ಮೊಲ ಬೇಟೆಯಾಡಿದ ಬೇಟೆಗಾರನ ಬಂಧನ

ಮೊಲ ಬೇಟೆಯಾಡಿದ ಬೇಟೆಗಾರನ ಬಂಧನ

LK   ¦    May 23, 2020 05:31:36 PM (IST)
ಮೊಲ ಬೇಟೆಯಾಡಿದ ಬೇಟೆಗಾರನ ಬಂಧನ

ಚಾಮರಾಜನಗರ: ಉರುಳು ಹಾಕಿ ಮೊಲಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರನನ್ನು ಬಂಧಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಆತನಿಂದ ಒಂದು ಮೊಲ ಹಾಗೂ ಉರುಳುಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

ಮಾರಳ್ಳಿ ಗ್ರಾಮ ನಿವಾಸಿ ಸುಂದರ ನಾಯ್ಕ (40) ಎಂಬಾತನೇ ಬಂಧಿತ ಆರೋಪಿ. ಈತ ಉರುಳು ಬಳಸಿ ಮೊಲಗಳನ್ನು ಬೇಟೆಯಾಡುತ್ತಿದ್ದನು. ಇದುವರೆಗೆ ಬೇಟೆಯಾಡಿದ್ದರೂ ಸಿಕ್ಕಿ ಬೀಳದ ಆತ ಹೂಗ್ಯಂ ವನ್ಯಜೀವಿ ವಲಯದ ವಲಯದ  ಮಿಣ್ಯಂ ಶಾಖೆಯ ಎಲೆತೋಟ ಗಸ್ತಿನ ಸಿ.ಪಿ.ಟಿ. 108ರ ಮಾರಳ್ಳಿ ಡಿ ಲೈನ್ ಅರಣ್ಯ ಪ್ರದೇಶದಲ್ಲಿ  ಸಹಚರ ನಾಗರಾಜು ಎಂಬಾತನೊಂದಿಗೆ ಸೇರಿ ಉರುಳು ಹಾಕಿ ಮೊಲಗಳನ್ನು ಬೇಟೆಯಾಡುತ್ತಿರುವ ಬಗ್ಗೆ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ಬಂದಿತ್ತು.

ಕೂಡಲೇ ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ಹಾಗೂ ಹನೂರು ವನ್ಯಜೀವಿ ಉಪ-ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ.ಮುತ್ತೇಗೌಡ ರವರ ಮಾರ್ಗದರ್ಶನದಲ್ಲಿ ಹೂಗ್ಯಂ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಎಂ.ಸುಂದರ್ ಉಪವಲಯ ಅರಣ್ಯಾಧಿಕಾರಿ ಎ.ಸುದರ್ಶನ್ ಮತ್ತು  ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಬೇಟೆಯಾಡುತ್ತಿದ್ದ ಸುಂದರ ನಾಯ್ಕ ಸಿಕ್ಕಿ ಬಿದ್ದಿದ್ದು, ನಾಗರಾಜು ಪರಾರಿಯಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಅರಣ್ಯಾಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.