ಮಳವಳ್ಳಿಯ ದೇವಿಪುರದಲ್ಲಿ ನೀರಿಗೆ ಪರದಾಟ!

ಮಳವಳ್ಳಿಯ ದೇವಿಪುರದಲ್ಲಿ ನೀರಿಗೆ ಪರದಾಟ!

Jul 20, 2017 11:05:29 AM (IST)
ಮಳವಳ್ಳಿಯ ದೇವಿಪುರದಲ್ಲಿ ನೀರಿಗೆ ಪರದಾಟ!

ಮಂಡ್ಯ: ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ]ಮಳವಳ್ಳಿ ತಾಲೂಕಿನ ದೇವಿಪುರದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕೊಡ ಹಿಡಿದು ಅಲೆಯುವಂತಾಗಿದೆ. ಇದಕ್ಕೆ ಕಾರಣ ತಳಗವಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 22 ಲಕ್ಷ ರೂ. ವೆಚ್ಚದಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆಯನ್ನು ಕಲ್ಪಿಸಿದ್ದರೂ ಗ್ರಾಮ ಪಂಚಾಯಿತಿ ದೇವಿಪುರಕ್ಕೆ ಸೂಕ್ತ ಪೈಪ್ ಲೈನ್ ಅಳವಡಿಸದಿರುವುದೇ ನೀರಿಗೆ ಹಾಹಾಕಾರವುಂಟಾಗಲು ಕಾರಣವಾಗಿದೆ ಎನ್ನಲಾಗಿದೆ.

ದೇವಿಪುರದಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ಇದರಿಂದ ಗ್ರಾಮಸ್ಥರು ನೀರಿಗಾಗಿ ಕೊಡ ಹಿಡಿದು ಎಲ್ಲೆಂದರಲ್ಲಿ ಅಲೆಯುವಂತಾಗಿದೆ. ಹಲವರು ಅಕ್ಕಪಕ್ಕದ ಜಮೀನುಗಳಿಗೆ ತೆರಳಿ ಕಾಡಿ ಬೇಡಿ ನೀರನ್ನು ತರುತ್ತಿದ್ದಾರೆ. ತಳಗವಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನೀರು ನೀಡಲಾಗಿದೆ. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿಯವರು ಆಯಾ ಗ್ರಾಮಕ್ಕೆ ಪೈಪ್ಲೈನ್ ಅಳವಡಿಸಿ ನೀರು ಸರಬರಾಜು ಮಾಡಬೇಕಿದೆ ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಅಧ್ಯಕ್ಷರ ನಿರ್ಲಕ್ಷ್ಯತೆಯಿಂದಾಗಿ ಆ ಕೆಲಸವಾಗಿಲ್ಲ ಪರಿಣಾಮ ದೇವಿಪುರ ಗ್ರಾಮಕ್ಕೆ ಕುಡಿಯುವ ನೀರು ಬಾರದಂತಾಗಿದೆ.

ಬೆಳಿಗ್ಗೆ ಎದ್ದರೆ ನೀರಿಗಾಗಿ ಹುಡುಕಾಟ ನಡೆಸುವುದು ನಮ್ಮ ಕೆಲಸವಾಗಿದೆ. ಗ್ರಾಮದಲ್ಲಿ ನೀರು ಸರಬರಾಜಾಗುತ್ತಿಲ್ಲ ಎಂಬುದು ಗೊತ್ತಿದ್ದರೂ ಅಧ್ಯಕ್ಷರಾಗಲೀ, ಸದಸ್ಯರಾಗಲೀ ಇತ್ತ ಗಮನ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ದೇವಿಪುರ ಗ್ರಾಮದ ಜನರು ಕುಡಿಯುವ ನೀರಿಲ್ಲದೆ ಪ್ರತಿದಿನ ಅಕ್ಕಪಕ್ಕದ ಜಮೀನಿನ ಬೋರ್ವೆಲ್ಗಳಿಂದ ನೀರು ತಂದು ಕುಡಿಯುವಂತಾಗಿದೆ ಎಂದು ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಕ್ರಮಕೈಗೊಂಡು ನೀರು ಒದಗಿಸುವಂತೆ ಜಿ.ಪಂ. ವಿರೋಧ ಪಕ್ಷದ ನಾಯಕ ಹನುಮಂತು ಒತ್ತಾಯಿಸಿದ್ದಾರೆ.