ಕಾಳಸಂತೆಯಲ್ಲಿ ರೆಮ್‌ಡೆಸಿವಿರ್‌ ಮಾರಾಟ ; ಕೋಲಾರ ಪೊಲೀಸರಿಂದ 6 ಜನರ ಬಂಧನ!

ಕಾಳಸಂತೆಯಲ್ಲಿ ರೆಮ್‌ಡೆಸಿವಿರ್‌ ಮಾರಾಟ ; ಕೋಲಾರ ಪೊಲೀಸರಿಂದ 6 ಜನರ ಬಂಧನ!

May 19, 2021 07:59:58 AM (IST)
ಕಾಳಸಂತೆಯಲ್ಲಿ   ರೆಮ್‌ಡೆಸಿವಿರ್‌ ಮಾರಾಟ  ; ಕೋಲಾರ ಪೊಲೀಸರಿಂದ 6 ಜನರ ಬಂಧನ!

ಕೋಲಾರ ; ದೇಶ ಮತ್ತು ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅಲ್ಲದೆ, ರೆಮ್​ಡಿಸಿವಿರ್ ಸೇರಿದಂತೆ ಪ್ರಮುಖ ಔಷಧಗಳ ಅಲಭ್ಯತೆಯೂ ರೋಗಿಗಳನ್ನು ಕಾಡುತ್ತಿದೆ. ಈ ಔಷಧಕ್ಕೆ ಬೇಡಿಕೆ ಅಧಿಕವಾಗಿದ್ದು, 10 ರಿಂದ 25 ಸಾವಿರದ ವರೆಗೆ ಹಣಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ನಡುವೆ ರೆಮ್​ಡಿಸಿವಿರ್ ಔಷಧವನ್ನು ಕಾಳ ಸಂತೆಯಲ್ಲಿ ಮಾರಾಟವ ದೊಡ್ಡ ಜಾಲವೇ ಸೃಷ್ಟಿಯಾಗಿದ್ದು ಕೆಲವು ವೈದ್ಯರೂ ಸಹ ಈ ಜಾಲದಲ್ಲಿ ಭಾಗಿಯಾಗಿಯಾಗಿರುವುದು ಆಗಾಗ್ಗೆ ಸುದ್ದಿಯಾಗುತ್ತಲೇ ಇದೆ. ಇಂದು ಸಹ ಆಂಟಿ-ವೈರಲ್ ರೆಮ್‌ಡೆಸಿವಿರ್‌ ಇಂಜೆಕ್ಷನ್ ಅನ್ನು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಆರು ಜನರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ ಎಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಂಗಳವಾರ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವು ನೇರ ಮೇಲ್ವಿಚಾರಣೆಯಲ್ಲಿ ಆರು ಜನರನ್ನು ಬಂಧಿಸಿದೆ ಮತ್ತು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೆಮ್‌ಡೆಸಿವಿರ್‌ ಇಂಜೆಕ್ಷನ್‌ನ ಆರು ಬಾಟಲುಗಳನ್ನು ವಶಪಡಿಸಿಕೊಂಡಿದೆ ಎಂದು ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.ಬಂಧನಕ್ಕೊಳಗಾದವರಲ್ಲಿ ಲ್ಯಾಬ್ ತಂತ್ರಜ್ಞ, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನರ್ಸಿಂಗ್ ಅಧೀಕ್ಷಕ ಮತ್ತು ಔಷಧಿಕಾರರು ಸೇರಿದ್ದಾರೆ. ರೆಮ್‌ಡೆಸಿವಿರ್‌ ಚುಚ್ಚುಮದ್ದನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ದೊರೆತ ಹಿನ್ನಲೆಯಲ್ಲಿ ತಂಡವನ್ನು ರಚಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಆರೋಪಿಗಳನ್ನು ಲ್ಯಾಬ್ ತಂತ್ರಜ್ಞ ಶಿವ ಕುಮಾರ್, ನರ್ಸಿಂಗ್ ಮೇಲ್ವಿಚಾರಕ ನಾಗರಾಜ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಅವರಿಂದ ರೆಮ್‌ಡೆಸಿವಿರ್‌ನ ನಾಲ್ಕು ಬಾಟಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅದೇ ತಂಡವು ಮತ್ತೊಂದು ಪ್ರಕರಣದಲ್ಲಿ, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಫಾರ್ಮಸಿ ಅಸಿಸ್ಟೆಂಟ್ ಆಗಿರುವ ನಾಗೇಶ್ ಮತ್ತು ನವೀನ್, ಸಂದೀಪ್ ಮತ್ತು ದರ್ಶನ್ ಅವರನ್ನು ಬಂಧಿಸಿ ರೆಮ್‌ಡೆಸಿವಿರ್‌ನ ಎರಡು ಬಾಟಲುಗಳನ್ನು ವಶಪಡಿಸಿಕೊಂಡಿದೆ. ಆರೋಪಿಗಳು ರೆಮ್‌ಡೆಸಿವಿರ್‌ನ ಒಂದು ಬಾಟಲಿಗೆ 40 ಸಾವಿರ ರೂಗಳಷ್ಟು ದರವನ್ನು ವಿಧಿಸಿದ್ದರು ಎಂದು ಪೊಲೀಸರು ಕಂಡುಹಿಡಿದಿದ್ದಾರೆ.