಿಟ್ಟು ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಿ ಬಲಿ ಚಕ್ರವರ್ತಿಗಾಗಿ ಕಾಯುವುದು ಇಂದಿಗೂ ರೂಢಿಯಲ್ಲಿದೆ.