ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಸುಮಲತಾ

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಸುಮಲತಾ

LK   ¦    May 23, 2020 07:35:29 PM (IST)
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಸುಮಲತಾ

ಮಂಡ್ಯ: ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ನನ್ನ ಜಾಯಮಾನವಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಶನಿವಾರ ಹೇಳಿದರು.

ಮಂಡ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಂಸದೆಯಾಗಿ ನಾನು ಒಂದು ವರ್ಷ ಅವಧಿ ಪೂರೈಸಿದ್ದೇನೆ. ಈ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ಮಾಡುವುದೇ ಹೊರತು ರಾಜಕಾರಣ ಮುಖ್ಯವಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಚಾರದಲ್ಲಿ ಪಕ್ಷಗಳು ಯಾವುದು ಎಂಬುದು ಮುಖ್ಯವಲ್ಲ. ಅಭಿವೃದ್ಧಿ ಕಡೆಗೆ ಸರ್ಕಾರದ ಗಮನ ಸೆಳೆಯುವುದೇ ಮುಖ್ಯ. ಪ್ರಧಾನಿಯಿಂದ ಕೇಂದ್ರದ ಎಲ್ಲಾ ಸಚಿವರನ್ನೂ ಭೇಟಿ ಮಾಡಿ ಮಂಡ್ಯ ಜಿಲ್ಲೆಯ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ನನ್ನ ಮನವಿಗೆ ಎಲ್ಲರೂ ಸಕಾರಾತ್ಮಕವಾಗಿ ಬೆಂಬಲ ನೀಡಿದ್ದಾರೆ ಎಂದರು.

ಮೈಷುಗರ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಶೀಘ್ರ ಮೈಷುಗರ್ ಪ್ರಾರಂಭಿಸುವಂತೆಯೂ ಒತ್ತಾಯಿಸಿದ್ದೇನೆ. ಸರ್ಕಾರ ಒ ಅಂಡ್ ಎಂ ಗೆ ಸಹಮತ ವ್ಯಕ್ತಪಡಿಸಿದ್ದು, ಅದೇ ಸೂಕ್ತ ಎಂದು ನನ್ನ ಅಭಿಪ್ರಾಯ ತಿಳಿಸಿದ್ದೇನೆ ಎಂದರು.

ಮೈಷುಗರ್ ಕಾರ್ಖಾನೆ ವಿಚಾರದಲ್ಲಿ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಂಬಂಧಿಸಿದ ಸಚಿವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಅಂತಿಮವಾಗಿ ಮುಖ್ಯಮಂತ್ರಿಗಳ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ ಎಂದು ಹೇಳಿದರು.

ಸಂಸದೆಯಾಗಿ ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಈ ವರ್ಷದಲ್ಲಿ ಕಲಿಯುವುದೇ ಆಗಿತ್ತು. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನ ತರುವುದು, ಇತರೆ ಯೋಜನೆಗಳನ್ನು ತರುವ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಹಲವಾರು ಸಚಿವರನ್ನು ಭೇಟಿ ಮಾಡಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಗಮನ ಸೆಳೆದಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲಿಯುವ ಸಮಯ ಬೇಕಾದಷ್ಟಿದೆ. ಅಷ್ಟೇ ಪ್ರಮಾಣದಲ್ಲಿ ಅಡಚಣೆಗಳೂ ಬರುತ್ತವೆ. ರಾಜಕಾರಣದಲ್ಲಿ ಎಲ್ಲವೂ ಬರುತ್ತೆ. ಕೆಲಸ ಮಾಡುವ ಸಾಧ್ಯತೆ ಇದ್ದರೂ ಕೆಲವು ಸಲ ಸಹಕಾರ ಸಿಗುವುದಿಲ್ಲ. ಈ ಒಂದು ವರ್ಷದ ಹಾದಿಯಲ್ಲಿ ಎಲ್ಲವನ್ನೂಕಲಿಯುವ ಹಂತದಲ್ಲಿ ಇದ್ದೇನೆ ಎಂದರು.