ಕಲಬುರಗಿ ಜಿಲ್ಲೆಯಲ್ಲಿ ಮೇ 20ರಿಂದ ಸಂಪೂರ್ಣ ಲಾಕ್‌ಡೌನ್

ಕಲಬುರಗಿ ಜಿಲ್ಲೆಯಲ್ಲಿ ಮೇ 20ರಿಂದ ಸಂಪೂರ್ಣ ಲಾಕ್‌ಡೌನ್

May 19, 2021 07:09:41 AM (IST)
ಕಲಬುರಗಿ ಜಿಲ್ಲೆಯಲ್ಲಿ ಮೇ 20ರಿಂದ ಸಂಪೂರ್ಣ ಲಾಕ್‌ಡೌನ್

ಕಲಬುರಗಿ, ; ಕೋವಿಡ್ 2ನೆ ಅಲೆ ನಿಯಂತ್ರಣಕ್ಕಾಗಿ ಕಲಬುರಗಿ ಜಿಲ್ಲೆಯಲ್ಲಿ ಮೂರು ದಿನಗಳ ಕಠಿಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮೇ 18ರಂದು 548 ಹೊಸ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7602.ಕಲಬುರಗಿ ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಈ ಕುರಿತು ಮಾಹಿತಿ ನೀಡಿದ್ದಾರೆ. "ಜಿಲ್ಲೆಯಾದ್ಯಂತ ಮೇ 20ರ ಬೆಳಗ್ಗೆ 6 ಗಂಟೆಯಿಂದ ಮೇ 23ರ ಬೆಳಗ್ಗೆ 6 ಗಂಟೆ ವರೆಗೆ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ" ಎಂದು ಹೇಳಿದ್ದಾರೆ.
ಅತ್ಯಗತ್ಯ ವಸ್ತುಗಳಾದ ಹಾಲು, ಮೊಟ್ಟೆ, ಹೋಟೆಲ್‌ನಲ್ಲಿ ಊಟ ಮತ್ತು ಉಪಹಾರ ಪಾರ್ಸಲ್ ಸೇವೆ ಲಭ್ಯವಿರಲಿವೆ. ಆಸ್ಪತ್ರೆ, ಔಷಧಿ ಅಂಗಡಿಗಳು, ಅಂಬುಲೆನ್ಸ್, ಅಗ್ನಿಶಾಮಕ, ಪೆಟ್ರೋಲ್ ಬಂಕ್ ಹಾಗೂ ಇತರೆ ತುರ್ತು ವೈದ್ಯಕೀಯ ಸೇವೆಗಳು ಕಾರ್ಯನಿರ್ವಹಿಸಲಿವೆ. ರೈಸ್ ಮಿಲ್, ದಾಲ್ ಮಿಲ್ ಒಳಗಿನ ಚಟುವಟಿಕೆಗಳಿಗೆ ಸ್ಥಳದಲ್ಲಿಯೇ ಲಭ್ಯವಿರುವ ಕಾರ್ಮಿಕರಿಂದ ಕಾರ್ಯನಿರ್ವಹಣೆಗೆ ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಹೊರಗಿನಿಂದ ಕಾರ್ಮಿಕರನ್ನು ಕರೆದುಕೊಂಡು ಬರಬಾರದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಸಾರಿಗೆ ಸೇವೆ ನಿರ್ಬಂಧಿಸಲಾಗಿದೆ. ತುರ್ತು ವೈದ್ಯಕೀಯ ಸಂದರ್ಭದಲ್ಲಿ ಖಾಸಗಿ ವಾಹನಗಳಲ್ಲಿ ವೈದ್ಯಕೀಯ ದಾಖಲೆಗಳನ್ನು ಚೆಕ್ ಪೋಸ್ಟ್‌ಗಳಲ್ಲಿ ತೋರಿಸಿ ಪ್ರಯಾಣಿಸಬಹುದು.
ಉಳಿದಂತೆ ಖಾಸಗಿ ವಾಹನಗಳ ಬಳಕೆಗೆ ಅವಕಾಶವಿಲ್ಲ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್, ನಾನ್ ಕೋವಿಡ್ ರೋಗಿಗಳ ಆರೈಕೆಗೆ ಸಂಬಂಧಪಟ್ಟ ಇಬ್ಬರು ವ್ಯಕ್ತಿಗಳಿಗೆ ಅವಕಾಶ ನೀಡಿದ್ದು, ಸಂಬಂಧಿಸಿದ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳಿಂದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆಯಬೇಕು.ಎಲ್ಲಾ ರೀತಿಯ ಸರಕು ಸಾಗಾಣಿಕೆಗೆ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಅನುಮತಿ ಇದೆ. ಕೃಷಿ ಸಂಬಂಧಿತ ಚಟುವಟಿಕೆಗಳು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ. ಬೀಜ, ರಸಗೊಬ್ಬರ, ಸಾಗಾಣಿಕೆ ಸಂಬಂಧ ರೈಲ್ವೆ ರೇಕ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನುಮತಿ ಇದೆ.
ಖಾನಾವಳಿ, ಹೋಟೆಲ್‌ಗಳಿಂದ ಮನೆ-ಮನೆಗೆ ಪಾರ್ಸಲ್ ಮೂಲಕ ಊಟ-ಉಪಹಾರ ಸರಬರಾಜು ಮಾಡಲು ಅವಕಾಶವಿದೆ. ನಗರ-ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್‌ ದಿನ ಪೂರ್ತಿ ತರೆಯಲು ಅನುಮತಿ ನೀಡಲಾಗಿದೆ. ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರುಗಳು ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳುವವರಿಗೆ ಊಟದ ವ್ಯವಸ್ಥೆಯನ್ನು ಮಾಡಲಿದ್ದಾರೆ.ಕಂದಾಯ, ಗ್ರಾಮೀಣಾಭಿವೃದ್ದಿ, ನಗರ ಸ್ಥಳೀಯ ಸಂಸ್ಥೆಗಳು, ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಾರಾಗೃಹ ಸೇವೆಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಕೋವಿಡ್ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಚೇರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂ ವೈದ್ಯಕೀಯ ಹಾಗೂ ತುರ್ತು ಸೇವೆಗಳ ಎಲ್ಲಾ ಅಧಿಕಾರಿಗಳು/ ಸಿಬ್ಬಂದಿಗಳ ಕರ್ತವ್ಯಕ್ಕಾಗಿ ಓಡಾಟ ನಡೆಸಬಹುದು.