ಕೊಲೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರ ಮನೆಗಳಿಗೆ ರಾಹುಲ್ ಗಾಂಧಿ ಭೇಟಿ

ಕೊಲೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರ ಮನೆಗಳಿಗೆ ರಾಹುಲ್ ಗಾಂಧಿ ಭೇಟಿ

SK   ¦    Mar 14, 2019 08:05:37 PM (IST)
ಕೊಲೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರ ಮನೆಗಳಿಗೆ ರಾಹುಲ್ ಗಾಂಧಿ ಭೇಟಿ

ಕಾಸರಗೋಡು: ಕೊಲೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಅವರ ಪೆರಿಯ ಕಲ್ಯೊಟ್ ನಲ್ಲಿರುವ ಮನೆಗಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ತುಂಬಿದರು.

ಕಣ್ಣೂರಿನಿಂದ ಹೆಲಿಕಾಪ್ಟರ್ ಮೂಲಕ ಪೆರಿಯ ಕೇಂದ್ರ ವಿದ್ಯಾಲಯದ ಹೆಲಿಪ್ಯಾಡ್ ನಲ್ಲಿ ಬಂದಿಳಿದ ರಾಹುಲ್ ಗಾಂಧಿ ಅವರು ಕಾರು ಮೂಲಕ ಮಧ್ಯಾಹ್ನ 2.3೦ಕ್ಕೆ ಕಲ್ಯೊಟ್ ನಲ್ಲಿರುವ ಕೃಪೇಶ್ ಮನೆಗೆ ತಲಪಿದರೂ ಹತ್ತು ನಿಮಿಷಕ್ಕೂ ಅಧಿಕ ಸಮಯ ಕೃಪೇಶ್ ಮನೆಯಲ್ಲಿ ಕಳೆದ ರಾಹುಲ್ ಗಾಂಧಿ ಕುಟುಂಬದವರಿಗೆ ಧೈರ್ಯ ತುಂಬಿದರು. ಕೃಪೇಶ್ ಮನೆಯವರಿಂದ ಮಾಹಿತಿ ಪಡೆದರು. ಕೃಪೇಶ್ ಅವರ ಗುಡಿಸಲು ಮನೆಯನ್ನು ಕಂಡು ರಾಹುಲ್ ಗಾಂಧಿ ಮರುಗಿದರು. ಮನೆಯಿಂದ ಹೊರಬಂದ ರಾಹುಲ್ ಗಾಂಧಿಯವರು ಕೃಪೇಶ್ ಕುಟುಂಬಕ್ಕೆ ಶಾಸಕ ಹೈಬಿ ಈಡನ್ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಮನೆಯನ್ನು ಪರಿಶೀಲನೆ ನಡೆಸಿದರು.

ಬಳಿಕ ಶರತ್ ಲಾಲ್ ಮನೆಗೆ ಭೇಟಿ ನೀಡಿದರು. ಹತ್ತು ನಿಮಿಷಗಳ ಕಾಲ ಕುಟುಂಬಸ್ಥರೊಂದಿಗೆ ಕಾಲ ಕಳೆದ ರಾಹುಲ್ ಗಾಂಧಿ ಸಾಂತ್ವನ ಹೇಳಿದರು. ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಎಸ್ ಪಿಜಿ, ವಿಶೇಷ ಭದ್ರತಾ ಪಡೆ ಸೇರಿದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಮನೆಯೊಳಗೆ ಕಾಂಗ್ರೆಸ್ ನ ಪ್ರಮುಖ ನಾಯಕರು ಹೊರತುಪಡಿಸಿ ಮಾಧ್ಯಮದವರಿಗೆ ಸೇರಿದಂತೆ ಬೇರೆ ಯಾರಿಗೂ ಪ್ರವೇಶ ಇರಲಿಲ್ಲ. ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಸ್ಥಳಕ್ಕೆ ತಲಪಿದ್ದರು. ಶರತ್ ಲಾಲ್ ಮನೆಯಿಂದ ಹೊರಬರುತ್ತಿದ್ದಂತೆ ಅಲ್ಲಿ ಸೇರಿದ್ದ ಜನರೆಡೆಗೆ ನುಗ್ಗಿ ಹಸ್ತಲಾಘವ ನೀಡಿದ್ದು, ರಾಹುಲ್ ಗಾಂಧಿ ಜತೆ ಹಸ್ತ ಲಾಘವಕ್ಕೆ ನೂಕು ನುಗ್ಗಲು ಕಂಡು ಬಂತು.

ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಎ ಐ ಸಿ ಸಿ ಕಾರ್ಯದರ್ಶಿ, ಕೆ. ಸಿ. ವೇಣುಗೋಪಾಲ್, ಮುಕುಲ್ ವಾಸ್ನಿಕ್ ಮೊದಲಾದ ಮುಖಂಡರು ರಾಹುಲ್ ಗಾಂಧಿ ಜೊತೆಗಿದ್ದರು.

ಪೆರಿಯಕ್ಕೆ ಭೇಟಿ ಬಳಿಕ ರಾಹುಲ್ ಗಾಂಧಿಯವರು ಹೆಲಿಕಾಪ್ಟರ್ ನಲ್ಲಿ ಕೋಝಿಕ್ಕೋಡ್ ಗೆ ತೆರಳಿದರು. ಇದಕ್ಕೆ ಮೊದಲು ಕಳೆದ ಆಗಸ್ಟ್ ನಲ್ಲಿ ಕಣ್ಣೂರು ಮಟ್ಟನ್ನೂರಿನಲ್ಲಿ ಕೊಲೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತ ಶುಹೈಬ್ ನ ಕುಟುಂಬಸ್ಥರನ್ನು ಭೇಟಿಯಾದರು.

More Images