ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮಹಿಳಾ ಬಿಜೆಪಿ ಮನವಿ

ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮಹಿಳಾ ಬಿಜೆಪಿ ಮನವಿ

CI   ¦    Jan 14, 2020 05:30:52 PM (IST)
ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮಹಿಳಾ ಬಿಜೆಪಿ ಮನವಿ

ಮಡಿಕೇರಿ: ಕಳೆದ 70 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಇದೀಗ ಅಧಿಕಾರ ದಾಹದಿಂದಾಗಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದ ಮುಸ್ಲಿಂ ಬಾಂಧವರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ಏನೆಂಬುದೇ ತಿಳಿಯದಿದ್ದರೂ, ಬಹುತೇಕ ಮಂದಿ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳವರ ಸುಳ್ಳು ವದಂತಿಗಳನ್ನು ನಂಬಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ಬಿಜೆಪಿ ಮನೆಮನೆಗೆ ಭೇಟಿ ನೀಡಿ ಪೌರತ್ವ ಕಾಯ್ದೆಯ ಬಗ್ಗೆ ಮನವರಿಕೆ ಮಾಡುತ್ತಿರುವ ಸಂದರ್ಭದಲ್ಲಿ ಈ ಅಂಶಗಳು ಬೆಳಕಿಗೆ ಬಂದಿದೆ ಎಂದು ಹೇಳಿದರು.

ದೇಶದ ಜನತೆಯ ಭದ್ರತೆಯ ದೃಷ್ಟಿಯಿಂದ ಜಾರಿಗೆ ತರಲಾಗಿರುವ ಕಾಯ್ದೆಯ ಬಗ್ಗೆ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಮುಸಲ್ಮಾನರನ್ನು ಈ ದೇಶದಿಂದ ಓಡಿಸುತ್ತಾರೆ ಎಂಬ ಭಯ ಹುಟ್ಟಿಸುತ್ತಿದ್ದಾರೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲಿ ಪ್ರತಿಭಟಿಸುತ್ತಿರುವವರು ಅವೆರಡರ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಯಮುನಾ ಚಂಗಪ್ಪ ಆರೋಪಿಸಿದರು.

ಕಟ್ಟಾ ಮುಸ್ಲಿಂ ರಾಷ್ಟ್ರಗಳಲ್ಲೇ ನುಸುಳುಕೋರರಿಗೆ ಅವಕಾಶ ನೀಡುತ್ತಿಲ್ಲ, ಹೀಗಿರುವಾಗಿ ಭಾರತಕ್ಕೆ ನುಸುಳಿ ಬಂದಿರುವ ಹಾಗೂ ಬರುತ್ತಿರುವ, ಬಾಂಗ್ಲಾ, ರೋಹಿಂಗ್ಯಾ ಮುಸ್ಲಿಮರಿಗೂ ಪೌರತ್ವ ನೀಡಬೇಕೆನ್ನುವುದು ವಿಪರ್ಯಾಸ ಎಂದು ಹೇಳಿದರು. ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ವಿಪಕ್ಷಗಳಿಗೆ ವಿರೋಧ ಮಾಡುವುದಕ್ಕೆ ಯಾವುದೇ ಅಸ್ತ್ರಗಳು ಸಿಗುತ್ತಿಲ್ಲ. ಅದಕ್ಕಾಗಿ ಮೋದಿಯವರ ಉಡುಪು, ವಿದೇಶ ಪ್ರವಾಸ, ಚೌಕಿದಾರ ಹೇಳಿಕೆಯ ಬಗ್ಗೆ ಹಾಗೂ ಸರ್ಜಿಕಲ್ ಸ್ಟ್ರೈಕ್‍ನಂತಹ ಸೂಕ್ಷ್ಮ ವಿಚಾರಗಳ ಬಗ್ಗೆಯೂ ವಿರೋಧ ಮಾಡುತ್ತಿದ್ದಾರೆ. ಇದೀಗ ದೇಶದ ಹಿತಕ್ಕಾಗಿ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯ ಬಗ್ಗೆಯೂ ಅದೇ ರೀತಿಯ ಅಪಪ್ರಚಾರವನ್ನು ನಡೆಸಲಾಗುತ್ತಿದೆ ಎಂದು ಅವರು ದೂರಿದರು.

ಪೌರತ್ವ ಕಾಯ್ದೆಯ ಬಗ್ಗೆ ಜನರಿಗೆ ಮನವರಿಕೆ ಮಾಡುವ ದಿಸೆಯಲ್ಲಿ ಮಹಿಳಾ ಮೋರ್ಚಾದ ವತಿಯಿಂದ ಬೂತ್ ಮಟ್ಟದಲ್ಲಿ ‘ಭಾರತ್ ಮಾತಾ ವಂದನಾ’ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕಾಯ್ದೆಯ ಆಶಯಗಳ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ ಎಂದರು.

ಬಿಜೆಪಿ ವತಿಯಿಂದ ಜ.17ರಂದು ಮಡಿಕೇರಿಯಲ್ಲಿ ನಡೆಯಲಿರುವ ಪೌರತ್ವ ಕಾಯ್ದೆ ಜನಜಾಗೃತಿ ಸಮಾವೇಶದಲ್ಲಿ ಜಿಲ್ಲೆಯ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಯಮುನಾ ಚಂಗಪ್ಪ ಮನವಿ ಮಾಡಿದರು.

 ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೆಮ್ಮಂಡ ಗೀತಾ ಪವಿತ್ರ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಕನ್ನಿಕಾ ದಿನೇಶ್ ಹಾಜರಿದ್ದರು.