ಸಾವಿರಾರು ಜನರಿಂದ ಸಾವಿರಾರು ವರ್ಷ ಪ್ರಾಚೀನ ಪಚ್ಚೆಲಿಂಗ ದರ್ಶನ

ಸಾವಿರಾರು ಜನರಿಂದ ಸಾವಿರಾರು ವರ್ಷ ಪ್ರಾಚೀನ ಪಚ್ಚೆಲಿಂಗ ದರ್ಶನ

IK   ¦    Oct 09, 2019 04:54:48 PM (IST)
ಸಾವಿರಾರು ಜನರಿಂದ ಸಾವಿರಾರು ವರ್ಷ ಪ್ರಾಚೀನ ಪಚ್ಚೆಲಿಂಗ ದರ್ಶನ

ಸಾಗರ: ತಾಲೂಕಿನ ಬಂದಗದ್ದೆ ಕೆಳದಿ ರಾಜಗುರು ಹಿರೇಮಠದಲ್ಲಿ ಮಂಗಳವಾರ ಸಹಸ್ರಾರು ಭಕ್ತರು ಇತಿಹಾಸ ಪ್ರಸಿದ್ಧ ಪಚ್ಚೆಲಿಂಗದ ದರ್ಶನ ಪಡೆದರು.

ಸೋಮವಾರ ಶಿವಮೊಗ್ಗ ಬ್ಯಾಂಕ್ ಖಜಾನೆಯಿಂದ ತಂದಿದ್ದ ಪಚ್ಚೆಲಿಂಗವನ್ನು ತಹಸೀಲ್ದಾರ್ ಕಚೇರಿ ಖಜಾನೆಯಲ್ಲಿ ಇರಿಸಿ, ಪೊಲೀಸ್ ಕಾವಲು ಹಾಕಲಾಗಿತ್ತು. ಮಂಗಳವಾರ ಬೆಳಗ್ಗೆ ಪೊಲೀಸ್ ಸರ್ಪಗಾವಲಿನಲ್ಲಿ ತಹಸೀಲ್ದಾರ್ ಕಚೇರಿಯಿಂದ ಕೆಳದಿ-ಬಂದಗದ್ದೆ ರಾಜಗುರು ಹಿರೇಮಠಕ್ಕೆ ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್ ನೇತೃತ್ವದಲ್ಲಿ ಪಚ್ಚೆಲಿಂಗವನ್ನು ತರಲಾಯಿತು.

ಮಂಗಳವಾರ ಬೆಳಗ್ಗೆ ಮಠದಲ್ಲಿ ಶಾಸಕ ಎಚ್.ಹಾಲಪ್ಪ ನೇತೃತ್ವದಲ್ಲಿ ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಪಚ್ಚೆಲಿಂಗವನ್ನು ಶ್ರೀಮಠದ ರೇವಣಸಿದ್ದೇಶ್ವರ ಗದ್ದುಗೆ ಪಕ್ಕ ಇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಇದೇ ಮೊದಲು ಪಚ್ಚೆಲಿಂಗ ದರ್ಶನ ಪಡೆದ ಶಾಸಕ ಹಾಲಪ್ಪ ರುದ್ರಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ.ಮೇಘರಾಜ್, ಸ್ಥಳೀಯ ಮುಖಂಡರು ಸಾಥ್ ನೀಡಿದರು. ನಂತರ ಉಪವಿಭಾಗಾಕಾರಿ ಡಾ.ಎಲ್. ನಾಗರಾಜ್ ಸಹ ಮಠಕ್ಕೆ ಭೇಟಿ ನೀಡಿದರು.

ಸರದಿ ಸಾಲಿನಲ್ಲಿ ದರ್ಶನ: 22 ವರ್ಷಗಳ ನಂತರ ಶ್ರೀಮಠದಲ್ಲಿ ಪುನಃ ಪಚ್ಚೆಲಿಂಗ ದರ್ಶನಕ್ಕೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಬೆಳಗ್ಗೆ 8 ಗಂಟೆಯಿಂದ ದರ್ಶನ ಪ್ರಾರಂಭವಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲದೆ ಉತ್ತರ ಕರ್ನಾಟಕದ ಬಹುತೇಕ ಭಕ್ತರು ಆಗಮಿಸಿ ಪಚ್ಚೆಲಿಂಗ ದರ್ಶನ ಪಡೆದರು. ಹೆಚ್ಚು ಜನಸಂದಣಿ ಇದ್ದ ಹಿನ್ನೆಲೆಯಲ್ಲಿ ಮಠಕ್ಕೆ ಬರುವ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.