ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಶಾಸಕ ಅಪ್ಪಚ್ಚುರಂಜನ್ 

ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಶಾಸಕ ಅಪ್ಪಚ್ಚುರಂಜನ್ 

CI   ¦    Oct 17, 2020 05:17:52 PM (IST)
ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಶಾಸಕ ಅಪ್ಪಚ್ಚುರಂಜನ್ 

ಮಡಿಕೇರಿ: ಪೊಲೀಸರ ಮನವಿಯನ್ನು ದಿಕ್ಕರಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ತೀರ್ಥೋದ್ಭವ ವೀಕ್ಷಣೆಗೆ ಭಕ್ತರಿಗೆ ಅವಕಾಶ ಕಲ್ಪಿಸಿಕೊಟ್ಟ ಪ್ರಸಂಗ ತಲಕಾವೇರಿಯಲ್ಲಿ ನಡೆಯಿತು.

ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತೀರ್ಥೋದ್ಭವದ ಸಂದರ್ಭ ತಲಕಾವೇರಿ ಕ್ಷೇತ್ರಕ್ಕೆ ಸೀಮಿತ ಭಕ್ತರ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಬರುವವರು ಕೋವಿಡ್ ಪರೀಕ್ಷೆ ಮಾಡಿಸಿದ ದೃಢೀಕರಣ ಪತ್ರ ತರಬೇಕೆನ್ನುವ ನಿಯಮವನ್ನು ಕೂಡ ಜಿಲ್ಲಾಡಳಿತ ರೂಪಿಸಿತ್ತು. ಇದೇ ಕಾರಣಕ್ಕೆ ಪೊಲೀಸ್ ಇಲಾಖೆ ಬಿಗಿ ಬಂದೋ ಬಸ್ತ್ ಕೈಗೊಂಡು ಗೇಟ್ ಮತ್ತು ಬ್ಯಾರಿಕೇಡ್ ಗಳನ್ನು ಅಳವಡಿಸಿತ್ತು.

ಮಡಿಕೇರಿ ಮತ್ತು ದಕ್ಷಿಣ ಕೊಡಗಿನ ಭಕ್ತರು ಸಾಂಪ್ರದಾಯಿಕ ಉಡುಪಿನಲ್ಲಿ ತಲಕಾವೇರಿಗೆ ಆಗಮಿಸಿದರಾದರೂ ಪೊಲೀಸರು ಒಳ ಪ್ರವೇಶಿಸಲು ಅವಕಾಶ ನೀಡಲಿಲ್ಲ. ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಹಾಗೂ ಜಿ.ಪಂ ಸದಸ್ಯೆ ಕೆ.ಪಿ.ಚಂದ್ರಕಲಾ ಅವರುಗಳು ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದರು.

ಆದರೆ ಪ್ರಯೋಜನವಾಗದೆ ಇದ್ದಾಗ ಸ್ಥಳಕ್ಕೆ ಬಂದ ಶಾಸಕ ಅಪ್ಪಚ್ಚುರಂಜನ್ ಅವರು ಪೊಲೀಸರ ತಡೆಯನ್ನು ದಾಟಿ ಒಳ ಪ್ರವೇಶಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಕೋವಿಡ್ ಮಾರ್ಗಸೂಚಿ ಕುರಿತು ಮನವರಿಕೆ ಮಾಡಿಕೊಟ್ಟರೂ “ಅದೆಲ್ಲ ಆಗುವುದಿಲ್ಲ, ಉಸ್ತುವಾರಿ ಸಚಿವರಿಗೆ ನಾನು ಹೇಳುತ್ತೇನೆ” ಎಂದು ಕಾವೇರಿ ಕುಂಡಿಕೆ ಕಡೆ ಸಾಗಿದರು. ಹಲವು ಭಕ್ತರು ಶಾಸಕರನ್ನು ಹಿಂಬಾಲಿಸಿದರು.

ಈ ಸಂದರ್ಭ ಪೊಲೀಸ್ ಅಧಿಕಾರಿ ಮಾತನಾಡಿ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಮತ್ತು ಅಂತರವನ್ನು ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಎಲ್ಲರೂ ಮಾಸ್ಕ್ ಧರಿಸಿ ಬರುವಂತೆ ಭಕ್ತರಿಗೆ ಸೂಚನೆ ನೀಡಿದರು. ನಂತರ ಹರ್ಷೋದ್ಘಾರದೊಂದಿಗೆ ಭಕ್ತ ಸಮೂಹ ಕಾವೇರಿ ತೀರ್ಥೋದ್ಭವದ ಕ್ಷಣವನ್ನು ಕಣ್ತುಂಬಿಕೊಂಡಿತು.