ಪತಿಯನ್ನೇ ಹತ್ಯೆಗೈದ ಪತ್ನಿ: ಮೂರು ವರ್ಷದ ಬಳಿಕ ಪ್ರಕರಣ ಬೆಳಕಿಗೆ

ಪತಿಯನ್ನೇ ಹತ್ಯೆಗೈದ ಪತ್ನಿ: ಮೂರು ವರ್ಷದ ಬಳಿಕ ಪ್ರಕರಣ ಬೆಳಕಿಗೆ

LK   ¦    Jan 14, 2020 08:27:11 PM (IST)
ಪತಿಯನ್ನೇ ಹತ್ಯೆಗೈದ ಪತ್ನಿ: ಮೂರು ವರ್ಷದ ಬಳಿಕ ಪ್ರಕರಣ ಬೆಳಕಿಗೆ

ಮಂಡ್ಯ: ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನ ಜೊತೆಗೂಡಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದ ಪ್ರಕರಣ ಮೂರು ವರ್ಷಗಳ ಬಳಿಕ ತಾಲೂಕಿನ ರಾಜೇಗೌಡನದೊಡ್ಡಿಯಲ್ಲಿ ಬೆಳಕಿಗೆ ಬಂದಿದೆ.

ಟಿಪ್ಪರ್ ಚಾಲಕ ರಂಗಸ್ವಾಮಿ ಹತ್ಯೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಮದ್ದೂರು ಪೊಲೀಸರು ರಂಗಸ್ವಾಮಿ ಪತ್ನಿ ರೂಪಾ, ಆಕೆಯ ಪ್ರಿಯಕರ ಮುದ್ದೇಗೌಡ ಅಲಿಯಾಸ್ ಮುತ್ತುರಾಜು ಎಂಬಾತನನ್ನು ಬಂಧಿಸಿದ್ದಾರೆ.

ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಪೂಜಾರಿ ಬೋವಿದೊಡ್ಡಿ ಗ್ರಾಮದ ರಂಗಸ್ವಾಮಿ ಕೆಲವು ವರ್ಷಗಳ ಹಿಂದೆ ಮದ್ದೂರು ತಾಲೂಕಿನ ತೊಪ್ಪನಹಳ್ಳಿಯ ಭೀಮನಕೆರೆ ಬೆಟ್ಟದರಸಮ್ಮ ಗುಡ್ಡದ ಕಲ್ಲು ಕ್ವಾರೆಯಲ್ಲಿ ಟಿಪ್ಪರ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈ ಮಧ್ಯೆ ರಂಗಸ್ವಾಮಿ ಭೀಮನಕೆರೆ ಗ್ರಾಮದ ರೂಪಾ ಎಂಬಾಕೆಯನ್ನು ವಿವಾಹವಾಗಿ ರಾಜೇಗೌಡನ ದೊಡ್ಡಿಯಲ್ಲಿ ವಾಸವಾಗಿದ್ದನು. ದಂಪತಿಗೆ ಮೂವರು ಮಕ್ಕಳಿದ್ದಾರೆ.

ಈ ಮಧ್ಯೆ ರೂಪಾ ವೈದ್ಯನಾಥಪುರದ ಬಾಬು ಎಂಬುವರ ಟಿಪ್ಪರ್ ಚಾಲಕನಾಗಿದ್ದ ಮುದ್ದೇಗೌಡ ಅಲಿಯಾಸ್ ಮುತ್ತುರಾಜು ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ಪತಿ ರಂಗಸ್ವಾಮಿಗೆ ತಿಳಿದ ಕಾರಣ ಆಗಾಗ್ಗೆ ದಂಪತಿ ನಡುವೆ ಕಲಹ ಏರ್ಪಡುತ್ತಿತ್ತು. ಇದರಿಂದ ಬೇಸತ್ತ ರೂಪಾ ಪ್ರಿಯಕರ ಮುದ್ದೇಗೌಡನ ಜೊತೆ ಸೇರಿ ಗಂಡ ರಂಗಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದಳು.

ಕಳೆದ 2017ರ ಜುಲೈ 4ರಂದು ರಾತ್ರಿ 10 ಗಂಟೆ ಸಮಯದಲ್ಲಿ ಆರೋಪಿಗಳಾದ ರೂಪಾ ಹಾಗೂ ಮುz್ದÉೀಗೌಡ ಸೇರಿ ರಂಗಸ್ವಾಮಿಯಿಂದ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ ರಂಗಸ್ವಾಮಿ ಬೈಕ್‍ನಲ್ಲೇ ಶವವನ್ನು ಚಂದಹಳ್ಳಿ ದೊಡ್ಡಿ ಕೆರೆ ಬಳಿಗೆ ಸಾಗಿಸಿ ಮರಳು ತೆಗೆಯಲು ತೋಡಲಾಗಿದ್ದ ಹಳ್ಳದಲ್ಲಿ ಮುಚ್ಚಿಹಾಕಿ ಕೊಲೆ ಪ್ರಕರಣವನ್ನು ಮರೆಮಾಚಿದ್ದರು. ಆ ನಂತರ ಆರೋಪಿ ರೂಪಾ ತನ್ನ ಗಂಡ ರಂಗಸ್ವಾಮಿ ಕಾಣೆಯಾಗಿದ್ದಾನೆ ಎಂದು ಪೆÇಲೀಸರಿಗೆ ದೂರು ನೀಡಿದ್ದಳು. ಅಲ್ಲದೆ, ಆತನ ಕುಟುಂಬಕ್ಕೂ ಮಾಹಿತಿ ನೀಡಿದ್ದಳು.

ಕಳೆದ ಮೂರೂವರೆ ವರ್ಷಗಳಿಂದ ರಂಗಸ್ವಾಮಿ ಕಾಣೆಯಾದ ಬಗ್ಗೆ ಆತನ ಸಹೋದರ ಮುತ್ತೇರಿ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲದೆ, ರಂಗಸ್ವಾಮಿಯನ್ನು ಅವನ ಪತ್ನಿ ರೂಪಾ ಹಾಗೂ ಮುದ್ದೇಗೌಡ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದನು. ಪ್ರಕರಣವನ್ನು ಮದ್ದೂರು ಪೊಲೀಸರು ದಾಖಲಿಸಿಕೊಂಡಿದ್ದರು.

ನಂತರ ಎಸ್‍ಪಿ ಕೆ.ಪರಶುರಾಮ, ಎಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಡಿವೈಎಸ್ಪಿ ಎಂ.ಜೆ.ಪೃಥ್ವಿ ಮಾರ್ಗದರ್ಶನದಲ್ಲಿ ಸಿಪಿಐ ದೇವರಾಜು, ಪಿಎಸ್‍ಐ ಮಂಜೇಗೌಡ, ಪ್ರೊಬೇಷನರಿ ಪಿಎಸ್‍ಐ ಡಿ.ರವಿಕುಮಾರ್, ಅಪರಾಧ ವಿಭಾಗದ ಎಎಸ್‍ಐ ಬೆಳಗುಲಿ ಮಹದೇವಪ್ಪ, ಸಿಬ್ಬಂದಿಯಾದ ಕರಿಗಿರೀಗೌಡ, ವಿಠಲ, ಚಿರಂಜೀವಿ, ಶಿವಕುಮಾರ್, ರಮೇಶ್, ನಂಜುಂಡಸ್ವಾಮಿ, ಮಹಿಳಾ ಪೇದೆಗಳಾದ ಆಶಾ, ರೋಜಾ, ಜೀಪ್ ಚಾಲಕರಾದ ಪ್ರೀತಿಕುಮಾರ್, ಸಿದ್ದೇಗೌಡ ಅವರು ಜಂಟಿ ಕಾರ್ಯಾಚರಣೆ ನಡೆಸಿ ಮದ್ದೂರು ವಿಶ್ವೇಶ್ವರಯ್ಯ ನಗರದಲ್ಲಿ ವಾಸವಾಗಿದ್ದ ರೂಪಾ ಹಾಗೂ ಮುದ್ದೇಗೌಡರನ್ನು ಬಂಧಿಸುವಲ್ಲಿ ಸಫಲರಾದರು.

ಆರೋಪಿಗಳ ವಿರುದ್ಧ ಐಪಿಸಿ-302, 201 ಹಾಗೂ 34 ರೀತ್ಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ಪಟ್ಟಣದ ಜೆಎಂಎಫ್‍ಸಿ ಪ್ರಧಾನ ಸಿವಿಲ್ ನ್ಯಾಯಾಲಯದ ಎದುರು ಮಂಗಳವಾರ ಮಧ್ಯಾಹ್ನ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಜ.16ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶ ಪಿ.ಎಂ.ಬಾಲಸುಬ್ರಹ್ಮಣಿ ಆದೇಶ ನೀಡಿದ್ದಾರೆ.

ಬಂಧಿತರನ್ನು ಮಂಗಳವಾರ ಸಂಜೆ ಚಂದಹಳ್ಳಿ ದೊಡ್ಡಿ ಕೆರೆ ಬಳಿ ಕರೆದೊಯ್ದು ರಂಗಸ್ವಾಮಿ ಶವ ಹೂತಿಟ್ಟ ಜಾಗವನ್ನು ಪತ್ತೆ ಮಾಡಲಾಯಿತು. ನಂತರ ತಹಸೀಲ್ದಾರ್ ವಿಜಿಯಣ್ಣ, ಮಂಡ್ಯ ಮಿಮ್ಸ್ ಆಸ್ಪತ್ರೆ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರ ಸಮ್ಮುಖದಲ್ಲಿ ಶವದ ಅವಶೇಷಗಳನ್ನು ಹೊರತೆಗೆದು ಪರೀಕ್ಷೆಗೆ ಕಳುಹಿಸಲಾಯಿತು.

More Images