ವೃದ್ಧೆ ತಿಬ್ಬಮ್ಮನ ಕಷ್ಟಕ್ಕೆ ಸ್ಪಂದಿಸುತ್ತಾರಾ ಅಧಿಕಾರಿಗಳು?

ವೃದ್ಧೆ ತಿಬ್ಬಮ್ಮನ ಕಷ್ಟಕ್ಕೆ ಸ್ಪಂದಿಸುತ್ತಾರಾ ಅಧಿಕಾರಿಗಳು?

Jul 19, 2017 11:32:07 AM (IST)
ವೃದ್ಧೆ ತಿಬ್ಬಮ್ಮನ ಕಷ್ಟಕ್ಕೆ ಸ್ಪಂದಿಸುತ್ತಾರಾ ಅಧಿಕಾರಿಗಳು?

ಚಾಮರಾಜನಗರ: ಇಳಿ ವಯಸ್ಸಿನಲ್ಲೂ ಅರ್ಜಿ ಹಿಡಿದುಕೊಂಡು ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವ ಈ ವೃದ್ಧೆಯ ಹೆಸರು ತಿಬ್ಬಮ್ಮ. ಕಳೆದ ಮೂವತ್ತೆಂಟು ವರ್ಷದಿಂದ ಹನೂರು ವ್ಯಾಪ್ತಿಯ ಹಲಗಾಪುರದಲ್ಲಿ ವಾಸವಿರುವ ಈ ವೃದ್ಧೆ ಅಂದಿನಿಂದ ತಮಗೆ ನೀಡಲಾಗಿರುವ ಎರಡು ಎಕರೆ ಜಮೀನಿಗೆ ಖಾತೆ ಮಾಡಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಇದೀಗ ತಾವು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಅಧಿಕಾರಿಗಳು ಪ್ರಭಾವಿ ವ್ಯಕ್ತಿಯೊಬ್ಬರಿಗೆ ಖಾತೆ ಮಾಡಿಕೊಡಲು ಮುಂದಾಗಿದ್ದಾರೆ. ಇದರಿಂದ ಬದುಕು ಬೀದಿಗೆ ಬರುತ್ತದೆಯೇನೋ ಎಂಬ ಭಯ ಆರಂಭವಾಗಿದೆ ಎಂದು ವೃದ್ಧೆ ಅಳಲು ತೋಡಿಕೊಳ್ಳುತ್ತಾ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡುತ್ತಿದ್ದಾರೆ. ಹನೂರು ಕ್ಷೇತ್ರ ವ್ಯಾಪ್ತಿಯ ಬಂಡಳ್ಳಿ ಹೋಬಳಿಗೆ ಒಳಪಡುವ ಹಲಗಾಪುರದಲ್ಲಿ ಕಂದಾಯ ಹಾಗೂ ಭೂಮಾಪನ ಅಧಿಕಾರಿಗಳು 1978-79ನೇ ಸಾಲಿನಲ್ಲಿ ಎಲ್.ಎನ್.ಡಿ 969/2ರಡಿ 15/2ರಲ್ಲಿ ಎರಡು ಎಕರೆ ಜಮೀನನ್ನು ಗ್ರಾಮದ ನಿವಾಸಿ ವೃದ್ಧೆ ತಿಬ್ಬಮ್ಮ ಅವರಿಗೆ ನೀಡಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಅದರಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ತಾವು ಸಾಗುವಳಿ ಮಾಡುತ್ತಿರುವ ಭೂಮಿಗೆ ಖಾತೆ ಮಾಡಿಸಿಕೊಳ್ಳಲು ಈ ವೃದ್ಧೆ ಅಲೆದರೂ ಸಾಧ್ಯವಾಗಿಲ್ಲ. ಆದರೆ ಇದೀಗ ಆಡಳಿತ ಪಕ್ಷದ ಪ್ರಭಾವಿ ವ್ಯಕ್ತಿಯೊಬ್ಬರು ಈ ಜಮೀನಿನ ಮೇಲೆ ಕಣ್ಣಿಟ್ಟಿದ್ದು, ಅಧಿಕಾರಿಗಳ ಮೇಲೆ ಒತ್ತಡ ತಂದು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿದ ತಿಬ್ಬಮ್ಮ ಆತಂಕಗೊಂಡಿದ್ದು, ಗ್ರಾಮಸ್ಥರ ಸಹಕಾರದೊಂದಿಗೆ ದಾಖಲಾತಿಗಳ ಸಮೇತ ಜಿಲ್ಲಾಧಿಕಾರಿಗಳು ಸೇರಿದಂತೆ ಭೂಮಾಪನ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಈ ಬಗ್ಗೆ ತಿಬ್ಬಮ್ಮ ಪರ ಮಾತನಾಡಿರುವ ಗ್ರಾಮಸ್ಥರು ಪೀತ್ರಾರ್ಜಿತ ಸಾಗುವಳಿ ಮಾಡುತ್ತಿರುವ ಜಮೀನನ್ನು ಅಧಿಕಾರಿಗಳು ಹಲವಾರು ವರ್ಷಗಳಿಂದ ತಿಬ್ಬಮ್ಮ ಹೆಸರಿಗೆ ಖಾತೆ ಮಾಡಿಕೊಡದೆ ಅಧಿಕಾರಿಗಳು ಶತಾಯಿಸುತ್ತಿದ್ದು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಗ್ರಾಮದ ಪ್ರಭಾವಿ ವ್ಯಕ್ತಿಯ ಆಮಿಷಕ್ಕೆ ಒಳಗಾಗಿ ಅವರು ಹೆಸರಿಗೆ ಅಧಿಕಾರಿಗಳಿಗೆ ಖಾತೆ ಮಾಡಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.