ಬಿಎಲ್‍ಓಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು: ಡಾ.ಎಂ.ವಿ.ವೆಂಕಟೇಶ್

ಬಿಎಲ್‍ಓಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು: ಡಾ.ಎಂ.ವಿ.ವೆಂಕಟೇಶ್

LK   ¦    Nov 21, 2020 08:09:07 PM (IST)
ಬಿಎಲ್‍ಓಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು: ಡಾ.ಎಂ.ವಿ.ವೆಂಕಟೇಶ್

ಮಂಡ್ಯ: ಬಿಎಲ್‍ಓಗಳು ದಕ್ಷತೆಯಿಂದ, ಪ್ರಾಮಾಣಿಕವಾಗಿ, ಕಾಲಾಮಿತಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ  ದೇಶದ ಪ್ರಜಾಪ್ರಭುತ್ವ ಗೆಲ್ಲಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಉಪವಿಭಾಗಾಧಿಕಾರಿಗಳ ಕಚೇರಿ, ತಾಲೂಕು ದಂಡಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ನಡೆದ  ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನ್ಯಾಯ ಸಮ್ಮತವಾದಂತಹ, ಪಾರದರ್ಶಕವಾದಂತಹ ಚುನಾವಣೆ ನಡೆಯಬೇಕಾದರೆ ಪರಿಶುದ್ಧವಾದ, ದೋಷರಹಿತವಾದ ಮತದಾರರ ಪಟ್ಟಿ ಅತ್ಯವಶ್ಯಕ ಮತ್ತು ಈ ಮತದಾರರ ಪಟ್ಟಿಯನ್ನು ತಯಾರಿಸುವಂತಹ ಜವಬ್ದಾರಿಯುತವಾದ ಕೆಲಸ ಜಿಲ್ಲೆಯ ಇಆರ್‍ಓ ಮತ್ತು ಎಆರ್‍ಓ ಗಳಿಗಾರೂ ಅವರ ಪರವಾಗಿ ಗ್ರಾಮ ಮಟ್ಟದಲ್ಲಿ  ಕೆಲಸ ಮಾಡುವ ಜವಬ್ದಾರಿ  ಬಿಎಲ್‍ಓಗಳ ಕಾರ್ಯವಾಗಿರುತ್ತದೆ ಎಂದರು.

ನಮೂನೆ 6ರಲ್ಲಿ ಮತದಾರರ ಪಟ್ಟಿಯ ಸೇರ್ಪಡೆ ಕಾಲಾನುಕಾಲಕ್ಕೆ ಸಮರ್ಪಕವಾಗಿದ್ದರೆ ಮತದಾರರ ಪಟ್ಟಿಯನ್ನು ಪರೀಕ್ಷಿತಗೊಳಿಸಲು ಮತ್ತು ದೋಷರಹಿತಗೊಳಿಸಲು ಸಾಧ್ಯವಾಗುತ್ತದೆ  ಮತ್ತು ಬಿಎಲ್‍ಓಗಳು ಚುನಾವಣಾ ಆಯೋಗ ನೀಡುವಂತಹ ನಿರ್ದೇಶನಗಳನ್ನು, ಜವಬ್ದಾರಿಗಳನ್ನು ಕಾಲಾನುಕಾಲಕ್ಕೆ ತಿಳಿದುಕೊಳ್ಳಬೇಕು ಎಂದು ಸೂಚಿಸಿದರು.

ಗ್ರಾಮ ಮಟ್ಟದಲ್ಲಿ ಮರಣ ಹೊಂದಿದ ವ್ಯಕ್ತಿಗಳ ಪಟ್ಟಿಯನ್ನು ತೆಗೆದುಕೊಂಡು ನಮೂನೆ 17ರಲ್ಲಿ ಅವರನ್ನು ಮತದಾರರ ಪಟ್ಟಿಯಿಂದ ರದ್ದುಗೊಳಿಸಿಬೇಕು, ಇಲ್ಲದಿದ್ದರೆ  ನಕಲಿ ಮತದಾರರಿಗೆ ಅವಕಾಶ ಮಾಡಿದಂತಾಗುತ್ತದೆ ಈ ಕಾರ್ಯಕ್ಕೆ ಬಿಎಲ್‍ಓಗಳು ಅನುವು ಮಾಡಿಕೊಡಬಾರದು ಎಂದು ಹೇಳಿದರು.

ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಸೆಕ್ಷನ್ ಐಪಿಸಿ 180, 189,190 ರಂತೆ ಯಾವ ವ್ಯಕ್ತಿ ತನ್ನ ಹೆಸರನ್ನು ಎರಡು ಕಡೆ  ಇಟ್ಟುಕೊಂಡಿರುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಮತ್ತು 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆಯು ಇರುವುದು ಹಾಗೂ ಪುನರಾವರ್ತನೆ ಗೊಂಡಿರುವ ಮತದಾರರನ್ನು ತೆಗೆದು ಹಾಕಬೇಕು ಎಂದರು.

ಮತದಾರರ ಪಟ್ಟಿಯಲ್ಲಿ ಕೆಲವು ವ್ಯಕ್ತಿಗಳ ಫೋಟೋ, ಹೆಸರಿನ ಅಕ್ಷರದೋಷ, ವಯಸ್ಸು ಮತ್ತು ಲಿಂಗ, ತಪ್ಪಾಗಿರುವುದರಿಂದ ಅವುಗಳನ್ನು ಸರಿಪಡಿಸಲು ಯೋಜನೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಶೇಷ ನೋಂದಣಿ ಪ್ರಕ್ರಿಯೆಯು ನಡೆಯುತ್ತಿದ್ದು ನ.18 ರಂದು ಕರಡು ಮತದಾರರ ಪಟ್ಟಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳಿಗೆ ಕಾಲಾವಶವಿದ್ದು ಆಕ್ಷೇಪಣೆಗಳನ್ನು ನೀಡುವುದನ್ನು ಸ್ವೀಕಾರ ಮಾಡಿ ಅಲ್ಲಿ ಸ್ಪೀಕಿಂಗ್ ಆರ್ಡರ್ ಮಾಡಬೇಕು ಮತ್ತು ಲಿಖಿತ ಆದೇಶವನ್ನು ಪರಿಪೂರ್ಣವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮ ಪಂಚಾಯಿತಿಯ ಚುನಾವಣೆಯು ಹತ್ತಿರವಿರುವುದರಿಂದ ಯಾವುದೇ ಸಂದರ್ಭದಲ್ಲಿಯೂ ಚುನಾವಣೆ ಘೋಷಣೆ ಆಗುವುದರ ಸಾಧ್ಯತೆಯಿರುವುದರಿಂದ ಪೂರಕ ಪಟ್ಟಿ 4ರಲ್ಲು ಕೂಡ  ಸಮಪರ್ಕವಾಗಿ ನಿಗಾವಹಿಸಬೇಕು ಎಂದರು.

ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಒಂದು ಮತವು ಕೂಡ ಮುಖ್ಯವಾಗಿರುವುದರಿಂದ ಯಾವುದೇ ಆಮಿಷಕ್ಕೆ, ಒತ್ತಡಕ್ಕೆ ಒಳಗಾಗದೆ ಸ್ಪೀಕಿಂಗ್ ಆರ್ಡರ್ ಮಾಡುವ ಮೂಖಾಂತರ ಸೇರ್ಪಡೆಗೊಳಿಸಲು ಯೋಜನೆ ಮಾಡಿಕೊಳ್ಳಬೇಕೆಂದ ಅವರು,   ದೋಷರಹಿತವಾದ ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರ ಪಡಿಸಲು ಜನವರಿ 14 ಕೊನೆಯ ದಿನಾಂಕವಾಗಿರುತ್ತದೆ ಮತ್ತು ಅಂತಿಮ ಪಟ್ಟಿಯನ್ನು 18ನೇ ತಾರೀಕು ಪ್ರಚುರ ಪಡಿಸುವುದಾಗಿ ಹೇಳಿದರು.

ಮತದಾರರ ಪಟ್ಟಿಯಲ್ಲಿನ ಕ್ರಮಸಂಖ್ಯೆ 1 ರಿಂದ ಕೊನೆಯ ಕ್ರಮಸಂಖ್ಯೆಯವರೆಗೂ ಅಭ್ಯಾಸ ಮಾಡುವ ಮೂಲಕ  ವ್ಯಕ್ತಿಯು ಎಲ್ಲಿ ವಾಸವಾಗಿದ್ದಾರೆ, ಜೀವಂತವಾಗಿದ್ದಾರೆಯೇ, ಎಪಿಕ್ ಕಾರ್ಡ್ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಎಪಿಕ್ ಕಾರ್ಡ್ ಕಳೆದುಕೊಂಡಿರುವವರ ಹತ್ತಿರ 30 ರೂ ಪಡೆದು ನೀಡಿ ಮತ್ತು ಎಲ್ಲರ ಹತ್ತಿರ ಎಪಿಕ್ ಕಾರ್ಡ್ ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಕಾರ್ಯಾಗಾರದಲ್ಲಿ ಮಂಡ್ಯ ಉಪವಿಭಾಗಾಧಿಕಾರಿಗಳಾದ ನೇಹಾ ಜೈನ್, ನಗರಸಭೆ ಆಯುಕ್ತರಾದ ಲೋಕೇಶ್, ಮಂಡ್ಯ ತಹಶೀಲ್ದಾರರಾದ ಚಂದ್ರಶೇಖರ್ ಶಂ.ಗಾಲಿ ಮತ್ತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.