ಅಗ್ರಹಾರ ಬಾಚಹಳ್ಳಿಯಲ್ಲಿ ಶ್ರೀಬಾಚಾಳಮ್ಮ ಬ್ರಹ್ಮರಥೋತ್ಸವ

ಅಗ್ರಹಾರ ಬಾಚಹಳ್ಳಿಯಲ್ಲಿ ಶ್ರೀಬಾಚಾಳಮ್ಮ ಬ್ರಹ್ಮರಥೋತ್ಸವ

LK   ¦    Apr 20, 2019 05:45:09 PM (IST)
ಅಗ್ರಹಾರ ಬಾಚಹಳ್ಳಿಯಲ್ಲಿ ಶ್ರೀಬಾಚಾಳಮ್ಮ ಬ್ರಹ್ಮರಥೋತ್ಸವ

ಕೃಷ್ಣರಾಜಪೇಟೆ: ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಅಗ್ರಹಾರಬಾಚಹಳ್ಳಿಯ ಗ್ರಾಮದೇವತೆ ಶ್ರೀಬಾಚಾಳಮ್ಮ(ಶ್ರೀಲಕ್ಷ್ಮೀದೇವಿ)ನವರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ನಡೆಯಿತು.

ಈ ಸುಂದರ ಕ್ಷಣಗಳಿಗೆ ರಾಜ್ಯದ ವಿವಿಧ ಊರುಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಸಾಕ್ಷಿಯಾದರು.

ಮಧ್ಯಾಹ್ನ 3 ಗಂಟೆ 5 ನಿಮಿಷಕ್ಕೆ ಸರಿಯಾಗಿ ರಥದಲ್ಲಿ ವಿರಾಜಮಾನರಾಗಿದ್ದ ಬಾಚಾಳಮ್ಮ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ತಹಶೀಲ್ದಾರ್ ಎಂ.ಶಿವಮೂರ್ತಿ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಉಘೇ ಉಘೇ ಬಾಚಾಳಮ್ಮ... ಉಘೇ ಉಕ್ಷ್ಮೀದೇವಿ ಉಘೇ ಉಘೇ ಎಂಬ ಜಯಘೋಷಗಳು ಮೊಳಗಿದವು. ಕಿರಿದಾದ ರಸ್ತೆಗಳು, ಹೊಲದ ಜಮೀನಿನ ಬದುಗಳನ್ನು ಹತ್ತಿ ಇಳಿದು ಯಾವುದೇ ತೊಂದರೆಗಳಿಲ್ಲದೇ ನಿರ್ವಿಘ್ನವಾಗಿ ರಥವು ಸಾಗಿತು.

ಬಾಚಾಳಮ್ಮ ತಾಯಿಯು ಹರಕೆಯನ್ನು ಹೊತ್ತು ಬಂದ ಭಕ್ತರ ಹರಕೆಯನ್ನು ಸ್ವೀಕರಿಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವುದು ಇಲ್ಲಿನ ವಿಶೇಷವಾಗಿದೆ. ಜಾತ್ರಾ ಮಹೋತ್ಸವಗಳು ಹಾಗೂ ಹಬ್ಬ ಹರಿದಿನಗಳಲ್ಲಿ ಹಿಂದೂ ಮುಸ್ಲಿಂ ಎಂಬ ಬೇಧಭಾವವಿಲ್ಲದಂತೆ ಎಲ್ಲರೂ ಒಂದಾಗಿ ಭಾಗವಹಿಸಿ ಹಬ್ಬದೂಟವನ್ನು ಸವಿಯುವುದು ಇಲ್ಲಿನ ಪದ್ಧತಿಯಾಗಿದೆ. ರಥೋತ್ಸವಕ್ಕೆ ಆಗಮಿಸಿರುವ ಎಲ್ಲಾ ಭಕ್ತರಿಗೆ ಪುಳಿಯೊಗರೆ ಮತ್ತು ಮೊಸರನ್ನವನ್ನು ಪ್ರಸಾದವನ್ನಾಗಿ ನೀಡಲಾಯಿತು.