ಕ್ರಿಮಿನಾಶಕ ಮಾತ್ರೆ ಸೇವಿಸಿ ರೈತ ಆತ್ಮಹತ್ಯೆ

ಕ್ರಿಮಿನಾಶಕ ಮಾತ್ರೆ ಸೇವಿಸಿ ರೈತ ಆತ್ಮಹತ್ಯೆ

LK   ¦    Jul 20, 2017 10:46:43 AM (IST)
ಕ್ರಿಮಿನಾಶಕ ಮಾತ್ರೆ ಸೇವಿಸಿ ರೈತ ಆತ್ಮಹತ್ಯೆ

ಕೆ.ಆರ್.ಪೇಟೆ: ಬೆಳೆ ಬೆಳೆಯಲು ಮಾಡಿದ ಸಾಲವನ್ನು ತೀರಿಸಲಾಗದೆ, ಸಾಲಗಾರರ ಕಾಟವನ್ನು ತಡೆಯಲಾರದೆ ರೈತನೊಬ್ಬ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಅಗ್ರಹಾರ ಬಡವಾಣೆಯಲ್ಲಿ ನಡೆದಿದೆ.

ಪಟ್ಟಣದ ಅಗ್ರಹಾರ ಬಡಾವಣೆಯ ನಿವಾಸಿ ರುದ್ರೇಗೌಡ ಅವರ ಪುತ್ರ ಶಂಕರ್ (35) ಆತ್ಮಹತ್ಯೆಗೆ ಶರಣಾದ ದುರ್ದೈವಿ ರೈತ. ಈತ ಮಂಗಳವಾರ ರಾತ್ರಿ ಮನೆಯಲ್ಲಿ ಬೆಳೆಯನ್ನು ರಕ್ಷಿಸಲೆಂದು ತಂದಿಟ್ಟಿದ್ದ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಮುಂದಾಗಿ ಅಸ್ವಸ್ಥಗೊಂಡಿದ್ದರು. ಇದು ಮನೆಯವರಿಗೆ ತಿಳಿದು ಕೂಡಲೇ ಮನೆಯವರು ಆತನನ್ನು ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಎಲ್ಲ ರೀತಿಯ ಚಿಕಿತ್ಸೆ ನೀಡಿದರೂ ಗಂಬೀರ ಪರಿಸ್ಥಿತಿಯಲ್ಲಿದ್ದ ಶಂಕರ್ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ.

ಎರಡು ಎಕರೆ ಜಮೀನು ಹೊಂದಿದ್ದ ಶಂಕರ್ ಗೆ ಹೆಂಡತಿ, ಮಗ ಮತ್ತು ಮಗಳಿದ್ದರು. ಜಮೀನಿನಲ್ಲಿ ಬೆಳೆ ಬೆಳೆಯಲೆಂದು ಶಂಕರ್ ಬ್ಯಾಂಕ್ ಹಾಗೂ ಖಾಸಗಿಯಾಗಿ ಕೈಸಾಲ ಪಡೆದಿದ್ದನು. ಆದರೆ ಬೆಳೆಬೆಳೆಯಲಾಗದೆ ನಷ್ಟವಾಗಿತ್ತಲ್ಲದೆ, ಮಾಡಿದ ಸಾಲಕ್ಕೂ ಬಡ್ಡಿ ಹೆಚ್ಚುತ್ತಾ ಹೋಗಿತ್ತು. ಇದರಿಂದ ನೊಂದ ಶಂಕರ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೆ.ಆರ್.ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಲೇ ಇರುವುದು ಆತಂಕಕ್ಕೀಡು ಮಾಡಿದೆ. ಕಳೆದ ಎರಡು ವರ್ಷಗಳಿಂದ ಕೆಆರ್ ಎಸ್ ಜಲಾಶಯ ಭರ್ತಿಯಾಗದ ಕಾರಣದಿಂದಾಗಿ ಬೆಳೆ ಬೆಳೆಯಲಾರದ ಪರಿಸ್ಥಿತಿ ತಲೆದೋರಿದ್ದು ರೈತರ ಸ್ಥಿತಿ ಚಿಂತಾಜನಕವಾಗಿದ್ದು, ಸಾಲದ ಹೊರೆ ಜಾಸ್ತಿಯಾಗಿದ್ದು, ಅನಿವಾರ್ಯವಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇನ್ನಾದರೂ ಸರ್ಕಾರ ನೊಂದ ರೈತರತ್ತ ಧಾವಿಸಿ ಆತ್ಮಹತ್ಯೆಯನ್ನು ತಡೆಗಟ್ಟಬೇಕಾಗಿದೆ.