ಆನ್‍ಲೈನ್ ಬುಕ್ಕಿಂಗ್‍ಗೆ ಒತ್ತು ನೀಡಲು ಚಿತ್ರಮಂದಿರದ ಮಾಲೀಕರಿಗೆ ಸೂಚನೆ

ಆನ್‍ಲೈನ್ ಬುಕ್ಕಿಂಗ್‍ಗೆ ಒತ್ತು ನೀಡಲು ಚಿತ್ರಮಂದಿರದ ಮಾಲೀಕರಿಗೆ ಸೂಚನೆ

LK   ¦    Oct 17, 2020 06:20:01 PM (IST)
ಆನ್‍ಲೈನ್ ಬುಕ್ಕಿಂಗ್‍ಗೆ ಒತ್ತು ನೀಡಲು ಚಿತ್ರಮಂದಿರದ ಮಾಲೀಕರಿಗೆ ಸೂಚನೆ

ಮಂಡ್ಯ: ಸಿನಿಮಾ ಮಂದಿರಗಳು, ರಂಗಮಂದಿರಗಳು, ಅಥವಾ ಮಲ್ಟಿಪ್ಲೆಕ್ಸ್ ನಲ್ಲಿರುವ ಒಟ್ಟು ಆಸನದ ಸಾಮಥ್ರ್ಯದ ಶೇ.50 ಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ  ಅವಕಾಶ ನೀಡಬಾರದು ಮತ್ತು ಮಾಲಿಕರು ಆನ್ ಲೈನ್ ಬುಕಿಂಗ್‍ಗೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಚಿತ್ರಮಂದಿರಗಳ ಪ್ರಾರಂಭಿಸಲು ತೆಗೆದುಕೊಂಡ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಎಲ್ಲ ಪ್ರವೇಶ ದ್ವಾರಗಳಲ್ಲಿ ಮತ್ತು ನಿರ್ಗಮನ ಸ್ಥಳದಲ್ಲಿ ಸಿನಿ ಪ್ರಿಯರಿಗೆ   ಹ್ಯಾಂಡ್ ಸ್ಯಾನಿಟೈಸರ್  ಇಡಬೇಕು, ಥರ್ಮಲ್ ಸ್ರ್ಕೀನಿಂಗ್ ಮತ್ತು ಮಾಸ್ಕ್  ಕಡ್ಡಾಯವಾಗಿ ಧರಿಸಬೇಕು ಎಂದರು.

ಚಿತ್ರಮಂದಿರಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಲು ದೈಹಿಕ ಅಂತರಕ್ಕಾಗಿ ಸ್ಥಳ ಗುರುತಿಸಬೇಕು, ಜನದಟ್ಟಣೆಯನ್ನು ನಿರ್ಬಂಧಿಸುವ ದೃಷ್ಠಿಯಿಂದ ನಿರ್ಗಮನ ದ್ವಾರದಲ್ಲಿ ಸಲುವಾರು ನಿರ್ಗಮನವನ್ನು ಅನುಸರಿಸಬೇಕು ಮತ್ತು ಒಂದು ಪ್ರದರ್ಶನ ಹಾಗೂ ಮತ್ತೊಂದು ಪ್ರದರ್ಶನದ ನಡುವೆ ಸಾಕಷ್ಟು ಸಮಯ ಅನುಸರಿಸಬೇಕು.  ಕುಳಿತುಕೊಳ್ಳಲು ಅವಕಾಶವಿರದ ಆಸನಗಳನ್ನು ಟಿಕೆಟ್ ಖರೀದಿಯ ಸಮಯದಲ್ಲೇ ಗುರುತು ಮಾಡಿ ತೋರಿಸಬೇಕು, ವಾಹನಗಳ ನಿಲುಗಡೆಯ ಪ್ರದೇಶದಲ್ಲಿ ಮತ್ತು ಚಿತ್ರಮಂದಿದ ಹೊರಗೆ ದೈಹಿಕ ಅಂತರದ ಸೂತ್ರಗಳನ್ನು ಪಾಲಿಸಬೇಕು ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು ಎಂದರು.

ಟಿಕೆಟ್ ಪರಿಶೀಲನೆ, ಹಣ ಪಾವತಿ, ಆಹಾರ ಮತ್ತು ಪಾನೀಯ ಇತ್ಯಾದಿಗಳನ್ನು ಖರೀದಿಗೆ ಡಿಜಿಟಲ್ ಪೇಮೆಂಟ್, ಆನ್ ಲೈನ್ ಇ-ವ್ಯಾಲೆಟ್, ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ಗಳಂತಹ ಸಂಪರ್ಕ ರಹಿತವಾದ ವಹಿವಾಟಿಗೆ ಆದ್ಯತೆ ನೀಡಿ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಿ ಎಂದರಲ್ಲದೆ,   ಚಿತ್ರಮಂದಿರಗಳಲ್ಲಿ ಆಹಾರ ಮತ್ತು ಪಾನೀಯ ಸರಬರಾಜು ಸ್ಥಳಗಳಲ್ಲಿ ಸಿಬ್ಬಂದಿ ಮತ್ತು ನೌಕರರು ಕೋವಿಡ್ ಪರೀಕ್ಷೆ ಮಾಡಿಸಬೇಕು ಕೈಗವಸುಗಳು, ಬೂಟುಗಳನ್ನು ಮತ್ತು ಪಿಪಿಇ ಕಿಟ್ಟುಗಳನ್ನ ಕಡ್ಡಾಯವಾಗಿ ಧರಿಸಬೇಕು ಹಾಗೂ ಎಲ್ಲ ಸಿಬ್ಬಂದಿಗಳು  ಅರೋಗ್ಯ ಸೇತು ಆಪ್ ಅನ್ನು ಇನ್ ಸ್ಟಾಲ್ ಮಾಡಿರುವುದನ್ನು ಖಾತ್ರಿ ಪಡಿಸಿ ಕೊಳ್ಳಬೇಕು ಎಂದರು.

ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಆಪ್ತಮಿತ್ರ ಸಹಾಯವಾಣಿ ಸಂಖ್ಯೆ -14410 ಗೆ ಸಂಪರ್ಕಿಸಬೇಕು, ಗ್ರಾಹಕರು ಸಾಧ್ಯವಾದ ಮಟ್ಟಿಗೆ ಸಿನಿಮಾ ಆಪ್ ಅಥವಾ ಕ್ಯು ಆರ್ ಕೋಡ್ ಬಳಕೆ ಮಾಡಿ ಹಾಗೂ ಕೋವಿಡ್ ಸಂಬಂಧಿಸಿದಂತೆ ಯಾವುದೇ ಪ್ರತಿರೋಧ, ಅಸಹಕಾರ ಅಥವಾ ಆಶಿಸ್ತಿನ ನಡವಳಿಕೆ ಕಂಡು ಬಂದಲ್ಲಿ ಚಿತ್ರಮಂದಿರದ ವ್ಯವಸ್ಥಾಪಕರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುವುದು  ಎಂದರು.  ಸಭೆಯಲ್ಲಿ ಜಿಲ್ಲೆಯ ಚಿತ್ರಮಂದಿರಗಳ ಮಾಲೀಕರು ಉಪಸ್ಥಿತರಿದ್ದರು.