ಮಳೆಗಾಲದ ರಮ್ಯ ರಮನೀಯ ತಾಣ ಇರ್ಪು

ಮಳೆಗಾಲದ ರಮ್ಯ ರಮನೀಯ ತಾಣ ಇರ್ಪು

LK   ¦    Jul 03, 2020 05:08:42 PM (IST)
ಮಳೆಗಾಲದ ರಮ್ಯ ರಮನೀಯ ತಾಣ ಇರ್ಪು

ವೀಕೆಂಡ್ ಟ್ರಿಪ್ ಹೊರಡುವರು ಕೊಡಗಿನ ಇರ್ಪು ತಾಣವನ್ನು ಆಯ್ದುಕೊಂಡದ್ದೇ ಆದರೆ ನಿಸರ್ಗ ಮಡಿಲ ಪ್ರಶಾಂತ ತಾಣದಲ್ಲಿ ತಮ್ಮೆಲ್ಲಾ ಜಂಜಾಟಗಳನ್ನು ಮರೆತು ಧುಮುಕುವ ಜಲಧಾರೆಯಲ್ಲಿ ಮಿಂದೆದ್ದು ಮರೆಯಲಾರದ ನೆನಪಿನ ಬುತ್ತಿಯನ್ನು ಹೊತ್ತು ಬರಬಹುದು.  

ಮೊದಲೆಲ್ಲಾ ಇರ್ಪುಗೆ ಹೋಗುವುದು ಸುಲಭದ ಮಾತಾಗಿರಲಿಲ್ಲ. ಜನಜಂಗುಳಿಯಿಂದ ದೂರವಾಗಿ ಬೆಟ್ಟಗುಡ್ಡ ಕಾಡುಗಳ  ನಡುವೆಯಿದ್ದ ಈ ತಾಣಕ್ಕೆ ತೆರಳುವುದೆಂದರೆ ತೀರ್ಥಯಾತ್ರೆ ಕೈಗೊಂಡಂತಾಗುತ್ತಿತ್ತು. ವಾಹನ, ರಸ್ತೆ ಸಂಪರ್ಕಗಳಾಗಲೀ, ವಸತಿ ಇತರೆ ಸೌಲಭ್ಯಗಳು ಪ್ರವಾಸಿಗರಿಗೆ ಲಭ್ಯವಿರಲಿಲ್ಲ. ಈಗ ಹಾಗೇನಿಲ್ಲ ಬಿಡಿ ಇರ್ಪು ತಾಣ ಅಭಿವೃದ್ಧಿಯಾಗಿದೆ. ಪ್ರವಾಸಿಗರ ಅನುಕೂಲದ ದೃಷ್ಟಿಯಿಂದ  ಇಲ್ಲಿ ಕೆಲವು ಸೌಲಭ್ಯಗಳನ್ನು ಮಾಡಲಾಗಿದೆ. ಅಲ್ಲದೆ ಭೇಟಿ ನೀಡುವ ಪ್ರವಾಸಿಗರು ಅಂದೇ ಹಿಂತಿರುಗಬೇಕಾಗಿಲ್ಲ. ಅಲ್ಲಿಯೇ ವಾಸ್ತವ್ಯ ಹೂಡಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ರೆಸಾರ್ಟ್ ಗಳಿವೆ.

ಹಾಗೆ ನೋಡಿದರೆ ಕೊಡಗಿನಲ್ಲಿರುವ ಇತರೆ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಇರ್ಪುಗೆ ವಿಶಿಷ್ಟವಾಗಿ ಗಮನಸೆಳೆಯುತ್ತದೆ. ಮಡಿಕೇರಿಯಿಂದ 85 ಕಿ.ಮೀ. ದೂರದಲ್ಲಿರುವ ಈ ತಾಣ ವೀರಾಜಪೇಟೆ ತಾಲೂಕಿಗೆ ಸೇರಿದೆ. ಮಡಿಕೇರಿ ಕಡೆಯಿಂದ ಬರುವವರು ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಬರಬಹುದು.

ಒತ್ತೊತ್ತಾಗಿರುವ ಅರಣ್ಯಗಳನ್ನೊಳಗೊಂಡ ಗಿರಿಶಿಖರಗಳು, ಜುಳುಜುಳು ಹರಿಯುವ ಲಕ್ಷ್ಮಣ ತೀರ್ಥ ನದಿ, ವಿಶಾಲ ಗದ್ದೆ ಬಯಲುಗಳ ನಡುವೆ ನೆಲೆ ನಿಂತ ರಾಮೇಶ್ವರ ದೇಗುಲ, ಅದರಾಚೆ ದಟ್ಟಕಾನನದ ನಡುವೆ ಭೋರ್ಗರೆದು ಧುಮುಕುವ ಜಲಪಾತ ಪ್ರವಾಸಿಗರಿಗೆ ಮುದ ನೀಡುತ್ತದೆ. ಅಷ್ಟೇ ಅಲ್ಲ ದಿನನಿತ್ಯದ ಜಂಜಾಟವನ್ನೆಲ್ಲಾ ಮರೆಸಿ ಅಲ್ಲಿಯೇ ಠಿಕಾಣಿ ಹೂಡುವಂತೆ ಮಾಡಿಬಿಡುತ್ತದೆ.

ಇರ್ಪುವಿನಲ್ಲಿರುವ ರಾಮೆಶ್ವರ ದೇವಾಲಯ ಕೇರಳೀಯರ ವಾಸ್ತುಶಿಲ್ಪದೊಂದಿಗೆ ವೃತ್ತಾಕಾರದ ಗರ್ಭಗುಡಿಯನ್ನು ಹೊಂದಿ ಬಲು ಸೊಗಸಾಗಿ ನಿರ್ಮಿಸಲ್ಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿರುವ ಇತರೆ ದೇವಾಲಯಕ್ಕಿಂತ ಭಿನ್ನವಾಗಿ ಗೋಚರಿಸುತ್ತದೆ. 

ಲಕ್ಷ್ಮಣ ಸೃಷ್ಟಿಸಿದ ಜಲಧಾರೆ: ರಾಮೇಶ್ವರ ದೇವಾಲಯ ಮತ್ತು ಇಲ್ಲಿನ ಅಧಿದೇವತೆ ರಾಮೇಶ್ವರ ಹೇಗೆ ಪ್ರತಿಷ್ಠಾಪನೆಗೊಂಡ ಅಲ್ಲದೆ, ಈ ತಾಣಕ್ಕೆ ಇರ್ಪು ಎಂಬ ಹೆಸರು ಹೇಗೆ ಬಂತು? ಲಕ್ಷ್ಮಣತೀರ್ಥ ನದಿಯ ಸೃಷ್ಟಿ ಹೇಗಾಯಿತು ಎಂಬುವುದಕ್ಕೆಲ್ಲಾ ಪೌರಾಣಿಕ ಹಿನ್ನಲೆಯಿದ್ದು, ಅದು ಹೀಗಿದೆ.

ಲಂಕೆಯಲ್ಲಿ ಯುದ್ದ ಮಾಡಿ ರಾಕ್ಷಸರನ್ನು ಸಂಹರಿಸಿ ಸೀತಾ ದೇವಿಯೊಂದಿಗೆ ಇರ್ಪುವಿಗೆ ಆಗಮಿಸಿದ ಶ್ರೀರಾಮ ಇಲ್ಲಿಯ ಪ್ರಶಾಂತ ವಾತಾವರಣ ಕಂಡು ದೇಗುಲ ನಿರ್ಮಾಣಕ್ಕೆ  ಇದೇ ಸೂಕ್ತ ತಾಣವೆಂದು ನಿರ್ಧರಿಸುತ್ತಾನೆ. ಪೂಜಾ ಕೈಂಕರ್ಯ ನೆರವೇರಿಸಲು ಶ್ರೀರಾಮನ ಆಜ್ಞೆಯಂತೆ ಆಂಜನೇಯ ಲಿಂಗತರಲೆಂದು ಕಾಶಿಯತ್ತ ಹೋಗುತ್ತಾನೆ. ಇತ್ತ ಶ್ರೀರಾಮ ಲಿಂಗಪ್ರತಿಷ್ಠಾಪನೆಗೆ ದಿನ ನಿಗದಿಪಡಿಸಿ ಮುನಿಪುಂಗವರನ್ನು ಆಹ್ವಾನಿಸಿದನಂತೆ. ಆದರೆ ಮುಹೂರ್ತ ಸಮೀಪಿಸಿದರೂ  ಲಿಂಗ ತರಲು ಹೋದ ಆಂಜನೇಯ ಬರಲೇ ಇಲ್ಲ. ಆಗ ಶ್ರೀರಾಮ ಸ್ವತಃ ಲಿಂಗವೊಂದನ್ನು ನಿರ್ಮಿಸಿ ಮುಹೂರ್ತದ ಸಮಯಕ್ಕೆ ಸರಿಯಾಗಿ ಲಿಂಗಪ್ರತಿಷ್ಠಾಪನೆ ಮಾಡಿದನಂತೆ. ಕಾರ್ಯ ಮುಗಿದ ಮೇಲೆ ಆಂಜನೇಯ ಲಿಂಗವನ್ನು ಹೊತ್ತು ತಂದನಂತೆ. ಆದರೆ ಆ ಲಿಂಗವನ್ನು ಆಂಜನೇಯನೇ ಪ್ರತಿಷ್ಠಾಪಿಸುವಂತೆ ಶ್ರೀರಾಮ ಹೇಳಿದ ಮೇರೆಗೆ  ಆಂಜನೇಯ ಇರ್ಪುಗೆ ಹತ್ತು ಕಿ.ಮೀ. ದೂರವಿರುವ ಹೇರ್ಮಾಡಿನಲ್ಲಿ ಪ್ರತಿಷ್ಠಾಪಿಸಿದನೆಂಬುವುದು ಇಂದಿಗೂ ಜನವಲಯದಲ್ಲಿರುವ ಪೌರಾಣಿಕ ಕಥೆಯಾಗಿದೆ.

ಇನ್ನು ಇರ್ಪು ಎಂಬ ಹೆಸರು ಹೇಗೆ ಬಂತೆಂಬುವುದಕ್ಕೆ  ಮತ್ತೊಂದು ಪೌರಾಣಿಕ ಕಥೆಯಿದೆ. ಸೀತೆಯನ್ನು ಅರಸುತ್ತಾ ಹೊರಟ ರಾಮಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಶ್ರೀರಾಮ ಸೇರಿದಂತೆ ವಾನರರು ನಡೆಯುತ್ತಿದ್ದರೆ ಕೋಪಗೊಂಡ ಲಕ್ಷ್ಮಣ ಮುಂದಕ್ಕೆ ಹೆಜ್ಜೆಯಿರಿಸದೆ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ರಾಮನಿಗೆ ಎದುರಾಡದ ಲಕ್ಷ್ಮಣ ಅಂದು ಕೋಪಗೊಂಡು ಕುಳಿತದ್ದೇ ಮಲಯಾಳದಲ್ಲಿ ಇರಿಕ್ಕನ್ (ಕುಳಿತುಕೊಳ್ಳುವುದು) ಪದದಿಂದ ಇಪರ್ು ಹುಟ್ಟಿತೆಂದು ಹೇಳಲಾಗುತ್ತಿದೆ.

ಕೆಲಕಾಲದ ನಂತರ ಶಾಂತಗೊಂಡ ಲಕ್ಷ್ಮಣ ತನ್ನ ವರ್ತನೆಗೆ ನಾಚಿ ಅಣ್ಣ ಶ್ರೀರಾಮನನ್ನು ನೋಯಿಸಿದ್ದಕ್ಕಾಗಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಭಯಗೊಂಡು ಲಕ್ಷ್ಮಣನನ್ನು ಸಮಾಧಾನಗೊಳಿಸಿ ಆತನ ತಪ್ಪನ್ನು ಕ್ಷಮಿಸಿದ. ಇದರಿಂದ ಸಂತೋಷಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು(ನಂದಿಸಲು) ಬಾಣಬಿಟ್ಟನಂತೆ ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು  ನಂದಿಸಿತಂತೆ. ಈ ರೀತಿ ಸೃಷ್ಟಿಯಾದ ಜಲಧಾರೆಯನ್ನು ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿ ಎಲ್ಲರೂ ಕುಡಿದು ಸಂತುಷ್ಟಗೊಂಡರಂತೆ. ಆದುದರಿಂದ ಇಂದಿಗೂ ಲಕ್ಷ್ಮಣತೀರ್ಥ ಪವಿತ್ರನದಿಯಾಗಿಯೇ ಉಳಿದಿದೆ.

ವೈಶಿಷ್ಟ್ಯಪೂರ್ಣ ಜಲಧಾರೆ: ಲಕ್ಷ್ಮಣತೀರ್ಥ ನದಿಯಿಂದ ನಿರ್ಮಿತವಾಗಿರುವ ಜಲಪಾತವು ಕೊಡಗಿನಲ್ಲಿರುವ ಇತರೆ ಜಲಪಾತಗಳಿಗಿಂತ ವಿಶಿಷ್ಟವಾಗಿದ್ದು, ಪರಮಪವಿತ್ರವಾಗಿ, ಇಷ್ಟಾರ್ಥಗಳನ್ನು ನೆರವೇರಿಸುವ ಜಲಧಾರೆಯಾಗಿ ಕೊಡಗಿನವರ ನಂಬಿಕೆಗೆ ಪಾತ್ರವಾಗಿದೆ.

ರಾಮೇಶ್ವರ ದೇವಾಲಯಕ್ಕೆ ಒಂದು ಕಿ.ಮೀ. ದೂರದಲ್ಲಿರುವ ಈ ಜಲಪಾತ ತನ್ನ ಮೋಹಕತೆ, ಕುಲುಕುಲು ಸೌಂದರ್ಯ, ವಯ್ಯಾರದ ನಾಟ್ಯ, ಜುಳುಜುಳು ನಿನಾದದೊಂದಿಗೆ ಸುಮಾರು ಎಪ್ಪತ್ತು ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಅಲ್ಲಿಂದ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳನ್ನು ಸೃಷ್ಟಿಸಿದೆ. ಸುಮಾರು ಇನ್ನೂರು ಅಡಿಯಷ್ಟು ಎತ್ತರದಿಂದ ಪ್ರಮುಖವಾಗಿ ಎರಡು ಹಂತಗಳಲ್ಲಿ ಧುಮುಕಿ ಹರಿಯುವ ಜಲಧಾರೆಯ ಸೊಬಗನ್ನು ಹತ್ತಿರದಿಂದ ಸವಿಯುವುದೆಂದರೆ ಮರೆಯಲಾಗದ ಅನುಭವ.

ಈ ಜಲಧಾರೆಗೆ ತಲೆಕೊಟ್ಟು ಮೀಯುವುದೆಂದರೆ ಇಲ್ಲಿನವರು ಪವಿತ್ರವೆಂದು ನಂಬುತ್ತಾರೆ. ಪ್ರತಿವರ್ಷದ ಶಿವರಾತ್ರಿಯಂದು  ಇಲ್ಲಿ ಜಾತ್ರೆಯನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಸ್ನಾನಗೈಯ್ಯಲು ಸಹಸ್ರಾರು ಮಂದಿ ಆಗಮಿಸುತ್ತಾರೆ.  ಈ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಕಟ್ಟಲಾಗುವ ಮರದ ಅಟ್ಟಳಿಗೆಯಲ್ಲಿ  ನಿಂತು ಮೀಯುವುದು ರೂಢಿ. ಹೀಗೆ ಸ್ನಾನ ಮಾಡಿದರೆ ಬೇಡಿದ ಫಲ ಒದಗುತ್ತದೆ  ಎಂಬ ಪ್ರಬಲ ನಂಬಿಕೆಯಿದೆ. ಅದರಲ್ಲೂ ನವದಂಪತಿಗಳು ಕೈಕೈ ಹಿಡಿದು ಸ್ನಾನ ಮಾಡಿದರೆ ಬಯಸಿದ್ದು ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನವರದ್ದಾಗಿದೆ. ಇನ್ನು ಇಪರ್ು ತಾಣದಲ್ಲಿ ಹಲವಾರು ವಿಶೇಷತೆಗಳಿರುವುದನ್ನು ನಾವು ಕಾಣಬಹುದಾಗಿದೆ.

ವಿಶಿಷ್ಟಚಿಟ್ಟೆಗಳು: ಇರ್ಪುವಿನ ಜಲಪಾತ ವ್ಯಾಪ್ತಿಯಲ್ಲಿ ವಿಶಿಷ್ಟ ಎನ್ನಬಹುದಾದ ಪಶ್ಚಿಮಘಟ್ಟ ಪ್ರದೇಶಕ್ಕೆ ಸೀಮಿತವಾದ ಮಲಬಾರ್ ಬ್ಯಾಂಡೆಡ್ ಪೀಕಾಕ್ (ಪ್ಯಾಪಿಲಿಯೋ ಬುದ್ದಾ) ಎಂಬ ಚಿಟ್ಟೆಯನ್ನು ಕಾಣಬಹುದು.

ಅಶೋಕವೃಕ್ಷ: ರಾಮೇಶ್ವರ ದೇವಾಲಯ ಆವರಣದಲ್ಲಿ ಅಶೋಕ ವೃಕ್ಷವಿದ್ದು ಇದನ್ನು ಸಾರಣ ಅಶೋಕ ಎಂದೂ ಕರೆಯಲಾಗುತ್ತದೆ. ಲಂಕೆಯ ಅಶೋಕವನದಲ್ಲಿ ಸೀತಾದೇವಿ ಕಳೆದ ಬಂಧನದ ನೆನಪಿಗಾಗಿ ಇದನ್ನು ನೆಡಲಾಗಿದೆ ಎಂದು ಹೇಳಲಾಗುತ್ತದೆ.  ಈ ವೃಕ್ಷವು ಔಷಧೀಯ ಗಣಿಯಾಗಿದ್ದು, ಅಳಿವಿನ ಅಂಚಿನಲ್ಲಿರುವ  ವೃಕ್ಷಗಳ ಪೈಕಿ ಇದು ಒಂದಾಗಿದೆ.

ಬ್ರಹ್ಮಗಿರಿಬೆಟ್ಟ: ಇರ್ಪು ಜಲಪಾತದಿಂದ 9 ಕಿ.ಮೀ. ದೂರದಲ್ಲಿ ಬ್ರಹ್ಮಗಿರಿ ಬೆಟ್ಟ, 7 ಕಿ.ಮೀ. ದೂರದಲ್ಲಿ ಮುನಿಕಲ್ ಗುಹೆಯಿದ್ದು,  ಇಲ್ಲಿಯೇ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹವೂ ಇದೆ. ಚಾರಣ ಹಾಗೂ ತಂಗಲು ಪ್ರತ್ಯೇಕ ಶುಲ್ಕವನ್ನು ನೀಡಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ವಲಯ ಅರಣ್ಯಾಧಿಕಾರಿಗಳು ವನ್ಯಜೀವಿ ವಲಯ 08274-246331 ಸಂಪರ್ಕಿಸಬಹುದು.

ರೆಸಾರ್ಟ್ ಸೌಲಭ್ಯ: ಇರ್ಪು ವ್ಯಾಪ್ತಿಯಲ್ಲಿ ಹೈಫಾಲ್ಸ್, ರಾಮ್ಕಾಡ್, ಇರ್ಪು ರೆಸಾರ್ಟ್ ಮುಂತಾದ ಆತಿಥ್ಯದ ಮನೆಗಳಿವೆ. ನಿಗದಿತ ಶುಲ್ಕ ನೀಡಿ ತಂಗಬಹುದಾಗಿದೆ.

ಸಂಪರ್ಕ ಹೇಗೆ?: ಇರ್ಪುವಿಗೆ ತೆರಳುವವರಿಗೆ  ರಸ್ತೆ ಅಭಿವೃದ್ಧಿಯಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಿಲ್ಲ. ನಿಗದಿತ ಸಮಯಕ್ಕೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಗೋಣಿಕೊಪ್ಪಲಿನಿಂದ ಬಸ್ಸು ವ್ಯವಸ್ಥೆಯಿದೆ. ಉಳಿದಂತೆ ಕುಟ್ಟಕ್ಕೆ ತೆರಳುವ ಬಸ್ಸಿನಲ್ಲಿ ಶ್ರೀಮಂಗಲ ಹಾಗೂ ಕುಟ್ಟದ ನಡುವೆ ಸಿಗುವ ಕಾಕೂರು ಅಥವಾ ಕಾಯಿಮಾನಿಯಲ್ಲಿಳಿದು ಅಲ್ಲಿಂದ ನಡೆದುಕೊಂಡು ಹೋಗಬಹುದಾಗಿದೆ.  ಅಥವಾ ಶ್ರೀಮಂಗಲಕ್ಕೆ ತೆರಳಿ ಅಲ್ಲಿಂದ ಬಾಡಿಗೆ ವಾಹನಗಳಲ್ಲಿಯೂ ತೆರಳಬಹುದು.

ಈಗ ಕೊರೊನಾ ಸಮಯವಾಗಿರುವ ಕಾರಣ ರೆಸಾರ್ಟ್ ಗಳ ಬಗ್ಗೆ ಮೊದಲೇ ವಿಚಾರಿಸಿ ಮತ್ತು ನಿಮ್ಮ ಸುರಕ್ಷತೆ ಬಗ್ಗೆ ಕೂಡ ಗಮನ ಹರಿಸಿ.