ಕೆ.ಆರ್.ಪೇಟೆಯಲ್ಲಿ ಎರಡು ಪೊಲೀಸ್ ಠಾಣೆ ಸೀಲ್ ಡೌನ್

ಕೆ.ಆರ್.ಪೇಟೆಯಲ್ಲಿ ಎರಡು ಪೊಲೀಸ್ ಠಾಣೆ ಸೀಲ್ ಡೌನ್

LK   ¦    May 23, 2020 03:20:57 PM (IST)
ಕೆ.ಆರ್.ಪೇಟೆಯಲ್ಲಿ ಎರಡು ಪೊಲೀಸ್ ಠಾಣೆ ಸೀಲ್ ಡೌನ್

ಕೆ.ಆರ್.ಪೇಟೆ: ಕ್ವಾರಂಟೈನ್ ಗ್ರಾಮಗಳಲ್ಲಿ ಸಕ್ರಿಯವಾಗಿ ಕರ್ತವ್ಯನಿರತರಾಗಿದ್ದು  ಕೊರೋನಾ ತಡೆಗೆ ಅಪಾರವಾಗಿ ಶ್ರಮಿಸುತ್ತಿದ್ದ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರಿಗೆ ಕೊರೋನಾ ಪಾಸಿಟೀವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಟೌನ್ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಸೀಲ್ ಡೌನ್  ಮಾಡಲಾಗಿದೆ. ಎರಡೂ ಠಾಣೆಗಳನ್ನು ತಾತ್ಕಾಲಿಕವಾಗಿ ಪ್ರವಾಸಿ ಮಂದಿರದ ಕಟ್ಟಡಗಳಿಗೆ ಸ್ಥಳಾಂತರ ಮಾಡಲಾಗಿದೆ.

ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 30 ಮಂದಿ ಸಿಬ್ಬಂದಿಯನ್ನು ಕೋವಿಡ್-19ಪರೀಕ್ಷೆ ಮಾಡಿಸಿ ಸುರಕ್ಷಿತ ಸ್ಥಳಗಳಲ್ಲಿ ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇವರ ಸ್ಥಳಕ್ಕೆ ಜಿಲ್ಲೆಯ ವಿವಿಧ ಠಾಣೆಗಳಿಂದ  30 ಮಂದಿ ಅಧಿಕಾರಿಗಳು ಮತ್ತು ಪೊಲೀಸರನ್ನು  ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕೋವಿಡ್ -19 ಕರ್ತವ್ಯಕ್ಕೆ ಧಕ್ಕೆ ಉಂಟಾಗದಂತೆ ವಿಶೇಷ ಪೊಲೀಸ್ ಭದ್ರತೆಯನ್ನು ಕ್ವಾರಂಟೈನ್ ಕೇಂದ್ರಗಳಿಗೆ ವಿಶೇಷ ಭದ್ರತೆಯನ್ನು ಒದಗಿಸಲಾಗಿದೆ.

ಪೊಲೀಸರು ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಕೆಲವೊಮ್ಮೆ ಸಿಬ್ಬಂದಿಗೂ ಅಪಾಯ ಉಂಟಾಗುತ್ತದೆ ಅದೇ ರೀತಿ ನಮ್ಮ ಮುಖ್ಯಪೇದೆಯೊಬ್ಬರಿಗೆ ಕೊರೋನಾ ಪಾಸಿಟೀವ್ ಪತ್ತೆಯಾಗಿದೆ ಈ ಹಿನ್ನೆಲೆಯಲ್ಲಿ ಎರಡೂ ಪೊಲೀಸ್ ಠಾಣೆಗಳನ್ನು ಸ್ಯಾನಿಟೈಸರ್ ದ್ರಾವಣದಿಂದ ಸಂಪೂರ್ಣ ಗೊಳಿಸಿ ಸಾರ್ವಜನಿಕರು ಯಾರೂ ಒಳ ಹೋಗದಂತೆ ಠಾಣೆಗಳ ಮುಖ್ಯ ದ್ವಾರಗಳನ್ನು ಬ್ಯಾರಿಕೇಡ್‍ನಿಂದ ಬಂದ್ ಮಾಡಲಾಗಿದೆ.  ಪೊಲೀಸರಿಗೇ ಕೊರೋನಾ ಪಾಸಿಟೀವ್ ಬಂದಿದೆ ಎಂದು ಸಾರ್ವಜನಿಕರು ಯಾರೂ ಭಯ ಪಡುವ ಅಗತ್ಯವಿಲ್ಲ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್ ನಿಂದ ಕೈಗಳನ್ನು ಸ್ವಚ್ಚಪಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಂ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇನ್ನೊಂದೆಡೆ ಮುಖ್ಯಪೇದೆ ವಾಸುತ್ತಿದ್ದ ಜಯನಗರ ಬಡಾವಣೆಯ ಎರಡು ಮುಖ್ಯ ರಸ್ತೆಗಳನ್ನು ಪುರಸಭೆಯ ಮುಖ್ಯಾಧಿಕಾರಿ ಸತೀಶ್‍ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಡಾ.ಮನುಕುಮಾರ್, ಕಸಬಾ ರಾಜಸ್ವ ನಿರೀಕ್ಷಕಿ ಚಂದ್ರಕಲಾ ಪ್ರಕಾಶ್ ನೇತೃತ್ವದಲ್ಲಿ ಪುರಸಭೆಯ ಸಿಬ್ಬಂದಿಗಳ ನೆರವಿನಿಂದ ಸೀಲ್‍ಡೌನ್ ಮಾಡಿ ಎರಡೂ ರಸ್ತೆಗಳಿಗೆ ಬ್ಲೀಚಿಂಗ್ ಪೌಡರ್ ಹಾಗೂ ಸ್ವಾನಿಟೈಸರ್ ದ್ರಾವಣವನ್ನು ಸಿಂಪಡಣೆ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ  ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಕಂಟೇನ್‍ಮೆಂಟ್ ಝೋನ್ ಮಾದರಿಯಲ್ಲಿ ಈ ಭಾಗದಲ್ಲಿ ನಿತ್ಯ ಆರೋಗ್ಯ ತಪಾಸಣೆ ನಡೆಸಿ ನಾಗರಿಕರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ತಿಳಿಸಿದ್ದಾರೆ.