ಕಾಫಿ ಬೆಳೆಗಾರರಿಗೆ ಶಾಶ್ವತ ಪರಿಹಾರ ನೀಡಲು ಒತ್ತಾಯ

ಕಾಫಿ ಬೆಳೆಗಾರರಿಗೆ ಶಾಶ್ವತ ಪರಿಹಾರ ನೀಡಲು ಒತ್ತಾಯ

LK   ¦    Oct 17, 2020 05:55:52 PM (IST)
ಕಾಫಿ ಬೆಳೆಗಾರರಿಗೆ ಶಾಶ್ವತ ಪರಿಹಾರ ನೀಡಲು ಒತ್ತಾಯ

ಬೇಲೂರು: ಇತ್ತೀಚಿನ ದಿನಗಳಲ್ಲಿ ಮಾನವ ಹಾಗೂ ಕಾಡುಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಶಾಶ್ವತ ಪರಿಹಾರವನ್ನು ಒದಗಿಸಬೇಕು ಎಂದು ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೊಚ ಅನಂತಸುಬ್ಬರಾಯ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಸನ ಜಿಲ್ಲೆಯಲ್ಲಿ ಆಲ್ದೂರು, ಸಕಲೇಶಪುರ, ಅರಕಲಗೂಡು, ಬೇಲೂರು ತಾಲೂಕಿನಲ್ಲಿ ಕಾಫಿ ಬೆಳೆಗಾರರು ಹಾಗೂ ರೈತರು ಕಾಡು ಪ್ರಾಣಿಗಳಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಪ್ರದೇಶವು ಪಶ್ಚಿಮ ಘಟ್ಟದಲ್ಲಿರುವುದರಿಂದ ಇದು ಸೂಕ್ಷ್ಮ ಪ್ರದೇಶ ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಈಗಾಗಲೇ ಆನೆಗಳ ಹಾವಳಿಯಿಂದಾಗಿ ಇಲ್ಲಿಯ ಬೆಳೆಗಾರರು ಸಂಪೂರ್ಣ ನಲುಗುತ್ತಿದ್ದಾರೆ.

ಅಲ್ಲದೆ ಈಗಾಗಲೇ ರಾಜ್ಯ ಸರ್ಕಾರ ಯಾವುದೇ ಕಾಮಗಾರಿ ಎತ್ತಿನಹೊಳೆಯಂತ ಹಲವಾರು ಯೋಜನೆಗಳನ್ನು  ನೀಡುವಾಗ ಈ ಭಾಗಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗೆ ಅನುಮತಿ ನೀಡಬೇಕು. ಈಗ ನಡೆಯುತ್ತಿರುವ ಕಾಮಗಾರಿಯಿಂದ ಬರುವ ಶಬ್ಧದಿಂದಾಗಿ ಕೇವಲ ಆನೆಗಳಲ್ಲದೆ ವನ್ಯಪ್ರಾಣಿಗಳು ಕಾಡನ್ನು ಬಿಟ್ಟು ನಾಡಿಗೆ ಬರುವಂತಾಗಿದೆ. ರೈತರು ಹಾಗೂ ಕಾಫಿ ಬೆಳೆಗಾರರಿಗೆ ಬೆಳೆ ಮತ್ತು ಆಸ್ತಿ ನಷ್ಟದ ಪರಿಹಾರ ಸಮವಾಗಿ ವಿತರಿಸುತ್ತಿಲ್ಲ. ಕಾಫಿ ಬೆಳೆಗಾರರ ಗಿಡಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಧನಾತ್ಮಕ ಧನ ಎಂದು ಪರಿಹಾರ ನೀಡುತ್ತಿರುವುದು ಸರಿಯಲ್ಲ. ಅದನ್ನು ಗಿಡದ ಅನುಗುಣಕ್ಕಾಗಿ ನಷ್ಟ ವನ್ನು ಗಮನದಲ್ಲಿಟ್ಟುಕೊಂಡು ಪರಿಹಾರವನ್ನು ಹೆಚ್ಚು ನೀಡಬೇಕು. ಈಗಾಗಲೇ ನಮ್ಮ ಜಿಲ್ಲೆಯಲ್ಲಿ 50-60 ಆನೆಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಕಾಡಿಗೆ ಅಟ್ಟುವ ಕೆಲಸ ಆಗಬೇಕು. 2010 ರಿಂದ ಇಲ್ಲಿಯವರೆಗೂ ಸುಮಾರು 41 ಜನರು ಕಾಡಾನೆಗಳ ದಾಳಿಗೆ ಸಾವನ್ನಪ್ಪಿದ್ದಾರೆ. ಆದ್ದರಿಂದ ತಕ್ಷಣವೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಆನೆ ಕಾರಿಡಾರ್ ಯೋಜನೆಯ ಬಗ್ಗೆ ಭರವಸೆ ನೀಡುವ ಬದಲು ಅದರಿಂದ ಏನು ಉಪಯೋಗ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.ಇಡೀ ಜಿಲ್ಲೆಯಲ್ಲಿ ಬೆಳೆಗಾರರರು ಕಾಡನ್ನು  ನಾಶಮಾಡಿ ಯಾರೂ ಸಹ ಒತ್ತುವರಿ ಮಾಡಿಲ್ಲ ಎಂದು ತಿಳಿಸಿದರು.

ಬೆಳೆಗಾರರ ಹಾಗೂ ಮಾನವ, ಕಾಡುಪ್ರಾಣಿಗಳ ಸಂಘರ್ಷ ಕುರಿತಂತೆ ಸಮಿತಿಯ ಸಂಚಾಲಕ ರೋಹಿತ್ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ  ತಾಲೂಕು ಕಾಫಿ ಬೆಳೆಗಾರ ಸಂಘದ ಅಧ್ಯಕ್ಷ ಗೋವಿಂದಶೆಟ್ಟಿ, ಅರೇಹಳ್ಳಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಖಲೀಂ ಮಹಮ್ಮದ್, ತಾಲೂಕು ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಮನು ಹಾಜರಿದ್ದರು.