ಜಮೀನಿನತ್ತ ಮುಖ ಮಾಡಿದ ಗುಂಡ್ಲುಪೇಟೆ ರೈತರು

ಜಮೀನಿನತ್ತ ಮುಖ ಮಾಡಿದ ಗುಂಡ್ಲುಪೇಟೆ ರೈತರು

LK   ¦    May 15, 2019 12:59:29 PM (IST)
ಜಮೀನಿನತ್ತ ಮುಖ ಮಾಡಿದ ಗುಂಡ್ಲುಪೇಟೆ ರೈತರು

ಗುಂಡ್ಲುಪೇಟೆ: ಕಳೆದ ಕೆಲವು ವರ್ಷಗಳಿಂದ ಭೀಕರ ಬರಗಾಲವನ್ನು ಎದುರಿಸುತ್ತಾ ಬಂದಿದ್ದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಹುತೇಕ ರೈತರು ಜಮೀನನ್ನು ಪಾಳು ಬಿಟ್ಟು ಕೆಲಸ ಹುಡುಕಿಕೊಂಡು ಕೇರಳ ಸೇರಿದಂತೆ ಹಲವು ಕಡೆಗಳಿಗೆ ತೆರಳಿದ್ದರು.

ಇನ್ನು ಕೆಲವರು ಜಾನುವಾರುಗಳನ್ನು ಸಾಕಲಾಗದೆ ಮಾರಾಟ ಮಾಡಿದ್ದರು. ಆದರೆ ಇದೀಗ ಮಳೆ ಸುರಿದ ಕಾರಣ ಸಂತಸಗೊಂಡಿರುವ ರೈತರು ತಮ್ಮ ಜಮೀನಿನತ್ತ ಮುಖ ಮಾಡಿದ್ದಾರೆ. ಅಲ್ಲದೆ ಭೂಮಿಯನ್ನು ಉಳುಮೆ ಮಾಡಿ ಜೋಳ, ಸೂರ್ಯಕಾಂತಿ, ಹತ್ತಿ ಹೀಗೆ ತಮಗೆ ಅನುಕೂಲವಾದ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ.

ಕೃಷಿ ಮಾಡಲಾಗದ ಕಾರಣ ಕೆಲಸ ಹುಡುಕಿಕೊಂಡು ಕೇರಳದತ್ತ ತೆರಳಿದ್ದ ಕೂಲಿ ಕಾರ್ಮಿಕರು ಕೂಡ ತಮ್ಮ ಊರುಗಳಿಗೆ ಮರಳಿದ್ದು ಸ್ವಗ್ರಾಮದಲ್ಲಿಯೇ ಕೆಲಸ ಸಿಗಬಹುದೆಂಬ ಆಶಾಭಾವನೆಯಲ್ಲಿದ್ದಾರೆ.

ಈಗಾಗಲೇ ಹಲವು ಕಡೆ ಬಿತ್ತನೆ ಕಾರ್ಯ ಮುಗಿದಿದ್ದರೆ, ಇನ್ನು ಕೆಲವು ಕಡೆ ಇದೀಗ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ. ಕೃಷಿ ಇಲಾಖೆಯು ರೈತರಿಗೆ ಅಗತ್ಯವಾದ ಬಿತ್ತನೆ ಬೀಜಗಳನ್ನು ಮಾರುಕಟ್ಟೆಯ ದರಕ್ಕಿಂತ ರಿಯಾಯಿತಿ ದರದಲ್ಲಿ ವಿತರಿಸಲು ಮುಂದಾಗಿದ್ದು, ಅಗತ್ಯ ಸಲಹೆಗಳನ್ನು ರೈತರಿಗೆ ನೀಡಲಾಗುತ್ತಿದೆ. ಕಳೆದ ವರ್ಷದಿಂದ ಉತ್ತಮವಾಗಿ ಮಳೆ ಬೀಳುತ್ತಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಕೆಲವರು ಸಾಲ ಮಾಡಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಕೃಷಿಯನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಎತ್ತುಗಳನ್ನು ಬಾಡಿಗೆಗೆ ಪಡೆದು ಉಳುಮೆ ಕಾರ್ಯವನ್ನು ಮಾಡುತ್ತಿದ್ದಾರೆ. ಈ ನಡುವೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಲು ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಮುಗಿ ಬೀಳುತ್ತಿದ್ದಾರೆ. ಬೆಳಗ್ಗೆ ಕಚೇರಿಯ ಬಾಗಿಲು ತೆರೆಯುವ ಮೊದಲೇ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸುವ ರೈತರು ಪಟ್ಟಣದ ಕಸಬಾ, ಬೇಗೂರು, ತೆರಕಣಾಂಬಿ ಹಾಗೂ ಹಂಗಳ ಗ್ರಾಮದ ರೈತ ಸಂಪರ್ಕ ಕೇಂದ್ರಗಳ ಮುಂದೆ ಸರದಿಯಲ್ಲಿ ಕಾದು ನಿಲ್ಲುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ಕೃಷಿ ಇಲಾಖೆಯ ಎಲ್ಲಾ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಬಿತ್ತನೆಬೀಜ ಹಾಗೂ ರಸಗೊಬ್ಬರಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.

ಒಟ್ಟಾರೆ ಹೇಳಬೇಕೆಂದರೆ ರೈತರು ಹುಮ್ಮಸ್ಸಿನಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಎಲ್ಲವೂ ಸರಿಹೋದರೆ ರೈತರ ಮುಖದಲ್ಲಿ ಮಂದಹಾಸ ಮಿನುಗುವುದರಲ್ಲಿ ಸಂಶಯವಿಲ್ಲ.