7 ವರ್ಷ ಶಿಕ್ಷೆಗೊಳಗಾಗಿರುವ ಖೈದಿಗಳ ಬಿಡುಗಡೆಗೆ ಚಿಂತನೆ

7 ವರ್ಷ ಶಿಕ್ಷೆಗೊಳಗಾಗಿರುವ ಖೈದಿಗಳ ಬಿಡುಗಡೆಗೆ ಚಿಂತನೆ

LK   ¦    May 22, 2020 06:09:07 PM (IST)
7 ವರ್ಷ ಶಿಕ್ಷೆಗೊಳಗಾಗಿರುವ ಖೈದಿಗಳ ಬಿಡುಗಡೆಗೆ ಚಿಂತನೆ

ಮದ್ದೂರು: ಕೊರೋನಾ ಸೋಂಕು ಖೈದಿಗಳಿಗೆ ಮತ್ತು ಜೈಲು ಸಿಬ್ಬಂದಿಗೆ ಹರಡುವುದನ್ನು ತಪ್ಪಿಸುವ ಸಲುವಾಗಿ 7 ವರ್ಷದೊಳಗೆ ಶಿಕ್ಷೆಗೊಳಗಾಗಿರುವ ಖೈದಿಗಳನ್ನು ಕಾನೂನಿನಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸರ್ಕಾರ ಚಿಂತನೆ ನಡೆಸಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಿಂದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ತೆರಳುತ್ತಿದ್ದ ವೇಳೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.

ಕೋರೋನಾ ಸೋಂಕು ಇರುವ ಕಾರಣ ಹೊಸದಾಗಿ ವಿಚಾರಣಾಧೀನ ಖೈದಿಗಳು ಕಾರಾಗೃಹಕ್ಕೆ ಬರುವ ಹಿನ್ನಲೆಯಲ್ಲಿ ಹಾಲಿ ಖೈದಿಗಳು ಮತ್ತು ಪೆÇಲೀಸರಿಗೆ ಸೋಂಕು ತಗಲುವ ಭೀತಿ ಇರುವುದರಿಂದ 5 ರಿಂದ 7 ವರ್ಷಗಳೊಳಗೆ ಶಿಕ್ಷೆಗೊಳಗಾಗಿರುವ ಖೈದಿಗಳನ್ನು ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದರು.

ಕೊಲೆ ಪ್ರಯತ್ನ, ಮಾರಾಕಾಸ್ತ್ರಗಳಿಂದ ಹಲ್ಲೆ ಹಾಗೂ ಆಕಸ್ಮಿಕ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿರುವ ಖೈದಿಗಳು 7 ವರ್ಷಗಳೊಳಗೆ ಶಿಕ್ಷೆಗೊಳಗಾಗಿದ್ದರೆ. ಈ ಖೈದಿಗಳು ಈಗಾಗಲೇ 4 ರಿಂದ 5 ವರ್ಷ ಪೂರೈಸಿರುತ್ತಾರೆ. ಅಂತಹವರನ್ನು ಸನ್ನಡತೆ ಆಧಾರದ ಮೇಲೆ ಕಾನೂನು ಅಡಿಯಲ್ಲಿ ಅಂತಹ ಖೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಕಾನೂನು ಇಲಾಖೆಯ ಅನುಮತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೆ.ಆರ್. ಪೇಟೆ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ಹರಡಿರುವ ಹಿನ್ನಲೆಯಲ್ಲಿ ಈಗಾಗಲೇ ಕ್ವಾರಂಟೈನ್‍ನಲ್ಲಿರುವ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಗಂಟಲದ್ರವ ಪರೀಕ್ಷೆ ಕಡ್ಡಾಯ ಗೊಳಿಸಲಾಗಿದೆ. ಈಗಾಗಲೇ 967 ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ 490 ಮಂದಿಗೆ ಗಂಟಲದ್ರವ ಪರೀಕ್ಷೆಗೊಳಪಡಿಸಲಾಗಿದ್ದು, ಉಳಿದವರಿಗೆ ಶೀಘ್ರ ಪರೀಕ್ಷೆ ಮಾಡಲಾಗುವುದು ಎಂದರು.

ಪೊಲೀಸ್ ಸಿಬ್ಬಂದಿಗೆ ಪಿಪಿಇ ಕಿಟ್, ಸ್ಯಾನಿಟೈಜರ್, ಮಾಸ್ಕ್, ಗ್ಲೌಸ್ ನೀಡಲಾಗಿದೆ. ಅವರ ಕುಟುಂಬದ ಆರೋಗ್ಯದ ಬಗ್ಗೆಯೂ ಗಮನ ಹರಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮಂಡ್ಯ, ಪಾಂಡವಪುರ, ಕೆ.ಆರ್. ಪೇಟೆ, ಮಳವಳ್ಳಿ ಪ್ರಕರಣದಿಂದ ಕಂಗೆಟ್ಟಿರುವ ಸರ್ಕಾರ ಚೆಕ್ ಪೋಸ್ಟ್ ಮೂಲಕ ನುಸುಳಿ ಬರುವವರನ್ನು ಹಿಡಿದು ಪರೀಕ್ಷೆ ಮಾಡಿ ಪರಿಶೀಲನೆ ನಂತರ ಕ್ವಾರಂಟೈನ್ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ರಾತ್ರಿ ವೇಳೆ ಚೆಕ್ ಪೋಸ್ಟ್ ಬಿಟ್ಟು ವಾಮ ಮಾರ್ಗದಲ್ಲಿ ಸುಮಾರು 20 ರಿಂದ 22 ಮಂದಿ ನುಸುಳಿ ಬಂದಿದ್ದಾರೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಕೊರೋನಾ ವಾರಿಯರ್ಸ್ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಹಲ್ಲೆಕೋರರಿಗೆ 3 ವರ್ಷ ಕಠಿಣ ಶಿಕ್ಷೆಗೊಳಪಡಿಸಲು ಸರ್ಕಾರ ತೀರ್ಮಾನ ಕೈಗೊಂಡಿದ್ದು, ಶೀಘ್ರ ಆದೇಶ ಹೊರಬೀಳಲಿದೆ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ, ಎಂ.ಜೆ. ಪೃಥ್ವಿ, ಸಿಪಿಐ ಕೆ.ಆರ್. ಪ್ರಭಾಕರ್, ಪಿಎಸ್‍ಐಗಳಾದ ಮಂಜೇಗೌಡ, ಮೋಹನ್‍ಪಟೇಲ್, ಪ್ರೊಬೆಷನರಿ ಪಿಎಸ್‍ಐ ಡಿ. ರವಿಕುಮಾರ್ ಹಾಗೂ ಸಿಬ್ಬಂದಿ ಇದ್ದರು.