ಯುಗಾದಿ ಎಂದರೆ ಬರೀ ಹಬ್ಬವಲ್ಲ.. ಮರು ಹುಟ್ಟು..

ಯುಗಾದಿ ಎಂದರೆ ಬರೀ ಹಬ್ಬವಲ್ಲ.. ಮರು ಹುಟ್ಟು..

LK   ¦    Apr 06, 2019 12:28:21 PM (IST)
ಯುಗಾದಿ ಎಂದರೆ ಬರೀ ಹಬ್ಬವಲ್ಲ.. ಮರು ಹುಟ್ಟು..

ಯುಗಾದಿ ಬಂದಿದೆ.. ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿದೆ. ಜನ ಹಬ್ಬವನ್ನು ಹೊಸಬಟ್ಟೆ ತೊಟ್ಟು, ಮನೆಗೆ ಮಾವಿನ ತಳಿರು ತೋರಣ ಕಟ್ಟಿ, ಬೇವು ಬೆಲ್ಲ ಸೇವಿಸಿ ಸುಖ ದುಃಖಗಳನ್ನು ಸಮಾನಾಗಿ ಬರಮಾಡಿಕೊಳ್ಳುತ್ತಿದ್ದರೆ, ಇಡೀ ಪ್ರಕೃತಿ ಚಿಗುರೆಲೆಗಳಿಂದ ನಳನಳಿಸುತ್ತದೆ.

ಯುಗಾದಿ ಎಂದರೆ ಮನುಷ್ಯರಿಗೆ ಹಬ್ಬ.. ಸಡಗರ.. ಸಂಭ್ರಮ. ಆದರೆ ಪ್ರಕೃತಿಗೆ ಬರೀ ಹಬ್ಬವಲ್ಲ ಅದು ಮರು ಹುಟ್ಟು.. ಈ ಬಾರಿ ವಿಕಾರಿ ಸಂವತ್ಸರದ ಚಾಂದ್ರಮಾನ ಯುಗಾದಿಯಾಗಿದೆ. ಹಿಂದೂ ಸಂವತ್ಸರದ ಪ್ರಕಾರ ಇಲ್ಲಿಂದ ಹೊಸ ವರ್ಷ ಆರಂಭವಾಗುತ್ತದೆ. ಹೊಸವರ್ಷಕ್ಕೆ ಜನ ಮಾತ್ರವಲ್ಲದೆ, ಇಡೀ ನಿಸರ್ಗವೇ ಸಿದ್ಧತೆ ಮಾಡಿಕೊಂಡು ಕಾಯುವುದು ನಿಜಕ್ಕೂ ಸೋಜಿಗವೇ..

ನಮ್ಮ ದೇಶದಲ್ಲಿ ಯುಗಾದಿ ಆಚರಣೆಯೂ ಅಷ್ಟೆ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಲಿಸಿದರೆ ಒಂದಷ್ಟು ಭಿನ್ನತೆ ಇರುವುದು ಕಂಡು ಬರುತ್ತದೆ. ಉತ್ತರ ಭಾರತದಲ್ಲಿ ಬಾರ್ಹಸ್ಪತ್ಯಮಾನದಲ್ಲಿ ಯುಗಾದಿಯನ್ನು ಆಚರಿಸಿದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿಯನ್ನು ಆಚರಿಸುವ ಪದ್ಧತಿಯಿದೆ. ಈ ಎರಡು ಯುಗಾದಿ ಆಚರಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಚಂದ್ರ ಮತ್ತೊಂದು ಸೂರ್ಯನನ್ನು ಅವಲಂಭಿಸಿರುವುದು ಗೋಚರವಾಗುತ್ತದೆ.

ಚಾಂದ್ರಮಾನ ಯುಗಾದಿ ಕುರಿತಂತೆ ಹೇಳುವುದಾದರೆ, ಚಂದ್ರನ ಚಲನೆಯನ್ನು ಆಧರಿಸಿ ಸಾಮಾನ್ಯವಾಗಿ ಅಮಾವಾಸ್ಯೆ-ಹುಣ್ಣಿಮೆಯನ್ನು ಮತ್ತು ಇವುಗಳ ಆಧಾರದಲ್ಲಿ ತಿಂಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಪದ್ಧತಿಯೇ ಚಾಂದ್ರಮಾನವಾಗಿದೆ. ಈ ಪದ್ಧತಿಯಲ್ಲಿ ಚಂದ್ರನ ಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಚಾಂದ್ರಮಾನ ಯುಗಾದಿ ಕೂಡ ನಿರ್ಧಿಷ್ಟ ದಿನಾಂಕದಲ್ಲಿ ಬರುವುದಿಲ್ಲ. ಆದರೆ ಸೌರಮಾನ ಯುಗಾದಿ ಹಾಗಲ್ಲ ಅದು ಮೇಷ ರಾಶಿಗೆ ಸೂರ್ಯ ಪ್ರವೇಶಿಸುವ ದಿನದಂದು ಆಚರಿಸಲಾಗುತ್ತದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದರಿಂದ ಸಾಮಾನ್ಯವಾಗಿ ನಿಗದಿತ ಸಮಯದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ.

ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ.

ಯುಗಾದಿಯಲ್ಲಿ ಬೇವು-ಬೆಲ್ಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಹಬ್ಬದ ದಿನದಂದು ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಮಾಡಿದರೂ ಬೇವು-ಬೆಲ್ಲ ಸೇವಿಸುವ ಮೂಲಕ ಜೀವನದಲ್ಲಿ ಬರುವ ಕಷ್ಟ-ಸುಖ ಎರಡನ್ನೂ ನಾವು ಸಮಾನವಾಗಿ ಸ್ವೀಕರಿಸಬೇಕು ಎಂಬುವುದನ್ನು ಸಾರುತ್ತಾ ಬರಲಾಗುತ್ತಿದೆ. ಹಾಗಾಗಿ ಯುಗಾದಿಯಂದು ಬೇವು-ಬೆಲ್ಲ ಸೇವಿಸುವುದು ಎಂದರೆ ಕಷ್ಟಸುಖಗಳನ್ನು ಸಮಾನವಾಗಿ ಎದುರಿಸಿ ಬದುಕುವುದು ಎಂದರ್ಥವಾಗಿದೆ. ಬದುಕಿನಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕು ಎಂಬುವುದನ್ನು ಸಾರುವ ಸಂಕೇತವಾಗಿ ಬೇವು-ಬೆಲ್ಲವನ್ನು ಯುಗಾದಿ ಹಬ್ಬದಂದು ಸೇವಿಸಲಾಗುತ್ತಿದೆ.

ಯುಗಾದಿ ಹಬ್ಬದ ಮಾರನೆಯ ದಿನವನ್ನು ‘ವರ್ಷ ತೊಡಕು’ ಎಂದು ಆಚರಿಸಲಾಗುತ್ತದೆ. ‘ವರ್ಷ ತೊಡಕು’ ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ.