ತ್ಯಾಜ್ಯ ವಿಲೇವಾರಿ ಘಟಕಗಳ ಸಮರ್ಪಕ ನಿರ್ವಹಣೆಯಾಗಬೇಕು: ಪ್ರತಾಪ್ ಸಿಂಹ

ತ್ಯಾಜ್ಯ ವಿಲೇವಾರಿ ಘಟಕಗಳ ಸಮರ್ಪಕ ನಿರ್ವಹಣೆಯಾಗಬೇಕು: ಪ್ರತಾಪ್ ಸಿಂಹ

CI   ¦    Jan 14, 2020 09:48:41 PM (IST)
ತ್ಯಾಜ್ಯ ವಿಲೇವಾರಿ ಘಟಕಗಳ ಸಮರ್ಪಕ ನಿರ್ವಹಣೆಯಾಗಬೇಕು: ಪ್ರತಾಪ್ ಸಿಂಹ

ಮಡಿಕೇರಿ: ಕೊಡಗನ್ನು ಸ್ವಚ್ಛ, ಸುಂದರ, ಪರಿಸರ ಸ್ನೇಹಿ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ 104 ಗ್ರಾ.ಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಗುರುತಿಸುವಂತೆ ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಅವರು ಸೂಚಿಸಿದ್ದಾರೆ.

ನಗರದ ಜಿ.ಪಂ. ನೂತನ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ತ್ಯಾಜ್ಯ ವಿಲೇವಾರಿ ಘಟಕವಿದ್ದಲ್ಲಿ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಪ್ರತಾಪ್ ಸಿಂಹ ಅವರು ಹೇಳಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು ಸ್ವಂತ ಕಟ್ಟಡ ಇದೆಯೇ ಎಂದು ಮಾಹಿತಿ ಪಡೆದ ಸಂಸದರು ಗ್ರಾ.ಪಂ.ಗಳಿಗೆ ಸ್ವಂತ ಕಟ್ಟಡ ಇರಬೇಕು ಎಂದು ಅವರು ಸೂಚಿಸಿದರು.

ವಸತಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಸಂಸದರು ಬಸವ, ಅಂಬೇಡ್ಕರ್ ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಹಾಗೆಯೇ ಪ್ರಕೃತಿ ವಿಕೋಪದಡಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಸೋಮವಾರಪೇಟೆ ತಾ.ಪಂ. ಇಒ ಸುನೀಲ್ ಕುಮಾರ್ ಸೋಮವಾರಪೇಟೆ ತಾಲ್ಲೂಕಿನಲ್ಲಿ 5 ಸಾವಿರ ವಸತಿ ರಹಿತರು ಇದ್ದಾರೆ. ಹಾಗೆಯೇ ಆರೂವರೆ ಸಾವಿರ ನಿವೇಶನ ರಹಿತರು ಇದ್ದಾರೆ ಎಂದು ಅವರು ಮಾಹಿತಿ ನೀಡಿದರು.