ಅರೆಭಾಷೆ ಗೌಡ ಜನಾಂಗ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು: ಕೆ.ಜಿ.ಬೋಪಯ್ಯ ಕರೆ

ಅರೆಭಾಷೆ ಗೌಡ ಜನಾಂಗ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು: ಕೆ.ಜಿ.ಬೋಪಯ್ಯ ಕರೆ

Jul 23, 2017 06:55:16 PM (IST)
ಅರೆಭಾಷೆ ಗೌಡ ಜನಾಂಗ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು: ಕೆ.ಜಿ.ಬೋಪಯ್ಯ ಕರೆ

ಮಡಿಕೇರಿ: ಪ್ರತಿಯೊಬ್ಬ ಅರೆಭಾಷೆ ಗೌಡ ಜನಾಂಗ ಬಾಂಧವರು ತಮ್ಮ ಜಾತಿ ಮೇಲೆ ಅಭಿಮಾನ ಹೊಂದಿ, ಇತರೆ ಜನಾಂಗದ ಪ್ರೀತಿ ವಿಶ್ವಾಸಗಳಿಸಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕೆಂದು ಮಾಜಿ ಸ್ಪೀಕರ್, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೊಂಬಾರನ ಬೋಪಯ್ಯ ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಮೈಸೂರು ಕೊಡಗು ಗೌಡ ಸಮಾಜದ ಸಂಯುಕ್ತ ಆಶ್ರಯದಲ್ಲಿ ವಿಜಯನಗರದ ಕೊಡಗು ಗೌಡ ಸಮಾಜದಲ್ಲಿ ಭಾನುವಾರ ನಡೆದ ಅರೆಭಾಷೆ ಸಂಸ್ಕೃತಿ ಪರಿಪಾಲಕರ ಸಮಾಗಮ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಜನಾಂಗಬಾಂಧವರು ತನ್ನ ಆಚಾರ, ವಿಚಾರ, ಪದ್ಧತಿ, ಸಂಸ್ಕೃತಿ, ಆಚರಣೆಗಳಲ್ಲಿ ಕೀಳರಿಮೆ ತೋರದೆ ಶಿಸ್ತುಬದ್ಧವಾಗಿ ಮಾಡಿದಾಗ ಮಾತ್ರ ಮುಂದಿನ ಪೀಳಿಗೆಗೂ ಉಳಿದು ಬೆಳೆಯಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಮೈಸೂರು ಕೊಡಗು ಗೌಡ ಸಮಾಜ ಹಮ್ಮಿಕೊಂಡಿರುವ ಅರೆಭಾಷೆ ಸಂಸ್ಕೃತಿ ಪರಿಪಾಲಕರ ಸಮಾಗಮ ಕಾರ್ಯಕ್ರಮ ಶ್ಲಾಘನೀಯ ಎಂದರು.

ಈಗಾಗಲೇ ಅರೆಭಾಷೆ ಗೌಡ ಜನಾಂಗದವರು ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಐಎಎಸ್ ಮತ್ತು ಐಪಿಎಸ್ ಹುದ್ದೆಯನ್ನು ಅಲಂಕರಿಸದಿರುವುದು ಬೇಸರದ ಸಂಗತಿಯಾಗಿದೆ. ಇನ್ನು ಮುಂದೆಯಾದರೂ ಇತ್ತ ಗಮನಹರಿಸಬೇಕಿದೆ. ಹೆತ್ತವರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವ ಅಗತ್ಯವಿದ್ದು, ಶಿಕ್ಷಣದ ಮೂಲಕ ಅಭಿವೃದ್ಧಿ ಹೊಂದಿದ್ದೇ ಆದರೆ ಸಮಾಜದಲ್ಲಿ ಗೌರವ ಸಿಗುವುದರೊಂದಿಗೆ ಎಲ್ಲರೂ ಗುರುತಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಇತರೆ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬರೂ ಎಲ್ಲಿ ಹುಟ್ಟುತ್ತಾರೋ ಅವರೊಂದಿಗೆ ಜಾತಿ ಬರುತ್ತದೆ. ಹೀಗಿರುವಾಗ ತಮ್ಮ ಜಾತಿ ಬಗ್ಗೆ ಅಭಿಮಾನವಿರಬೇಕೇ ವಿನಃ ದುರಾಭಿಮಾನವಲ್ಲ. ಶಿಸ್ತು ಬದ್ಧವಾಗಿ ಆಚರಣೆಯನ್ನು ರೂಢಿಸಿಕೊಂಡು ಮುನ್ನಡೆದರೆ ನಮ್ಮ ಬೆಳೆದು ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ಚಾಮರಾಜಕ್ಷೇತ್ರದ ಶಾಸಕ ವಾಸು ಮಾತನಾಡಿ, ಅರೆಭಾಷೆಯನ್ನು ಏಕ ರೀತಿಯಲ್ಲಿ ಬೆಳೆಸಿ, ಉಳಿಸಿಕೊಂಡು ಬಂದ ಕೀರ್ತಿ ಅರೆಭಾಷೆ ಗೌಡ ಜನಾಂಗಕ್ಕೆ ಸೇರುತ್ತದೆ. ಇವತ್ತು ಸಂಸ್ಕೃತಿಯ ಆಚರಣೆಗಿಂತ ವೈಭವೀಕರಣ ನಡೆಯುತ್ತಿದೆ. ಇದರಿಂದ ಯುವ ಜನಾಂಗಕ್ಕೆ ಸಂಸ್ಕೃತಿಯ ಸಾರವೇ ತಿಳಿಯದಂತಾಗಿದೆ. ಇವತ್ತು ನಾವು ಹುಟ್ಟು, ಹಿನ್ನಲೆ, ಸಂಸ್ಕೃತಿ, ಆಚಾರ, ವಿಚಾರ ಎಲ್ಲವನ್ನೂ ಮರೆಯುತ್ತ್ತಾಹೋಗುತ್ತಿದ್ದು, ಸಂಸ್ಕೃತಿಯ ಹಿನ್ನಲೆ ಕೇವಲ ಸಂಶೋಧಕರಿಗಷ್ಟೆ ಸೀಮಿತವಾಗುವಂತಹ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಬದಲಾದ ಕಾಲಘಟ್ಟದಲ್ಲಿ ಮುಂದಿನ ಪೀಳಿಗೆಗೆ ಭಾಷೆ, ಪದ್ಧತಿಯ ಅರಿವು ಮೂಡಿಸುವ ಕಾರ್ಯವನ್ನು ಅರೆಭಾಷೆ ಗೌಡ ಜನಾಂಗ ಬಾಂಧವರು ಮಾಡುತ್ತಿರುವುದು ಸಂತಸವಾಗಿದೆ.

ಆಧುನಿಕ ಬದುಕಿನಲ್ಲಿ ಜಾನಪದ ಕಲೆ ನಶಿಸುತ್ತಿದೆ. ಜನಪದವನ್ನು ತಿಳಿದುಕೊಂಡಾಗ ನಮ್ಮ ಸಂಸ್ಕೃತಿಯ ಅರಿವಾಗುತ್ತದೆ. ಮೊದಲಿಗೆ ಎಲ್ಲರೂ ಸಂಸ್ಕೃತಿಯ ಪ್ರಾಮುಖ್ಯತೆಯನ್ನು ತಿಳಿಯುವಂತಾಗಬೇಕು ಎಂದು ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಗೌಡ ಸಮಾಜಗಳ ಒಕ್ಕೂಟ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಮೈಸೂರು ಕೊಡಗು ಗೌಡಸಮಾಜ ಅಧ್ಯಕ್ಷ ಚೆಟ್ಟಿಮಾಡ ಜನಾರ್ಧನ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಮೊದಲಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಉಮ್ಮರಬ್ಬ, ಕಾರ್ಯಕ್ರಮದ ಸಂಚಾಲಕ ಮಂದ್ರೀರ ಮೋಹನ್ದಾಸ್, ಸೇರಿದಂತೆ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಮುಖ್ಯ ಅತಿಥಿಗಳನ್ನು ಸಂಪ್ರದಾಯದಂತೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.