ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ

ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ

LK   ¦    Jul 20, 2017 11:20:52 AM (IST)
ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ

ಯಳಂದೂರು: ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳಿಗೆ ಹುಚ್ಚು ನಾಯಿಯೊಂದು ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದ್ದು, ಗಾಯಗೊಂಡ ಮಕ್ಕಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಘಟನೆ ನಡೆದಿದೆ.

ತಾಲೂಕಿನ ಕೃಷ್ಣಪುರದ ಸಹನಾ (2) ಎಂಬ ಬಾಲಕಿ ಮನೆಯ ಜಗಲಿಯಲ್ಲಿ ಆಟವಾಡುತ್ತಿದ್ದ ವೇಳೆ ಹುಚ್ಚು ನಾಯಿಯೊಂದು ದಾಳಿ ಮಾಡಿ ಕುತ್ತಿಗೆ ಮತ್ತು ಕೆನ್ನೆಯನ್ನು ಕಚ್ಚಿ ಗಾಯಗೊಳಿಸಿದ್ದಲ್ಲದೆ, ಮಗುವಿನ ಕುತ್ತಿಗೆಯನ್ನು ಕಚ್ಚಿ ಹಿಡಿದು ಎಳೆದೊಯ್ಯುವ ಪ್ರಯತ್ನ ಮಾಡಿದೆ. ಮಗು ಚೀರುತ್ತಿದ್ದ ಶಬ್ದಕ್ಕೆ ಮಗುವಿನ ಪೋಷಕರು ಮತ್ತು ಸುತ್ತಮುತ್ತಲಿನವರು ಸ್ಥಳಕ್ಕೆ ಆಗಮಿಸಿ ನಾಯಿಯನ್ನು ಹೊಡೆದೋಡಿಸಿ ಮಗುವನ್ನು ರಕ್ಷಿಸಿದ್ದಾರೆ.

ಅಲ್ಲಿಂದ ಓಟಕಿತ್ತ ಹುಚ್ಚುನಾಯಿ ಕೊಮಾರನಪುರ ಗ್ರಾಮಕ್ಕೆ ತೆರಳಿ ಅಲ್ಲಿ ಮನೆಬಳಿಯಿದ್ದ ರಕ್ಷಿತಾ(3) ಎಂ ಬಾಲಕಿಯ ತೊಡೆ, ಕಾಲು ಭಾಗಕ್ಕೆ ಕಚ್ಚಿದೆ. ಏಕಾಏಕಿ ನಾಯಿ ದಾಳಿ ಮಾಡಿದ್ದರಿಂದ ಮಗು ಬೆಚ್ಚಿಬಿದ್ದು ಅತ್ತಿದೆ. ತಕ್ಷಣ ಹತ್ತಿರದಲ್ಲಿದ್ದವರು ಬಂದು ದೊಣ್ಣೆಯಿಂದ ನಾಯಿಯನ್ನು ಹೊಡೆದು ಓಡಿಸಿ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಓಡಿದ ನಾಯಿ ವಡೆಗೆರೆ ಗ್ರಾಮದ ರಿತೀಶ್ (4) ಎಂಬ ಬಾಲಕನ ಮೇಲೆ ದಾಳಿ ಮಾಡಿ ಮೊಣಕಾಲು ತೊಡೆ ಇನ್ನಿತರ ದೇಹದ ಭಾಗಕ್ಕೆ ತೀವ್ರವಾಗಿ ಕಚ್ಚಿದೆ. ಅಷ್ಟರಲ್ಲೇ ಅಕ್ಕಪಕ್ಕದವರು ಬಂದು ನಾಯಿಯನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಮಕ್ಕಳನ್ನು ಯಳಂದೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ನೀಡಲಾಗಿದೆ. ಹುಚ್ಚು ನಾಯಿಯ ಭಯ ಈ ವ್ಯಾಪ್ತಿಯಲ್ಲಿ ಗ್ರಾಮಸ್ಥರನ್ನು ಕಾಡಿದ್ದು, ಅದನ್ನು ಹುಡುಕಿ ಸಾಯಿಸುವಂತೆ ಸಂಬಂಧಿಸಿದವರನ್ನು ಒತ್ತಾಯಿಸಿದ್ದಾರೆ.